ಕುಶಾಲನಗರ, ನ. 21: ಕುಶಾಲನಗರದ ಐತಿಹಾಸಿಕ ಮಹಾಗಣಪತಿ ದೇವಾಲಯದ ಜಾತ್ರೆಗೆ ಈ ಬಾರಿ ಕೊರೊನಾ ಕರಿಛಾಯೆ ಆವರಿಸಿದ್ದು 100ನೇ ಗೋಪ್ರದರ್ಶನ ಮತ್ತು ಜಾತ್ರೆ ಮಹೋತ್ಸವಗಳಿಗೆ ಅಡ್ಡಿಯುಂಟಾಗಿದೆ. ವರ್ಷಂಪ್ರತಿ ಅದ್ಧೂರಿಯಾಗಿ ನಡೆಯುತ್ತಿದ್ದ ಗಣಪತಿ ಜಾತ್ರೆಯಲ್ಲಿ ಈ ಬಾರಿ ಕೇವಲ ಧಾರ್ಮಿಕ ಕಾರ್ಯಕ್ರಮಗಳಷ್ಟೇ ಸೀಮಿತವಾಗಿದ್ದು ವರ್ಷಂಪ್ರತಿ ನಡೆಯುವ ಗೋವುಗಳ ಪ್ರದರ್ಶನ, ಜಾತ್ರೆ, ಮನರಂಜನಾ ಪಾರ್ಕ್, ರಥೋತ್ಸವದಂದು ನಡೆಯುತ್ತಿದ್ದ ಅನ್ನದಾನ ಮತ್ತು ಕೆಲವು ದಿನಗಳ ಕಾಲ ಹಮ್ಮಿಕೊಳ್ಳಲಾಗುತ್ತಿದ್ದ ಸಾಂಸ್ಕøತಿಕ ಚಟುವಟಿಕೆಗಳು ರದ್ದುಗೊಂಡಿವೆ.
ಕೋವಿಡ್-19 ಮಾರ್ಗಸೂಚಿಯಂತೆ ಜಿಲ್ಲಾಡಳಿತ ಜಾತ್ರೆ ನಡೆಸಲು ಷರತ್ತಿನ ಅನುಮತಿ ನೀಡಿದ್ದು ಅದ್ಧೂರಿಯಾಗಿ ನಡೆಯುತ್ತಿದ್ದ ಗಣಪತಿ ರಥೋತ್ಸವಕ್ಕೆ ಕೂಡ ಈ ಬಾರಿ ತಡೆ ಉಂಟಾಗಿದೆ.
ಡಿಸೆಂಬರ್ 2 ರಿಂದ 9 ದಿನಗಳ ಕಾಲ ನಡೆಯುತ್ತಿದ್ದ ಮಹಾಗಣಪತಿ ಜಾತ್ರೆಯ ಅಂಗವಾಗಿ ಡಿಸೆಂಬರ್ 4 ರಂದು ರಥೋತ್ಸವ ನಡೆಯಲಿದೆ. ದಿನನಿತ್ಯ ದೇವರ ಮೆರವಣಿಗೆ ಪಟ್ಟಣದ ಬೀದಿಗಳಲ್ಲಿ ಸಾಗುತ್ತಿತ್ತು. ಈ ಬಾರಿ ನಿಯಮಾನುಸಾರ ಧಾರ್ಮಿಕ ಕಾರ್ಯಕ್ರಮಗಳನ್ನು ಹೊರತುಪಡಿಸಿದಂತೆ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳನ್ನು ನಡೆಸಲು ಸರಕಾರದ ಅನುಮತಿ ದೊರೆತಿಲ್ಲ ಎಂದು ತಿಳಿದುಬಂದಿದೆ.
