ಮಧ್ಯಭಾರತ, ದಕ್ಷಿಣ ಭಾರತ ಹಾಗೂ ಆಫ್ರಿಕಗಳ ನಡುವೆ ಭೂಸಂಪರ್ಕವಿತ್ತು. ಇಂಡೋ ಮಡ್‍ಗಾಸ್ಕರ್ ಭೂಖಂಡದ ಈ ಸಂಪರ್ಕ ನೀರಿನಲ್ಲಿ ಮುಳುಗಿದಾಗ ಉತ್ತರ ಭಾರತದ ಹಿಮಾಲಯ, ಟಿಬೆಟ್ ಹಾಗೂ ಚೈನಾದ ಬಹಳಷ್ಟು ಭೂಭಾಗ ಮತ್ತು ಅರಬ್ಬಿ ಸಮುದ್ರವು ಉದಿಸಿದವು ಎಂದೂ ಅವರು ಹೇಳುತ್ತಾರೆ. ಇದಲ್ಲದೆ ಆಫ್ರಿಕನ್ ಹಾಗೂ ದ್ರಾವಿಡ ಭಾಷಾ ಪದ ಶಬ್ದಗಳಲ್ಲಿ ಎಷ್ಟೋ ಕಡೆ ಸಾಮ್ಯವಿದೆ. ರಿಮೂರಿಯನ್ ಸಂಸ್ಕøತಿಯ ಪಳೆಯುಳಿಕೆಗಳಾಗಿ ಉಳಿದಿರುವ ಕೇರಳದ ಚೋಳನಾಯಿಗ, ಬಿಹಾರದ ಮುಂಡಾ ಆದಿವಾಸಿಗಳು, ದಕ್ಷಿಣ ಕನ್ನಡದ ಕೊರಗರು ಇವರುಗಳ ಆಚಾರಗಳು ದ್ರಾವಿಡ ಸಂತತಿಯ ಪರಾಕಾಷ್ಠೆಯ ಸಂದರ್ಭಗಳಾಗಿವೆ. ಇದೆಲ್ಲ ಭಾರತ, ಆಫ್ರಿಕಾ, ಆಸ್ಟ್ರೇಲಿಯಾ ಒಂದೇ ಭೂಖಂಡವಾಗಿತ್ತು. ಎಂಬದನ್ನು ಪುಷ್ಟೀಕರಿಸುತ್ತವೆ ಎಂಬ ಅಭಿಪ್ರಾಯ ಭಾಷಾ ಇತಿಹಾಸ ವಿಜ್ಞಾನಿಗಳದ್ದಾಗಿದೆ. ಇದಕ್ಕೆಲ್ಲ ಅರಬ್ಬಿ ಸಮುದ್ರದ ತಳದಲ್ಲಿ ನೂತನ ಪರ್ವತವಿರುವುದನ್ನು, ಕೊಚ್ಚಿಯಿಂದ ನೈಋತ್ಯ ದಿಕ್ಕಿನಲ್ಲಿ ಸುಮಾರು 500 ಕಿ. ಮೀ. ದೂರದಲ್ಲಿನ ಸಮುದ್ರದ ಗರ್ಭದಲ್ಲಿ 2464 ಮೀಟರ್ ಎತ್ತರದ ‘ಸಾಗರ ಕನ್ಯಾಸಮುದ್ರದ ಪರ್ವತ’ವನ್ನು ಸಾಗರಗರ್ಭ ಪತ್ತೆ ಮಾಡಿರುವುದು ಪೋಷಣೆ ದೊರಕಿಸುವಂತಿದೆ. ಅಂದರೆ ಈ ಪರ್ವತ ಹಾಗೂ ಭೂ ಸಂಪರ್ಕವು ಮುಳುಗಿದ ಸಮಯದಲ್ಲಿ ಕೊಡಗಿನ ಪಶ್ಚಿಮ ಘಟ್ಟಗಳ ಏರೂ ಹೆಚ್ಚಿತು. ಕಾವೇರಿ ದಕ್ಷಿಣ ಭಾರತದ ಎರಡೂ ಬದಿಯನ್ನು ದಾಟಿಯೂ ಭೂಪ್ರದೇಶದಲ್ಲಿ ಹರಿಯುತ್ತಿತ್ತು ಎಂದಾಗುತ್ತದೆ. ಆದರೆ ಕೋಟಿ ಕೋಟಿ ವರ್ಷಗಳಿಂದ ನಡೆಯುತ್ತ ಬಂದ ಬದಲಾವಣೆ ಸುಮಾರು 10 ಲಕ್ಷ ವರುಷಗಳ ಹಿಂದೆ ಕಾವೇರಿಯ ಮಟ್ಟಿಗೆ ಒಂದು ಸ್ಪಷ್ಪ ಖಚಿತ ಬದಲಾವಣೆಯ ಸ್ವರೂಪವನ್ನು ತಂದುಕೊಟ್ಟಿತು ಎನ್ನಬಹುದು. ಭೂ ಸಂಪರ್ಕದ ವಾದಕ್ಕೆ ಪೋಷಕವಾಗಿ ಆಫ್ರಿಕೆಯಲ್ಲಿ ಕರ್ನಾಟಕದ 10 ಲಕ್ಷ ವರ್ಷಗಳ ಹಿಂದಿನ ಮಾನವನ ತಲೆಬುರುಡೆಗಳು ಲಭ್ಯವಾಗಿರುವುದನ್ನು ಗಮನಿಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ಏಳುವ ಪ್ರಶ್ನೆಗಳೆಂದರೆ 1. ಪಶ್ಚಿಮಮುಖ ಬೃಹತ್ ನದಿಯೊಂದರ ಅವಶೇಷವಾಗಿ ಕೇರಳದಲ್ಲಿ ಹರಿವ ಭರತ ಪುಳುವಿನ ಉಗಮ ಕೇರಳದಲ್ಲಿಯೇ, ಕೊಡಗಿನಲ್ಲಿಯೇ 2. ಕಾವೇರಿಯ ಒಂದು ಕಾಲದ ಕವಲಾದ ‘ಕೆಳಕಾವೇರಿ’ಯು ಕೊಡಗಿನಲ್ಲಿದ್ದು, ಅದರ ಪಥವನ್ನು ಆಕ್ರಮಿಸಿದ ನದಿ ಭರತಪುಳವು ಎಂದಾದರೆ, ಕೊಡಗಿನ ‘ಬರಪೊಳೆಯೆ’ ಕೇರಳದ ಭರತ್‍ಪುಳವು ಆಗಿರಬಹುದೆ ? ಇಂತೆಲ್ಲಾ ಪ್ರಾಚೀನತೆಯ ಹಿನ್ನೆಲೆಯ ದಕ್ಷಿಣ ಭಾರತದ ಕಾವೇರಿ, ಉತ್ತರ ಭಾರತದ ಗಂಗೆಗಿಂತ ಪ್ರಾಚೀನಳಲ್ಲವೆ ? ಎಂಬುದಾಗಿವೆ.

