ಕುಶಾಲನಗರ, ನ. 21: ರಾಜ್ಯ ಸರಕಾರ ಕುಶಾಲನಗರವನ್ನು ಕೇಂದ್ರವನ್ನಾಗಿಸಿ ನೂತನ ತಾಲೂಕು ಅಧಿಸೂಚನೆ ಹೊರಡಿಸಿದ ಹಿನ್ನೆಲೆ ಬಿಜೆಪಿ ಪಕ್ಷದ ವತಿಯಿಂದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ವಿಜಯೋತ್ಸವ ಆಚರಿಸಲಾಯಿತು.

ಕುಶಾಲನಗರದ ಗಣಪತಿ ದೇವಾಲಯದ ಮುಂಭಾಗ ಸೇರಿದ ಬಿಜೆಪಿ ಕಾರ್ಯಕರ್ತರು ರಾಜ್ಯ ಸರಕಾರದ ಪರ ಘೋಷಣೆ ಕೂಗಿ ಸಿಹಿ ಹಂಚಿ ಸಂಭ್ರಮಿಸಿದರು.

ಬಿಜೆಪಿ ತಾಲೂಕು ವಕ್ತಾರ ಕೆ.ಜಿ. ಮನು ಮಾತನಾಡಿ, ಎರಡು ದಶಕಗಳಿಂದ ಕಾವೇರಿ ತಾಲೂಕು ಯೋಜನೆ ನೆನೆಗುದಿಗೆ ಬಿದ್ದಿತ್ತು. ಕ್ಷೇತ್ರ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರ ಕಾಳಜಿಯಿಂದ ನೂತನ ತಾಲೂಕು ಘೋಷಣೆಯಾಗಲು ಕಾರಣವಾಗಿದೆ ಎಂದರಲ್ಲದೆ ಮುಂದಿನ ದಿನಗಳಲ್ಲಿ ಸಾಮಾನ್ಯ ಜನರಿಗೆ ಉತ್ತಮ ಸೇವೆ ದೊರಕಲಿದೆ ಎಂದರು.

ಈ ಸಂದರ್ಭ ಮಾತನಾಡಿದ ಬಿಜೆಪಿ ಅಧ್ಯಕ್ಷ ವಿ.ಎನ್. ಉಮಾಶಂಕರ್, ನೂತನ ತಾಲೂಕು ಸಾಕಾರಗೊಂಡಿರುವುದರ ಹಿಂದೆ ಹಲವು ವರ್ಷಗಳ ಹೋರಾಟ, ಹಲವರ ಶ್ರಮ ಅಡಗಿದೆ ಎಂದರಲ್ಲದೆ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಬಿಜೆಪಿ ಪ್ರಮುಖ ಜಿ.ಎಲ್. ನಾಗರಾಜ್ ಮಾತನಾಡಿ, 30 ವರ್ಷಗಳ ಸುದೀರ್ಘ ಹೋರಾಟದ ಫಲವಾಗಿ ನೂತನ ತಾಲೂಕು ಘೋಷಣೆಯಾಗಿದ್ದು ಜನರ ಆಶೋತ್ತರಗಳನ್ನು ಈಡೇರಿಸುವಂತಹ ತಾಲೂಕಾಗಿ ಮೆಚ್ಚುಗೆ ಗಳಿಸಬೇಕಿದೆ ಎಂದು ಆಶಯ ವ್ಯಕ್ತಪಡಿಸಿದರು. ನೂತನ ತಾಲೂಕು ಅಧಿಕೃತ ಘೋಷಣೆ ಹಿನ್ನೆಲೆ ನೆರೆದಿದ್ದವರಿಗೆ ಸಿಹಿ ಹಂಚಲಾಯಿತು.

ಈ ಸಂದರ್ಭ ಜಿ.ಪಂ. ಸದಸ್ಯೆ ಮಂಜುಳಾ, ತಾ.ಪಂ. ಸದಸ್ಯ ಗಣೇಶ್, ಕುಡಾ ಸದಸ್ಯ ವಿ.ಡಿ. ಪುಂಡರೀಕಾಕ್ಷ, ವೈಶಾಖ್, ಪ.ಪಂ. ಸದಸ್ಯ ಎಂ.ವಿ. ನಾರಾಯಣ್, ಬಿಜೆಪಿ ಪ್ರಮುಖರಾದ ಶಿವಾಜಿ, ದೇವರಾಜ್, ವರದ, ಸೋಮಶೇಖರ್, ಶಿವಾನಂದ್, ರುದ್ರಾಂಬಿಕೆ, ವೇದಾವತಿ ಮತ್ತಿತರರು ಇದ್ದರು.