ಕಣಿವೆ, ನ. 23 : ದಶಕಗಳ ಹಿಂದಿನಿಂದಲೂ ಸ್ಥಗಿತಗೊಂಡಿದ್ದ ಗೋಣಿಮರೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘ ಭಾನುವಾರದಿಂದ ಪುನರಾರಂಭ ಗೊಂಡಿದೆ. ಹಲವು ಕಾರಣಗಳಿಂದಾಗಿ ದಶಕಗಳ ಹಿಂದಿನಿಂದಲೂ ಸ್ಥಗಿತಗೊಂಡಿದ್ದ ಸಂಘವನ್ನು ಗ್ರಾಮದವರೇ ಆದ ವಾಣಿಜ್ಯ ತೆರಿಗೆ ನಿವೃತ್ತ ಜಂಟಿ ನಿರ್ದೇಶಕ ಎನ್.ಆರ್. ನಾಣಯ್ಯ, ಬಿಬಿಎಂಪಿಯ ನಿವೃತ್ತ ಜಂಟಿ ಆಯುಕ್ತ ಪಿ.ಆರ್. ಪಳಂಗಪ್ಪ ಹಾಗೂ ಪ್ರಾಂಶುಪಾಲ ಎನ್.ಆರ್. ನಿಂಗರಾಜು ಅವರ ಪ್ರಯತ್ನದ ಫಲದಿಂದ ಕಾರ್ಯರೂಪಕ್ಕೆ ಬಂದ ಸಂಘವನ್ನು ಹಾಸನ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಗೋಪಾಲಯ್ಯ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಗೋಪಾಲಯ್ಯ, ಹಾಸನ ಹಾಲು ಒಕ್ಕೂಟ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದೆ. ರೈತರು ಗುಣಮಟ್ಟದ ಹಾಲನ್ನು ಉತ್ಪಾದಿಸಿ ಸಂಘಕ್ಕೆ ಹಾಕುವ ಮೂಲಕ ಸಂಘವನ್ನು ಮಾದರಿ ಸಂಘವಾಗಿಸಬೇಕು.

ಎಚ್.ಡಿ.ರೇವಣ್ಣ ಹಾಸನ ಹಾಲು ಒಕ್ಕೂಟದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಾಗ ಸಂಸ್ಥೆ ಕೇವಲ 25 ಕೋಟಿ ವಹಿವಾಟು ನಡೆಸುತ್ತಿತ್ತು.

ಇದೀಗ ಒಕ್ಕೂಟದಲ್ಲಿ 1600 ಕೋಟಿ ವಹಿವಾಟು ನಡೆಯುತ್ತಿದೆ. ದಿನಂಪ್ರತೀ ಒಕ್ಕೂಟಕ್ಕೆ ಹನ್ನೊಂದು ಲಕ್ಷ ಲೀಟರ್‍ಗೂ ಅಧಿಕ ಹಾಲು ಸಂಗ್ರಹವಾಗುತ್ತಿದೆ.

ಗುಜರಾತ್‍ನ ಅಮೂಲ್ ಮಾದರಿಯಲ್ಲಿ ನಾವು ಬರುವ ಫೆಬ್ರವರಿಯಲ್ಲಿ ಪೆಟ್ ಬಾಟಲ್ ಯೂನಿಟ್ ಆರಂಭಿಸುತ್ತಿದ್ದೇವೆ. ಅಲ್ಲದೇ 300 ಕೋಟಿ ವೆಚ್ಚದಲ್ಲಿ ಮೆಘಾ ಡೈರಿಯನ್ನು ಮಾಡುತ್ತಿದ್ದೇವೆ. ನಮ್ಮಲ್ಲಿ ಪ್ರಸ್ತುತ 170 ಬಗೆಯ ನಂದಿನಿ ಉತ್ಪನ್ನಗಳಿವೆ. ಇದರಲ್ಲಿ 70 ತರಹದ ಐಸ್ ಕ್ರೀಂ ಹಾಗೂ ಪ್ಲೇವರ್ ಮಿಲ್ಕ್ ಉತ್ಪನ್ನಗಳೇ ಇವೆ ಎಂದರು.

