ಕುಶಾಲನಗರ, ನ. 22: ಕುಶಾಲನಗರ ಬಳಿಯ ಗಂಧದಕೋಟಿ ಗ್ರಾಮದ ಬಡಾವಣೆಯ ರಸ್ತೆಯಲ್ಲಿ ಒಂಟಿ ಸಲಗವೊಂದು ರಾತ್ರಿ ವೇಳೆ ಅಡ್ಡಾಡಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಭಾನುವಾರ ತಡರಾತ್ರಿ ಗ್ರಾಮದೊಳಗೆ ಪ್ರವೇಶಿಸಿದ ಕಾಡಾನೆ ಗ್ರಾಮದ ನಿವೃತ್ತ ಬಿಎಸ್‍ಎಫ್ ಯೋಧ ಪಿ.ಕೆ.ಯಾದವರಾವ್ ಎಂಬವರಿಗೆ ಸೇರಿದ ಜಾಗಕ್ಕೆ ನುಗ್ಗಿದ್ದು ನಂತರ ರಸ್ತೆಯಲ್ಲಿ ಓಡಾಡಿರುವ ದೃಶ್ಯ ಸ್ಥಳದಲ್ಲಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಗೇಟ್ ಶಬ್ಧ ಕೇಳಿ ಯಾದವರಾವ್ ಕಿಟಕಿ ಮೂಲಕ ನೋಡಿದಾಗ ರಸ್ತೆಯಲ್ಲಿ ಕಾಡಾನೆ ಅಡ್ಡಾಡುತ್ತಿರುವುದು ಕಂಡುಬಂದು ಸ್ವಲ್ಪಕಾಲ ಆತಂಕಕ್ಕೆ ಒಳಗಾಗಿದ್ದರು. ಪಟಾಕಿ ಸಿಡಿಸಿದ ಸಂದರ್ಭ ಬೆದರಿದ ಕಾಡಾನೆ ಸಮೀಪದ ಫಾರಂಗಳತ್ತ ನುಗ್ಗಿದೆ. ಅಲ್ಲಿಂದ ರಸ್ತೆ ಬದಿಯ ಹೊಲದಲ್ಲಿ ರಾಶಿ ಹಾಕಿದ್ದ ರಾಗಿ, ಜೋಳವನ್ನು ತಿಂದು ನಸುಕಿನ ಜಾವ ಕಾಡಿನತ್ತ ತೆರಳಿರುವುದಾಗಿ ಪ್ರತ್ಯಕ್ಷದರ್ಶಿ ಯಾದವರಾವ್ ತಿಳಿಸಿದ್ದಾರೆ. ಮಾಹಿತಿ ತಿಳಿದ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.