ಮಡಿಕೇರಿ, ನ. 21: ಭಾಗಮಂಡಲದ ಭಗಂಡೇಶ್ವರ ದೇವಾಲಯದ ಆಸ್ತಿಯನ್ನು ಪ್ರಭಾವಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಕೊಡಗು ಏಕೀಕರಣ ರಂಗ ದಾಖಲೆ ಸಮೇತ ಆರೋಪ ಮಾಡಿದ್ದು, ಸದರಿ ಆರೋಪಕ್ಕೆ ಪೂರಕ ಸಾಕ್ಷಿಗಳನ್ನು ಒದಗಿಸಿದೆ. ಈಗಾಗಲೇ ಸಂಬಂಧಿಸಿದ ಇಲಾಖೆ ಮತ್ತು ಜಿಲ್ಲಾಡಳಿತ ಇದರ ಅರಿವು ಹೊಂದಿ ದ್ದರು ತಕ್ಷಣಕ್ಕೆ ಕ್ರಮಕೈಗೊಳ್ಳದಿರುವುದು ವಿಪರ್ಯಾಸ. ತಕ್ಷಣ ಒತ್ತುವರಿದಾರರನ್ನು ತೆರವುಗೊಳಿಸಿ ದೇವಾಲಯದ ಆಸ್ತಿಯನ್ನು ರಕ್ಷಿಸಬೇಕು. ಕೊಡಗು ಏಕೀಕರಣ ರಂಗ ಕೈಗೊಳ್ಳುವ ಎಲ್ಲಾ ರೀತಿಯ ಹೋರಾಟಗಳಿಗೆ ಕೊಡವಾಮೆರ ಕೊಂಡಾಟ ಸಂಘಟನೆಯು ನೈತಿಕ ಬೆಂಬಲವನ್ನು ನೀಡಲಿದೆ ಎಂದು ಸಂಘಟನೆ ಅಧ್ಯಕ್ಷ ಚಾಮೆರ ದಿನೇಶ್ ತಿಳಿಸಿದ್ದಾರೆ.

ಒತ್ತುವರಿದಾರರು ಪತ್ರಿಕಾ ಗೋಷ್ಠಿ ಮೂಲಕ ಹೇಳಿಕೆಯನ್ನು ನೀಡಿರುವುದನ್ನು ಗಮನಿಸಿದ್ದು, ಇವರ ಹೇಳಿಕೆಯು ಹತಾಶೆ ಮತ್ತು ಬಾಲಿಶ ತನದಿಂದ ಕೂಡಿದೆ. ಸಾಕ್ಷಿ ಮತ್ತು ಆಧಾರ ರಹಿತವಾಗಿದ್ದು ಇವರಿಗೆ ಇತಿಹಾಸ ಮತ್ತು ವಾಸ್ತವತೆಯ ಅರಿವಿನ ಅಜ್ಞಾನ ಇರುವುದು ಸಷÀ್ಟವಾಗುತ್ತದೆ. ದೇವಾಟ್ ಪರಂಬು ನರಮೇಧದ ಇತಿಹಾಸವನ್ನು ಹಲವು ವರ್ಷಗಳ ಹಿಂದೆಯೇ ಇತಿಹಾಸಕಾರರು ದಾಖಲಿಸಿರುವುದಕ್ಕೆ, ಹಲವಾರು ಪುರಾವೆಗಳು ಇಂದಿಗೂ ಇವೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಭಾಗಮಂಡಲ ದೇವಾಲಯ ಆಸ್ತಿ ಕಬಳಿಕೆ ವಿಚಾರವಾಗಿ ಕೈಗೊಳ್ಳುವ ಎಲ್ಲ ಹೋರಾಟಗಳಿಗೂ ಈಗಾಗಲೇ ಅಖಿಲ ಕೊಡವ ಸಮಾಜ ಹಾಗೂ ಕೊಡವ ಮಕ್ಕಡ ಕೂಟ ಬೆಂಬಲಿಸಿರುವಂತೆ ಕೊಡವಾಮೆರ ಕೊಂಡಾಟ ಸಂಘಟನೆಯು ಸಂಪೂರ್ಣ ಬೆಂಬಲವನ್ನು ನೀಡಲಿದೆ. ಸರ್ಕಾರ ತಕ್ಷಣ ಸಂಬಂಧಿಸಿದ ದಾಖಲಾತಿಯನ್ನು ಮರುಪರಿಶೀಲನೆ ಮಾಡಿ ಶೀಘ್ರವಾಗಿ ಒತ್ತುವರಿದಾರರನ್ನು ತೆರವುಗೊಳಿಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಂಡು ಮುಂದಿನ ದಿನಗಳಲ್ಲಿ ಸಾರ್ವಜನಿಕ ಆಸ್ತಿ ಕಬಳಿಕೆ ಮಾಡಿ ಮೆರೆಯುವ ಭೂಕಬಳಿಕೆದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುವುದಾಗಿ ಅವರು ತಿಳಿಸಿದ್ದಾರೆ.