ಹಾಸನ ಹಾಲು ಒಕ್ಕೂಟದ ಕೊಡಗು ಜಿಲ್ಲಾ ನಿರ್ದೇಶಕ ಕೆ.ಕೆ.ಹೇಮಂತಕುಮಾರ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಗ್ರಾಮೀಣ ಪ್ರದೇಶಗಳ ಜನರ ಜೀವನ ಹೈನುಗಾರಿಕೆಯನ್ನು ಪ್ರಮುಖವಾಗಿ ಅವಲಂಬಿಸಿದೆ. ಬಹುತೇಕ ಮಹಿಳೆಯರು ಹೈನುಗಾರಿಕೆಗೆ ಒತ್ತು ನೀಡುತ್ತಿರುವುದರಿಂದ ಬಹಳ ದಿನಗಳಿಂದ ಈ ಭಾಗದಲ್ಲಿ ಹಾಲು ಉತ್ಪಾದಕರ ಘಟಕಕ್ಕೆ ಬೇಡಿಕೆ ಇತ್ತು. ಇದೀಗ ಈ ಸಮಸ್ಯೆ ಬಗೆಹರಿದಿದೆ. ಗ್ರಾಮದ ಜನರು ಸ್ವಚ್ಛಂಧವಾದ ಹಾಲನ್ನು ಸಂಘಕ್ಕೆ ಪೂರೈಸುವ ಮೂಲಕ ಉತ್ತಮ ಗುಣಮಟ್ಟ ಕಾಯ್ದುಕೊಳ್ಳಬೇಕು. ಸಂಘವನ್ನು ಬೆಳೆಸುವ ಮೂಲಕ ಆರ್ಥಿಕವಾಗಿ ತಾವು ಬೆಳೆಯಬೇಕೆಂದು ಹೇಮಂತ ಕುಮಾರ್ ಕರೆಕೊಟ್ಟರು.

ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಎನ್.ಆರ್. ನಾಣಯ್ಯ ಮಾತನಾಡಿ, ಗ್ರಾಮೀಣ ಪ್ರದೇಶಗಳ ಜನರು ಕೃಷಿಯೊಂದಿಗೆ ಹೈನುಗಾರಿಕೆಯನ್ನು ಅಭಿವೃದ್ದಿ ಪಡಿಸಿದರೆ ಸ್ವಾವಲಂಬಿ ಬದುಕು ಸಾಧ್ಯವಾಗುತ್ತದೆ. ಮೊದಲು ಗ್ರಾಮದಲ್ಲಿನ ಕೆರೆಕಟ್ಟೆಗಳನ್ನು ಸಂರಕ್ಷಿಸಿ ಅವುಗಳನ್ನು ಅಭಿವೃದ್ದಿಪಡಿಸಿದರೆ ಅಂತರ್ಜಲದ ಮಟ್ಟ ಸುಧಾರಿಸುತ್ತದೆ. ಇದರಿಂದ ಕೃಷಿಗಲ್ಲದೇ ಜಾನುವಾರು ಗಳಿಗೂ ಉಪಯುಕ್ತವಾಗುತ್ತದೆ ಎಂದು ಹೇಳಿದರು.

ಗ್ರಾಮದವರೇ ಆದ ಬಾಗಲೂರು ಸರ್ಕಾರಿ ಪಿಯು ಕಾಲೇಜು ಪ್ರಾಂಶುಪಾಲ ಎನ್.ಆರ್. ನಿಂಗರಾಜು ಮಾತನಾಡಿ, ಗ್ರಾಮದ ಜನರು ಜಡತ್ವದಿಂದ ಹೊರಬರ ಬೇಕು. ಸದಾ ಚಟುವಟಿಕೆಗಳಿಂದ ಇರುವಂತಹ ಯಾವುದಾದರೂ ಕೆಲಸ ಕಾರ್ಯಗಳಲ್ಲಿ ಸಕ್ರಿಯರಾಗ ಬೇಕು ಎಂದರು.

ಬಿಬಿಎಂಪಿಯ ನಿವೃತ್ತ ಜಂಟಿ ಆಯುಕ್ತ ಪಿ.ಆರ್.ಪಳಂಗಪ್ಪ, ಹಾಸನ ಹಾಲು ಒಕ್ಕೂಟದ ಶೇಖರಣೆ ವಿಭಾಗದ ವ್ಯವಸ್ಥಾಪಕ ಜಯಪ್ರಕಾಶ್, ಹೆಬ್ಬಾಲೆ ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಆರ್.ಶ್ರೀನಿವಾಸ್, ತಾಲೂಕು ಪಂಚಾಯಿತಿ ಸದಸ್ಯೆ ಸವಿತಾ ಈರಪ್ಪ, ಸೋಮವಾರಪೇಟೆ ತಾಲೂಕು ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಬಾದಾಮಿ, ಧರ್ಮಸ್ಥಳ ಗ್ರಾಮಾ ಭಿವೃದ್ದಿ ಯೋಜನೆಯ ಅಧಿಕಾರಿ ಪ್ರಕಾಶ್, ಕೂಡಿಗೆ ಹಾಲಿನ ಡೇರಿಯ ವಿಸ್ತರಣಾಧಿಕಾರಿ ಬಿ.ವಿ.ವೀಣಾ, ಗೋಣಿಮರೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷೆ ಕೋಮಲ ಧರ್ಮಪ್ಪ, ಕಾರ್ಯದರ್ಶಿ ಶಾಮಲಾ ತಾರಣ್ಣಯ್ಯ, ಗಣಗೂರು ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಕಾವೇರಿ ಇದ್ದರು.