ಮಡಿಕೇರಿ, ನ. 20 : ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಸ್ಕ್ವಾಷ್ ಆಟಕ್ಕೆ ಹೆಚ್ಚಿನ ಪ್ರಾಮುಖ್ಯತೆ ದೊರೆತು ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯ ಕ್ರೀಡಾಪಟುಗಳು ಈ ಕ್ರೀಡೆಯತ್ತ ಆಸಕ್ತಿ ತೋರಿಸುವಂತಾಗಲಿ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಆಶಿಸಿದರು. ರಾಷ್ಟ್ರೀಯ ಸ್ಕ್ವಾಷ್ ಆಟಗಾರ ಹಾಗೂ ಭಾರತೀಯ ಸೇನೆಯಲ್ಲಿಯೂ ಸೇವೆ ಸಲ್ಲಿಸುತ್ತಿರುವ ಜಿಲ್ಲೆಯ ಅಮ್ಮಚ್ಚಮಣಿಯಂಡ ಮಿಥುನ್ ಅವರಿಗೆ ಅಲ್ಲಾರಂಡ ರಂಗ ಚಾವಡಿ ಮತ್ತು ಕ್ರೀಡಾಭಿಮಾನಿಗಳು, ಇವರ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಒಳಾಂಗಣ ಕ್ರೀಡಾಂಗಣದ ಸಭಾಂಗಣದಲ್ಲಿ ಏರ್ಪಡಿಸಿದ್ದ ಗೌರವಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ತಾವು ಕ್ರೀಡಾ ಸಚಿವರಾಗಿದ್ದ ಸಂದರ್ಭ ಸರಕಾರದ ಅನುದಾನದಿಂದ ಜಿಲ್ಲೆಯಲ್ಲಿ ಈ ಒಳಾಂಗಣ ಕ್ರೀಡಾಂಗಣ ನಿರ್ಮಿಸಲು ಸಾಧ್ಯವಾಯಿತು. ಹಲವಾರು ಅಂತರರಾಷ್ಟ್ರೀಯ ಕ್ರೀಡೆಗಳಲ್ಲಿ ಕೊಡಗಿನ ಕ್ರೀಡಾಪಟುಗಳು ದೇಶವನ್ನು ಪ್ರತಿನಿಧಿಸುತ್ತಿದ್ದಾರೆ. ಹಾಕಿ ಕ್ರೀಡೆ ಪ್ರೋತ್ಸಾಹಕ್ಕಾಗಿ ಜಿಲ್ಲೆಯಲ್ಲಿ ಟರ್ಫ್ ಮೈದಾನಗಳಿವೆ. ಪ್ರಸ್ತುತ ಸೋಮವಾರಪೇಟೆಯಲ್ಲಿಯು ನೂತನ ಮೈದಾನ ಕಾಮಗಾರಿ ನಡೆಯುತ್ತಿದೆ. ಅದರಂತೆ ಸ್ಕ್ವಾಷ್ ಕ್ರೀಡೆಯನ್ನೂ ಪ್ರೋತ್ಸಾಹಿಸಬೇಕಾಗಿದೆ. ಕರ್ನಾಟಕದಲ್ಲಿ ಮೊಟ್ಟಮದಲ ಬಾರಿಗೆ ಕೊಡಗಿನಲ್ಲಿ ಸ್ಕ್ವಾóಷ್ ಕ್ರೀಡಾಂಗಣ ಸ್ಥಾಪಿಸಲಾಗಿದ್ದು ಸದುಪಯೋಗಿಸಿ ಕೊಳ್ಳುವಂತೆಯೂ ಈ ಸಂದರ್ಭ ಕರೆ ನೀಡಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಕ್ರೀಡಾಪಟು ಮಿಥುನ್ ಸ್ಕ್ವಾಷ್ ಎಂದರೆ ಬಹಳ ಸುಲಭದ ಆಟವಲ್ಲ. ಇತರ ಕ್ರೀಡೆಗಳಿಗೆ ಹೋಲಿಸಿದರೆ ಇದರಿಂದ ಆರೋಗ್ಯಕ್ಕೆ ಹೆಚ್ಚಿನ ಉಪಯೋಗಗಳಿವೆ. ಕ್ರೀಡೆಯಲ್ಲಿ ರಾಜ್ಯ, ರಾಷ್ಟ್ರ ಮಟ್ಟಗಳಲ್ಲಿ ಗುರುತಿಸಿಕೊಂಡರೆ ಉದ್ಯೋಗ ಅವಕಾಶ ಸೇರಿದಂತೆ ಇತರ ಸೌಲಭ್ಯಗಳನ್ನು ಪಡೆಯಬಹುದಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪತ್ರಕರ್ತ ಉಳ್ಳಿಯಡ ಎಂ. ಪೂವಯ್ಯ ಅವರು ಮಾತನಾಡಿ ಸ್ಕ್ವಾಷ್ ಕ್ರೀಡೆ ಉತ್ತೇಜನಕ್ಕೆ ಜಿಲ್ಲೆಯಲ್ಲಿ ಒಂದು ಸಂಘಟನೆ ರಚನೆಯಾಗಬೇಕು. ಇದರಿಂದ ಈ ಕ್ರೀಡೆಗೆ ಇತರ ಕ್ರೀಡೆಗಳಂತೆ ಪ್ರಸಿದ್ಧತೆ ದೊರೆಯುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಅಲ್ಲಾರಂಡ ರಂಗ ಚಾವಡಿಯ ಅಧ್ಯಕ್ಷ ಅಲ್ಲಾರಂಡ ವಿಠಲ ನಂಜಪ್ಪ, ಮಾಜಿ ಮೂಡಾ ಅಧ್ಯಕ್ಷ ಸುರಯ್ಯ ಅಬ್ರಾರ್, ಮಿಥುನ್ ಅವರ ಪೋಷಕರು, ಸ್ಕ್ವಾಷ್ ಕ್ರೀಡಾಪಟುಗಳಾದ ಶ್ರೀಕಾಂತ್, ಜಿತೇಂದ್ರ, ನಾಚಪ್ಪ ಹಾಗೂ ಇತರರು ಹಾಜರಿದ್ದರು.