ಸ್ಥಳೀಯ ಆಡಳಿತದ ಸೂಚನೆಯಂತೆ ಜಾತ್ರಾ ಮಹೋತ್ಸವ ನಡೆಸಬೇಕಾಗಿದ್ದು ಈ ನಿಟ್ಟಿನಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರದಂತೆ ಕಟ್ಟುನಿಟ್ಟಿನ ಸೂಚನೆ ಕೂಡ ನೀಡಲಾಗಿದೆ. ಈ ಎಲ್ಲಾ ಬೆಳವಣಿಗೆ ಹಿನ್ನೆಲೆ ಗಣಪತಿ ದೇವಾಲಯ ಆಡಳಿತ ಮಂಡಳಿ ಚರ್ಚೆ ನಡೆಸುತ್ತಿದ್ದು ಕೋವಿಡ್-19 ನಿಯಮಾನುಸಾರ ಜಾತ್ರೆ ನಡೆಸಲು ಚಿಂತನೆ ಹರಿಸಿದೆ. ಈ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಕುಶಾಲನಗರ ಗಣಪತಿ ದೇವಸ್ಥಾನ ಸಮಿತಿ ಅಧ್ಯಕ್ಷರಾದ ವಸಂತಕುಮಾರ್, ಜಿಲ್ಲಾಡಳಿತದ ಸೂಚನೆಯಂತೆ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಈ ಸಂದರ್ಭ ನಿಯಮ ಪಾಲಿಸುವ ನಿಟ್ಟಿನಲ್ಲಿ ಎಲ್ಲಾ ಸೂಚನೆಗಳನ್ನು ಪಾಲಿಸಲಾಗುವುದು ಎಂದು ತಿಳಿಸಿದ್ದಾರೆ.
ವರ್ಷಂಪ್ರತಿ ನಡೆಯುತ್ತಿದ್ದ ಅನ್ನದಾನ ಕಾರ್ಯಕ್ರಮ ಕೂಡ ಈ ಬಾರಿ ಸ್ಥಗಿತಗೊಳಿಸಲಾಗಿದ್ದು ಸುತ್ತಮುತ್ತಲ ವ್ಯಾಪ್ತಿಯಿಂದ ಗೋಪ್ರದರ್ಶನದಲ್ಲಿ ಪಾಲ್ಗೊಳ್ಳುತ್ತಿದ್ದ ರೈತರು ಕೂಡ ತಮ್ಮ ರಾಸುಗಳನ್ನು ಪ್ರದರ್ಶನಕ್ಕೆ ತರುವಂತಿಲ್ಲ. ಗುಂಡುರಾವ್ ಮೈದಾನದಲ್ಲಿ ನಡೆಯುತ್ತಿದ್ದ 10 ದಿನಗಳ ಜಾತ್ರೆ ಕೂಡ ಈ ಬಾರಿ ನಿಷೇದಕ್ಕೆ ಒಳಪಟ್ಟಿದ್ದು ಸಾಂಸ್ಕøತಿಕ ಕಾರ್ಯಕ್ರಮಗಳು ಕೂಡ ರದ್ದುಗೊಳ್ಳಲಿವೆ. ಪ್ರತಿವರ್ಷ ರಥೋತ್ಸವ ಹಾಗೂ ಜಾತ್ರೆ ಎರಡರಲ್ಲಿಯೂ ಪಾಲ್ಗೊಳ್ಳುತ್ತಿದ್ದೇವೆ. ಈ ಬಾರಿ ಕೊರೊನಾದಿಂದ ಅಡ್ಡಿಯುಂಟಾಗಿರುವುದು ಬೇಸರ ತಂದಿದೆ ಎಂದು ಸ್ಥಳೀಯ ಭಕ್ತರಾದ ಕವಿತಾ ವಿ. ರಾಮ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
100ನೇ ವರ್ಷದ ಗೋ ಪ್ರದರ್ಶನ ಮತ್ತು ಜಾತ್ರೆಯನ್ನು ಈ ಸಾಲಿನಲ್ಲಿ ಅದ್ಧೂರಿಯಾಗಿ ನಡೆಸುವ ಬಗ್ಗೆ ಕಳೆದ ಸಾಲಿನಲ್ಲಿ ಚರ್ಚೆ ನಡೆಸಿದ್ದು ಈ ಬಾರಿ ಕೊರೊನಾದ ಕರಿಛಾಯೆ ಭಕ್ತಾದಿಗಳ ಎಲ್ಲಾ ಕನಸುಗಳಿಗೂ ತಣ್ಣೀರು ಎರಚಿದಂತಾಗಿದೆ.
- ಚಂದ್ರಮೋಹನ್