ಕೊಡಗಿನ ಪಶ್ಚಿಮ ಗಡಿಯ ಬಹಳಷ್ಟು ಭಾಗವು ಸಮುದ್ರ ತೀರದಿಂದ ಸುಮಾರು 20-30 ಮೈಲಿ ದೂರದಲ್ಲಿದೆ. ಕೊಡಗಿನಲ್ಲಿ ಹರಿವ ನದಿಗಳು ಸತತ ಹರಿವ ನದಿಗಳೇ ವಿನಾ ವಿಶಾಲವಾದ ನದಿಗಳಲ್ಲ. ಹೆಚ್ಚಿನ ಹೊಳೆಗಳು ಪೂರ್ವಕ್ಕೆ ಹರಿಯುತ್ತವೆ. ಅವುಗಳಲ್ಲಿ ಪಶ್ಚಿಮಘಟ್ಟ, ನಾಡಿನ ನಡುವಿನ ಬೆಟ್ಟಗುಡ್ಡ ಕಣಿವೆಗಳಿಂದ ಬರುವ ಹನ್ನೆರಡು ಹೊಳೆಗಳು ಇಂದಿಗೂ ಪೂರ್ವಮುಖಿಯಾಗಿ ಹರಿಯುತ್ತಿರುವ ಕಾವೇರಿಯ ಕವಲಿಗೆ ಸೇರುವಲ್ಲಿ ಬಹಳಷ್ಟು ಪ್ರಮಾಣದಲ್ಲಿ ನೀರನ್ನು ತುಂಬಿಸುತ್ತವೆ. ಜಿಯೋಲಾಜಿಕಲ್ ಅವಧಿಯಲ್ಲಿ ಬಹುಶಃ ಈ ಮೂರ್ವಮುಖಿ ಕವಲಿಗಿಂತ ಕಾವೇರಿಯ ಪಶ್ಚಿಮಮುಖಿ ಕವಲು ವಿಶಾಲವಾಗಿದ್ದಂತೆ ತೋರುತ್ತದೆ. ಇಂದು ಪಶ್ಚಿಮಕ್ಕೆ ಹರಿವ ಮುಖ್ಯ ಹೊಳೆ ಬರಪೊಳೆಯು ಪ್ರಾಚೀನ ಕಾಲದಲ್ಲಿ ಪಶ್ಚಿಮ ಘಟ್ಟಗಳ ಏರು ಹೆಚ್ಚಾಗುವ ಮುನ್ನ ಪೂರ್ವಕ್ಕೆ ಹರಿಯುತ್ತಿದ್ದು ಕಾವೇರಿ ಕವಲನ್ನು ಸೇರುತ್ತಿದ್ದಿರಬಹುದು ಎಂಬ ಅಭಿಪ್ರಾಯವೂ ಇದೆ. ಜೊತೆಗೆ ಅರವತೊಕ್ಕಲು ಗ್ರಾಮದ ಬಳಿ ಹುಟ್ಟುವ ಮಹಾಂದೋಡು ಬೆಟ್ಟಿಯನ ನಾಡಿನ ಅನೇಕ ತೋಡುಗಳನ್ನು ಕೂಡಿಕೊಂಡು ಪ್ರಾಚೀನದಲ್ಲಿ ‘ಮಾನಂತೋಡಿ’ಯ ಮೂಲಕ ದಕ್ಷಿಣಕ್ಕೆ ಸಾಗಿ ಕೇರಳದ ಪಾಲ್ಘಾಟ್‍ವರೆಗೆ ಸಾಗಿ ನಂತರ ಪಶ್ಚಿಮಕ್ಕೆ (ಕೇರಳದ ನೈಋತ್ಯ ಭಾಗ) ತಿರುಗುತ್ತಿದ್ದಂತೆ ಭಾಸವಾಗುತ್ತದೆ. ಮಾನಂತೋಡಿ ಪ್ರದೇಶದ ಎತ್ತರವೂ ಪಶ್ಚಿಮಘಟ್ಟಗಳ ಏರು