ಹೆಬ್ಬಾಲೆ, ನ. 21: ರಾಜ್ಯ ಸಹಕಾರ ಯೂನಿಯನ್ ನಿಯಮಿತ ಬೆಂಗಳೂರು, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಸೋಮವಾರಪೇಟೆ ತಾಲೂಕು ಸಹಕಾರ ಒಕ್ಕೂಟ, ಶಿರಂಗಾಲ, ತೊರೆನೂರು ಹಾಗೂ ಹೆಬ್ಬಾಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಂಯುಕ್ತ ಆಶ್ರಯದಲ್ಲಿ ಶಿರಂಗಾಲ ದೇವಾಲಯ ಸಮಿತಿ ಸಭಾಂಗಣದಲ್ಲಿ 67ನೇ ಅಖಿಲ ಭಾರತ ಸಹಕಾರ ಸಪ್ತಾಹ ನಡೆಯಿತು.
ಯುವಜನ, ಮಹಿಳೆ ಮತ್ತು ಅಬಲವರ್ಗದವರಿಗಾಗಿ ಸಹಕಾರ ಸಂಸ್ಥೆಗಳ ಎಂಬ ಧ್ಯೇಯವಾಕ್ಯದಲ್ಲಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿಯಮಿತದ ಅಧ್ಯಕ್ಷ ಎ.ಕೆ. ಮನು ಮುತ್ತಪ್ಪ ಮಾತನಾಡಿ, ಗ್ರಾಮೀಣ ಹಾಗೂ ರೈತರ ಸಮೃದ್ಧಿಗಾಗಿ ಸಹಕಾರ ಸಂಸ್ಥೆಗಳ ಪಾತ್ರ ತುಂಬ ಮಹತ್ವದಾಗಿದೆ ಎಂದು ಹೇಳಿದರು.
ಕೊಡಗು ಜಿಲ್ಲಾ ಸಹಕಾರ ಇಲಾಖೆಯ ನಿರ್ಬಂಧಕ ಸಲೀಂ ಮಾತನಾಡಿ, ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು ಜನ್ಮ ದಿನದಂದು ಪ್ರಾರಂಭವಾಗುವ ಸಹಕಾರ ಸಪ್ತಾಹ ನೆಹರು ಅವರು ಸಹಕಾರ ಚಳುವಳಿ ಕುರಿತ ಆಸಕ್ತಿಯನ್ನು ನೆನಪಿಸುತ್ತದೆ. ನವಭಾರತ ನಿರ್ಮಾಣದಲ್ಲಿ ಅವರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಅದರಿಂದಾಗಿ ಅವರನ್ನು ನೆನೆದು ಸಹಕಾರ ಚಳುವಳಿ ಸಂಕೇತವಾಗಿ ಸಹಕಾರ ಸಪ್ತಾಹವನ್ನು ಆಚರಿಸಲಾಗುತ್ತಿದೆ ಎಂದರು.
ತೊರೆನೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್. ಕೃಷ್ಣೇಗೌಡ ಮಾತನಾಡಿ, ಸಹಕಾರ ಸಂಘಗಳಲ್ಲಿ ಸಾಲ ಪಡೆಯುವುದು ಸಾಲದ ಉದ್ದೇಶವನ್ನು ಸಂಪೂರ್ಣವಾಗಿ ತಿಳಿದುಕೊಂಡು ಸಾಲ ನೀಡಿದರೆ ಮಾತ್ರ ಸಹಕಾರ ಸಂಘಗಳು ಬೆಳೆಯಲು ಸಾಧ್ಯ ಎಂದು ಹೇಳಿದರು. ಶಿರಂಗಾಲ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಎಸ್. ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು.
ಹಿರಿಯ ಸಹಕಾರಿಗಳಾದ ಎಸ್.ವಿ. ನಂಜುಂಡಪ್ಪ, ಎಸ್.ಪಿ. ರಾಜು, ಎನ್.ಬಿ. ಪಾರ್ಥ, ಬಿ.ಎಸ್. ಬಸವಣಯ್ಯ, ಪಿ.ಸಿ. ಬೇಲಯ್ಯ ಅವರನ್ನು ಸನ್ಮಾನಿಸಲಾಯಿತು. ಸನ್ಮಾನಿತರಾದ ಎಸ್.ವಿ. ನಂಜುಂಡಪ್ಪ, ಎಸ್.ಪಿ. ರಾಜು ಮಾತನಾಡಿದರು. ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕಿ ಉಷಾ ತೇಜಸ್ವಿ, ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ ನಿರ್ದೇಶಕ ಹೆಚ್.ಎನ್. ರಾಮಚಂದ್ರ, ಮುಖ್ಯ ಕಾರ್ಯನಿರ್ವಾಣಾಧಿಕಾರಿ ಯೋಗೇಂದ್ರ ನಾಯಕ್, ಹೆಬ್ಬಾಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೆಚ್.ಜೆ. ಪರಮೇಶ್, ಶಿರಂಗಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಪಿ.ಸಿ. ಬೇಲಯ್ಯ, ನಿರ್ದೇಶಕರಾದ ಸಿ.ಎನ್. ಲೋಕೇಶ್, ಎನ್.ಎಸ್. ರಮೇಶ್, ಎಸ್.ಎಸ್. ಕೃಷ್ಣ, ಎಸ್.ಎ. ನಾಗಮ್ಮ, ಪದ್ಮಬಾಯಿ, ಎಸ್.ಬಿ. ರವಿ, ಎಸ್.ಸಿ. ರುದ್ರಪ್ಪ, ತೊರೆನೂರು ಸಂಘದ ನಿರ್ದೇಶಕ ಶಿವಕುಮಾರ್, ಹೆಬ್ಬಾಲೆ ಸಂಘದ ಸ್ವಾಮಿ, ವಿವಿಧ ಸಹಕಾರ ಸಂಘಗಳ ಸಿಒಗಳಾದ ಜೀವನ್, ಪ್ರೀತು, ಗಿರೀಶ್, ಲೀಲಾಕುಮಾರ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.