ಸೋಮವಾರಪೇಟೆ, ನ. 21: ಕಾರೇಕೊಪ್ಪ ಹಾಗೂ ಯಡವನಾಡು ಭಾಗದಲ್ಲಿ ಕಾಡಾನೆಗಳ ಹಾವಳಿಯಿಂದಾಗಿ ಮರಗಳು ವಿದ್ಯುತ್ ತಂತಿಯ ಮೇಲೆ ಬಿದ್ದ ಪರಿಣಾಮ ಸೋಮವಾರಪೇಟೆ ವ್ಯಾಪ್ತಿಗೆ ವಿದ್ಯುತ್ ಸರಬರಾಜು ಸ್ಥಗಿತಗೊಂಡು ಕಾರ್ಗತ್ತಲು ಆವರಿಸಿತ್ತು.

ಇದಾಗಿ ಕೆಲ ಸಮಯದಲ್ಲೇ ಸ್ಥಳಕ್ಕೆ ತೆರಳಿದ ಸೆಸ್ಕ್ ಸಿಬ್ಬಂದಿಗಳು, ಕಾಡಾನೆಗಳ ಓಡಾಟದ ನಡುವೆಯೂ ರಾತ್ರಿ ಕೆಲಸ ನಿರ್ವಹಿಸಿ ಬೆಳಗ್ಗಿನ ವೇಳೆಗೆ ಪಟ್ಟಣಕ್ಕೆ ಬೆಳಕು ಒದಗಿಸುವ ಮೂಲಕ ತಮ್ಮ ಕಾರ್ಯಕ್ಷಮತೆ ಮೆರೆದಿದ್ದಾರೆ. ಕಾಜೂರು, ಐಗೂರು, ಕಾರೇಕೊಪ್ಪ, ಯಡವನಾಡು ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ನಿರಂತರವಾಗಿದ್ದು, ಹಿಂಡು ಹಿಂಡಾಗಿ ಸಂಚರಿಸುವ ಕಾಡಾನೆಗಳು ಈ ಭಾಗದಲ್ಲಿ ಕೃಷಿ ಫಸಲು ನಷ್ಟಗೊಳಿಸುವದು ಮಾಮೂಲಿಯಾಗಿದೆ.

ಈ ನಡುವೆ ಕಾಡಾನೆಗಳ ಓಡಾಟಕ್ಕೆ ಕಾರೇಕೊಪ್ಪ ಮತ್ತು ಯಡವನಾಡು ವ್ಯಾಪ್ತಿಯಲ್ಲಿ ಸುಮಾರು 20ಕ್ಕೂ ಅಧಿಕ ಮರಗಳು ನೆಲಕ್ಕುರುಳಿವೆ. ಇದರಲ್ಲಿ 5 ಮರಗಳು ಕುಶಾಲನಗರದಿಂದ ಸೋಮವಾರಪೇಟೆಗೆ ವಿದ್ಯುತ್ ಸರಬರಾಜು ಮಾಡುವ ಪ್ರಮುಖ ವಿದ್ಯುತ್ ತಂತಿಯ ಮೇಲೆ ಬಿದ್ದ ಪರಿಣಾಮ, ಕಂಬಗಳು ಬಾಗಿ ವಿದ್ಯುತ್ ತಂತಿಗಳು ತುಂಡಾಗಿ ಪಟ್ಟಣಕ್ಕೆ ವಿದ್ಯುತ್ ಸ್ಥಗಿತಗೊಂಡಿತ್ತು.

ತಕ್ಷಣ ಕಾರ್ಯಪ್ರವೃತ್ತರಾದ ಇಲಾಖೆಯ ಸಿಬ್ಬಂದಿಗಳಾದ ಜಾದವ್, ಮುರುಳಿ, ಪುಟ್ಟ, ಸತೀಶ್ ಸೇರಿದಂತೆ 8 ಮಂದಿಯ ತಂಡ ಕಾರೇಕೊಪ್ಪ ಮತ್ತು ಯಡವನಾಡಿಗೆ ರಾತ್ರಿ ತೆರಳಿದ ಸಂದರ್ಭ ಕಾಡಾನೆಗಳಿಂದಾಗಿ ವಿದ್ಯುತ್ ಸ್ಥಗಿತಗೊಂಡಿರುವದು ಪತ್ತೆಯಾಯಿತು.

ಈ ಸಮಯದಲ್ಲಿ ಸುತ್ತಮುತ್ತಲಲ್ಲಿ ಕಾಡಾನೆಗಳು ಓಡಾಡುತ್ತಿದ್ದರೂ ಸಹ ಸೆಸ್ಕ್ ಸಿಬ್ಬಂದಿಗಳು ಜಾಗ್ರತೆವಹಿಸಿ ವಿದ್ಯುತ್ ಕಂಬ ಹಾಗೂ ತಂತಿಗಳನ್ನು ಸರಿಪಡಿಸಿದ್ದಾರೆ. 11.30 ರಿಂದ ಬೆಳಗ್ಗಿನ 4 ಗಂಟೆಯವರೆಗೂ ಅರಣ್ಯದೊಳಗೆ ಕೆಲಸ ಮಾಡಿ, ಬೆಳಿಗ್ಗೆ 5.30ರ ವೇಳೆಗೆ ಪಟ್ಟಣದ ಫೀಡರ್‍ಗಳಿಗೆ ವಿದ್ಯುತ್ ಸರಬರಾಜು ಮಾಡುವಲ್ಲಿ ಸಫಲರಾಗಿದ್ದಾರೆ.

ಸೆಸ್ಕ್ ಸಿಬ್ಬಂದಿಗಳ ಕಾರ್ಯಕ್ಕೆ ಇಲಾಖೆಯ ಎಇಇ ಧನಂಜಯ್ ಸಹಿತ, ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ರಾತ್ರಿ ವೇಳೆಯಲ್ಲೂ ಕೆಲಸ ಮಾಡಿ ಬೆಳಕು ಒದಗಿಸಿದ ಸಿಬ್ಬಂದಿಗಳನ್ನು ಶ್ಲಾಘಿಸಿದ್ದಾರೆ.

- ವಿಜಯ್ ಹಾನಗಲ್