ಹೆಚ್ಚಿದಾಗ ಹೆಚ್ಚಿರಬೇಕು. ‘ಮಹಾಂತೋಡು’ವಿನ ಇಂದಿನ ರೂಪ ‘ಮಾನಂತೋಡಿ’ ಆಗಿದೆ. ಮತ್ತೆ ಕೊಡಗು - ಕೇರಳ ಗಡಿಯ ಮಾಕುಟ್ಟದ ಬಳಿ ಹಾದು ಹೋಗುವ ಇಂದಿನ ಬರಪೊಳೆಯು ಕೇರಳದ ವಾಯವ್ಯದಲ್ಲಿನ ಚರಕಲ್‍ನ ಬಳಿ ಸಮುದ್ರ ಸೇರುತ್ತದೆ. (‘ಬಲ್ಯಪಥೇಮಿ’ ಎಂಬ ಹೆಸರೂ ಉಂಟು) ‘ಮಾಕುಟ್ಟ’ವು ಮಹಾಕೂಟ ಎಂಬ ಶಬ್ದವಾಗಿದ್ದಿರಬೇಕು. ಮಹಾಂದೋಡುವಿನ ಪಥ ಹಾಗೂ ಬರಪೊಳೆಯ ಇಂದಿನ ಪಥದ ನಡುವೆ ಪಾಲ್ಘಾಟ್ ನೆಲೆ ಕಾಣ ಬರುವಲ್ಲಿ ಕಾವೇರಿಯ ಗೆರೆಯ ಎರಡು ಬಂಡೆಗಳು ಈ ಪಥಗಳಾಗಿ ದ್ದಿರಬೇಕೆಂದು ತೋರುತ್ತದೆ. ಅಂದರೆ ಕಾವೇರಿಯ ಪಶ್ಚಿಮ ಮಾರ್ಗದಲ್ಲಿ ಎರಡು ಕವಲುಗಳಿದ್ದು, ಪೂರ್ವಕ್ಕೆ ಒಂದಿದ್ದು, ಪಶ್ಚಿಮಘಟ್ಟಗಳ ಏರಿನ ನಂತರ ಪೂರ್ವಮುಖ ಕವಲಿನ ಅಸ್ತಿತ್ವ ಮಾತ್ರ ಉಳಿದಂತಿದೆ ಹಾಗೂ ಪಶ್ಚಿಮಮುಖಿ ಕಾವೇರಿಯು ಪೂರ್ವದ ಕವಲಿನೊಡನೆ ಐಕ್ಯವಾಗಿರುವಂತಿದೆ.

‘ಬರಪೊಳೆ’ (ಭರತಪೊಳೆ-ಉಕ್ಕಿ ಹರಿವ ಹೊಳೆ)ಯು ‘ಭರತಪುಳ’ವು ಎಂಬ ಶಬ್ದದ ಕೊಡವ ಭಾಷೆಯ ರೂಪವೆನಿಸುತ್ತದೆ. ಬ್ರಹ್ಮಗಿರಿ ಶ್ರೇಣಿಯ ಮಲೆನಾಡು ಬಾಡಗಕೇರಿ ಬಳಿಯ ತುಂಬೆಮಲೆಯ ಶಿಖರದಲ್ಲಿ ಬರಪೊಳೆ ಹುಟ್ಟುತ್ತದೆ. ಅಲ್ಲಿಂದ ಹತ್ತು ಮೈಲಿ ಪೂರ್ವಕ್ಕೆ ಹರಿದು ಬೊಮ್ಮಂಜಿಯ ಕಿಟ್ಟಪೊಳೆಯನ್ನು ಕೂಡುತ್ತದೆ. ನಂತರ ಕಿಕ್ಕಟ್ಟು ಎಂಬಲ್ಲಿ ಉತ್ತರಕ್ಕೆ ತಿರುಗುತ್ತದೆ. ಅಲ್ಲಿಂದ ಮುಂದೆ ಪಶ್ಚಿಮಕ್ಕೆ ತಿರುಗುವಲ್ಲಿ ಇಂಗ್ಲಿಷ್ ‘ಯು’ ಅಕ್ಷರದ ಆಕಾರದಲ್ಲಿ ಬರಪೊಳೆ ಹರಿಯುತ್ತದೆ. ಹೈಸೊಡ್ಲೂರು, ಬೇಗೂರು, ಕುತ್ತುನಾಡು, ಬೆಟ್ಟಿಯತ್‍ನಾಡು ಹಾಗೂ ಬೇರಣ ನಾಡಿನ ಭಾಗವಾಗಿ ಹರಿಯುತ್ತದೆ. ಮಹಾಂದೋಡುವಾದರೆ ಇಂದು ಹಳ್ಳಿಗಟ್ಟು ಬೇಗೂರು ಗ್ರಾಮದ ಮೂಲಕ ಹರಿದು ಅನೇಕ ತೋಡುಗಳನ್ನು ಕೂಡಿ ಕೊಂಡು ಬರಪೊಳೆಯನ್ನು ಸೇರುತ್ತದೆ. ಇಂದಿನ ಬರಪೊಳೆ ಹೊಳೆಗಳ ನೀರಿನ ಬೃಹತ್ ಜಾಲವನ್ನು ಪಡೆದು ಮಾಕುಟ್ಟದ ಮೂಲಕವಾಗಿ ಕೇರಳದ ಕೂಟುಪೊಳೆಯೊಡನೆ ಕೂಡಿ ಚರಕಲ್ ಬಳಿ ಬಲ್ಯಪದೇಮಿನಲ್ಲಿ ಅರಬ್ಬಿ ಸಮುದ್ರವನ್ನು ಸೇರುತ್ತದೆ. ಇವುಗಳಿಂದ ವ್ಯಕ್ತವಾಗುವ ಅಂಶಗಳೆಂದರೆ 1. ಬರಪೊಳೆಯ ಹುಟ್ಟು ಕೊಡಗಿನ ಪಶ್ಚಿಮಘಟ್ಟಗಳಲ್ಲಿದೆ. 2. ಕೊಡಗಿನ ಮಹಾಂದೋಡು ಒಂದು ಕಾಲದ ದೊಡ್ಡ ಹೊಳೆಯಾಗಿ ಪಾಲ್ಘಾಟ್ ಮೂಲಕ ಸಾಗುತ್ತಿತ್ತು. 3. ಇವೆರಡು ಹೊಳೆಯ ಪಥಗಳು ಪ್ರಾಚೀನ ಕಾವೇರಿಯ ಪಶ್ಚಿಮಮುಖಿ ಕವಲುಗಳ ಪಥವಾಗಿರುವಂತಿದೆ. 4. ಬಲ್ಯಪದೇಮಿ ಎಂಬ ಜನಬಳಕೆಯ ಶಬ್ದವು ಮಹಾಂದೋಡು-ಬರಪೊಳೆಯ ದೊಡ್ಡ ಪಥದ ಸಾಂಕೇತಿಕ ಶಬ್ದವಾಗಿರುವಂತಿದೆ. 5. ಭೂ ವಿಜ್ಞಾನದ ಸಂಗತಿಗಳಿಗೆ ಇಲ್ಲಿನ ಹೊಳೆಗಳ ಹರಿವು ಸಾಕ್ಷ್ಯವಾಗಿರುವುದಾಗಿದೆ. 6. ಪೂರ್ವ ಪುರಾ ಶಿಲಾಯುಗದ ಕಾಲದಲ್ಲಿ (50 ಲಕ್ಷ ದಿಂದ 50 ಸಾವಿರ ವರ್ಷಗಳ ನಡುವಣ ಅವಧಿ) ಕೊಡಗಿನ ಕಾವೇರಿಗೆ ಪೂರ್ವದಲ್ಲಿ ಒಂದು, ಪಶ್ಚಿಮದಲ್ಲಿ ಎರಡು ಕವಲುಗಳಿದ್ದ ಸಂಭಾವ್ಯತೆ ಕಾಣುತ್ತದೆ.

