ಶನಿವಾರಸಂತೆ, ನ. 22: ಮಕ್ಕಳು ಹಾಗೂ ಸಾರ್ವಜನಿಕರಲ್ಲಿ ಓದುವ ಹವ್ಯಾಸ, ಆಸಕ್ತಿಯನ್ನು ಮೂಡಿಸುವ ಉದ್ದೇಶದಿಂದ ಓದುವ ಬೆಳಕು ಎಂಬ ವಿನೂತನ ಯೋಜನೆ ಜಾರಿಗೆ ಬಂದಿದೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹರೀಶ್ ಅಭಿಪ್ರಾಯಪಟ್ಟರು.
ಸಮೀಪದ ಕೊಡ್ಲಿಪೇಟೆ ಗ್ರಂಥಾಲಯದಲ್ಲಿ ನಡೆದ ಓದುವ ಬೆಳಕು ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಜ್ಞಾನ ಹೆಚ್ಚಿಸಿಕೊಳ್ಳಲು ಪುಸ್ತಕ ಪೂರಕವಾಗುತ್ತದೆ. ಗ್ರಂಥಾಲಯದಲ್ಲಿ ಹೆಸರು ನೋಂದಣಿ ಮಾಡಿಸಿಕೊಳ್ಳುವ ಮೂಲಕ ಪುಸ್ತಕಗಳನ್ನು, ಖ್ಯಾತ ಸಾಹಿತಿಗಳ ಕೃತಿಗಳನ್ನು ಓದುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ 20ಕ್ಕೂ ಅಧಿಕ ಮಕ್ಕಳಿಗೆ ಉಚಿತವಾಗಿ ಗ್ರಂಥಾಲಯದ ಸದಸ್ಯತ್ವ ನೋಂದಣಿ ಮಾಡಲಾಯಿತು. ಗ್ರಂಥಾಲಯ ಕೇಂದ್ರದ ವತಿಯಿಂದ ಸಮಾಜ ಸೇವಕ ಅಣ್ಣಪ್ಪ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಮಕ್ಕಳಿಗೆ ಆಟೋಟ ಸ್ಪರ್ಧೆ ನಡೆಸಿ ಬಹುಮಾನ ವಿತರಿಸಲಾಯಿತು.
ಗ್ರಂಥಾಲಯ ಮೇಲ್ವಿಚಾರಕಿ ಮಮತಾ ಮಾತನಾಡಿದರು. ಸಮಾಜ ಸೇವಕ ರಾಜೇಶ್, ಶಿಕ್ಷಕ ಡಿ.ಪಿ. ಸತೀಶ್, ಪ್ರಮುಖರಾದ ಪರಮೇಶ್, ಸ್ವಾತಿ, ದೀಪು, ನಂದೀಶ್, ಲತಾ, ವಿದ್ಯಾರ್ಥಿಗಳು ಹಾಜರಿದ್ದರು.