ತಲಕಾವೇರಿಯಿಂದ ಹರಿದು ಬಂದ ಕಾವೇರಿ ನಾಪೋಕ್ಲುವಿಗೆ ಬರುವಲ್ಲಿ ದಕ್ಷಿಣ, ಪೂರ್ವ, ಪಶ್ಚಿಮ ತಿರುವುಗಳಲ್ಲಿ ಸಾಗುತ್ತದೆ. ನಂತರ ಗುಹ್ಯ, ಸಿದ್ದಾಪುರದ ಬಳಿ ಬಂದು ಈಶಾನ್ಯಕ್ಕೆ ತಿರುಗುವಲ್ಲಿ ಇಂಗ್ಲಿಷ್ ‘ಯು’ ಆಕಾರವಾಗಿ ಸಾಗುವುದನ್ನು ಕಾಣಬಹುದು. ಅಂದರೆ ಭೂ ಪದರಿನಲ್ಲಿ ಭೇದವಾದ ಅವಧಿಯಲ್ಲಿ ಈ ನೆಲೆಯಲ್ಲಿ ಪಶ್ಚಿಮ ಕವಲುಗಳನ್ನು ಹೊಂದಿದ್ದು ಮಹಾಂದೋಡು, ಬರಪೊಳೆ ಪಥದಲ್ಲಿ ಬಂದು ಸಾಗುತ್ತಿದ್ದಂತೆ ತೋರುತ್ತದೆ. ಅದರಲ್ಲಿಯೂ ಬರಪೊಳೆಯು ಸ್ಪಷ್ಟವಾಗಿ ಪಶ್ಚಿಮ ಘಟ್ಟಗಳ ಏರು ಹೆಚ್ಚಿದ ನಂತರ ಕಾವೇರಿಯ ಪಶ್ಚಿಮ ಕವಲೊಂದರ ಪಥವನ್ನು ಆಕ್ರಮಿಸಿ (ಖiveಡಿ ಅಚಿಠಿಣuಡಿe) ಸಾಗಿರುವುದನ್ನೂ ಇಂದಿನ ಅದರ ಹರಿವಿನ ಪಥದಿಂದ ಗೋಚರವಾಗುತ್ತದೆ. ಬರಪೊಳೆಯ ಎರಡು ಕಡೆ ‘ಯು’ ಆಕಾರದಲ್ಲಿ ಪೂರ್ವದಿಂದ ಪಶ್ಚಿಮ ದಿಸೆಗೆ ಸಾಗಿರುವುದೂ ಅದರ ಹರಿವಿನಲ್ಲಿ ಕಾಣುತ್ತದೆ. ಅಲ್ಲದೆ ಮಹಾಂದೋಡು ಇಂದು ಬರಪೊಳೆಗೆ ಸೇರಿಹೋಗುವುದೂ ಗಮನಾರ್ಹವೇ ಆಗಿದೆ. ಅಂದರೆ ಪಶ್ಚಿಮಘಟ್ಟಗಳ ಏರು ಹೆಚ್ಚಾದಾಗ, ಅದನ್ನು ಏರಲಾಗದ ಕಾವೇರಿ, ಪೂರ್ವ ಕವಲಿನೊಡನೆ ತನ್ನೆಲ್ಲ ಹರಿವಿನ ಪಥಗಳನ್ನು ಐಕ್ಯಗೊಳಿಸಿಕೊಂಡು, ಪಶ್ಚಿಮ ಕವಲುಗಳ ಹಾದಿಯನ್ನು ಮಹಾಂದೋಡು, ಬರಪೊಳೆಗೆ ಬಿಟ್ಟುಕೊಟ್ಟಂತಿದೆ. ಈ ನದಿ ಹರಿವಿನ ಪ್ರಾಚೀನ ಪಥದ ನೆರೆಯ ಫಲವತ್ತಿಕೆಗೆ ಸಿದ್ದಾಪುರ, ಅಮ್ಮತ್ತಿಯ ಪ್ರದೇಶಗಳು ಸಾಕ್ಷಿ ಆಗಿವೆ. ಇಡೀ ಕಿಗ್ಗಟ್ಟುನಾಡು (ಇಂದಿನ ಮಹಾಂದೋಡು, ಬರಪೊಳೆ ಹರಿವಿನ ನೆರೆ ಪ್ರದೇಶ) ಕೊಡಗಿನ ಭತ್ತದ ಕಣಜ ಎನಿಸಿರುವುದೇ ಆಗಿದೆ. ಜೊತೆಗೆ ಕಾಫಿಯ ಬೆಳೆಯ ಸಮೃದ್ಧಿ ಇಲ್ಲಿನ ಏರು ಪ್ರದೇಶಗಳಲ್ಲಿಯೂ ಉಂಟು. ಹೇಗೋ ಏನೋ ತಲಕಾವೇರಿಯ ತೀರ್ಥೋದ್ಭವದ ಸಮಯದಲ್ಲಿ ಮಹಾಂದೋಡುವಿಗೆ ಸನಿಹದ ನೆಲೆಯಾದ ಕುಂದಬೆಟ್ಟದಲ್ಲಿ ಮಾತ್ರ ತೀರ್ಥೋದ್ಭವದ ಮರು ದಿನದಲ್ಲಿ ಕಾವೇರಿಯ ತೀರ್ಥ ತಂದು ಮಹಾ ದೇವನಿಗೆ ಅಭಿಷೇಕ, ಜಾತ್ರೆ, ಜನಪದ ಕುಣಿತ, ಕಾವೇರಿಯ ಆರಾಧನೆಗಳು ನಡೆಯುತ್ತವೆ. ಪ್ರಾಚೀನ ಭೌಗೋಳಿಕ ಸಂಗತಿಯೊಂದನ್ನು ಹೇಗೋ ಪರಂಪರೆಯಿಂದ ತಿಳಿದು ಕಾವೇರಿ ಹರಿವಿನ ಸಂಬಂಧವು ಸಾಂಕೇತಿಕವಾಗಿಯಾದರೂ ಜನಪ್ರಜ್ಞೆಯಲ್ಲಿ ಉಳಿದು ಬಂದಿರುವುದನ್ನು ಈ ಮೇಲಿನ ಆಚರಣೆಗಳು ತೋರುವಂತಿವೆ. ಇನ್ನು ಕಾವೇರಿಯ ಉಗಮವು ಪಶ್ಚಿಮಘಟ್ಟಗಳ ಏರಿನ ನಂತರ ಹಿಂಬದಿ ಕಣಿವೆಗೆ ಸರಿದಂತೆ ಕಾಣುವುದಿಲ್ಲ. ಆಗ ಸರಿದಿದ್ದಿದ್ದರೆ ಉಗಮದಿಂದಲೇ ಕಾವೇರಿ ಪಶ್ಚಿಮ ಮುಖಿ ಆಗಿಬಿಡುತ್ತಿತ್ತು. ತಲಕಾವೇರಿಯ ಹಿಂಬದಿಯ ಸಂಪಾಜೆ ಕಣಿವೆಯಲ್ಲಿ ಹುಟ್ಟುವ ನೂಜೆಕಲ್ಲು ಹೊಳೆ ಪೂರ್ಣ ಪಶ್ಚಿಮ ಗಾಮಿನಿಯಾಗಿ ಕಾಸರಗೋಡಿನ ಬಳಿ ಅರಬ್ಬಿ ಸಮುದ್ರವನ್ನು ಸೇರುವ ಸಂಗತಿಯ ಮೇಲಿನ ಅನುಮಾನಕ್ಕೆ ಉತ್ತರ ನೀಡುತ್ತದೆ. ಪಶ್ಚಿಮಘಟ್ಟಗಳ ಹೆಚ್ಚಿನ ಏರಿನ ಜೊತೆಯಲ್ಲಿಯೇ ಕೊಡಗಿನಲ್ಲಿ ಆಕೆಯ ಪಥ ಪೂರ್ಣ ಪೂರ್ವಮುಖಿಯಾಗಿ ಹೆಚ್ಚು ಯೌವನದಿಂದ ಲಕ್ಷಾಂತರ ವರ್ಷ ಹರಿಯುವಂತಾಯಿತು.

(ಮುಂದುವರಿಯುವುದು)

- ಡಾ|| ಎಂ. ಜಿ. ನಾಗರಾಜ್