ಮಡಿಕೇರಿ, ನ. 20: ಕಸ್ತೂರಿ ರಂಗನ್ ವರದಿ ಜಾರಿಯಾಗುವುದನ್ನು ತಡೆಯುವುದು, ಭತ್ತಕ್ಕೆ ಬೆಂಬಲ ಬೆಲೆ ಘೋಷಣೆಯ ಮೊತ್ತ ಹೆಚ್ಚಳ, ಕರಿ ಮೆಣಸು ಆಮದನ್ನು ತಡೆ ಹಿಡಿಯುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಕೊಡಗು ಜಿಲ್ಲಾ ಘಟಕ ನಗರದಲ್ಲಿ ಪ್ರತಿಭಟನೆ ನಡೆಸಿತು.
ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಕೊಡಗು ಜಿಲೆಯ ಅಸ್ತಿತ್ವಕ್ಕೆ ಮಾರಕವಾಗಿರುವ ಕಸ್ತೂರಿ ರಂಗನ್ ವರದಿ ಅನುಷ್ಠಾನ ಮಾಡದಂತೆ ಒತ್ತಾಯಿಸಿದರು. ಸರಕಾರ ಭತ್ತ ಖರೀದಿಸಲು ಬೆಂಬಲ ಬೆಲೆ ಘೋಷಣೆ ಮಾಡಿದೆ. ಆದರೆ ಅದಕ್ಕೆ ನಿಗದಿ ಮಾಡಿರುವ ಮೊತ್ತವನ್ನು ಗರಿಷ್ಠ ರೀತಿಯಲ್ಲಿ ಏರಿಕೆ ಮಾಡಬೇಕು ಎಂದು ಒತ್ತಾಯಿಸಿದರು. ವಿದೇಶದಿಂದ ಭಾರತಕ್ಕೆ ಕರಿ ಮೆಣಸನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಇದನ್ನು ತಕ್ಷಣವೇ ತಡೆ ಹಿಡಿಯ ಬೇಕು. ಇಲ್ಲವಾದಲ್ಲಿ ಕರಿ ಮೆಣಸು ಬೆಳೆಯುವ ರೈತರ ಸ್ಥಿತಿ ಮತ್ತಷ್ಟು ಹದಗೆಡುತ್ತದೆ. ಕೇಂದ್ರ ಮತ್ತು ರಾಜ್ಯ ಸರಕಾರ ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯನ್ನು ಕುರಿತು ಮಾತನಾಡಿದ ಪ್ರಾಂತ ರೈತ ಸಂಘದ ಸಂಚಾಲಕ ದುರ್ಗಾ ಪ್ರಸಾದ್, ಕಸ್ತೂರಿ ರಂಗನ್ ವರದಿಯ ಶಿಫಾರಸ್ಸನ್ನು ಅಂತಿಮಗೊಳಿಸಿ ಅನುಷ್ಠಾನ ಮಾಡುವಂತೆ ಸುಪ್ರಿಂ ಕೋರ್ಟ್ ಕೇಂದ್ರ ಸರಕಾರಕ್ಕೆ ಸೂಚಿಸಿದೆ. ಆದರೆ 2016ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿಯ ಕೇಂದ್ರ ಸರಕಾರ ಸುಪ್ರಿಂ ಕೋರ್ಟ್‍ಗೆ ಅಫಿಡವಿಟ್ ಸಲ್ಲಿಸುವ ಮೂಲಕ ವರದಿ ಅನುಷ್ಠಾನ ಮಾಡುವುದಾಗಿ ಹೇಳಿ 2 ಬಾರಿ ಅಧಿಸೂಚನೆ ಹೊರಡಿಸಿತ್ತು. ಈ ಸಂದರ್ಭ ಕೊಡಗು ಜಿಲ್ಲೆಯಲ್ಲಿಯೂ ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿ 2 ಬಾರಿಯೂ ಆಕ್ಷೇಪಣಾ ಅರ್ಜಿ ಸಲ್ಲಿಸಿತ್ತು. ಆದರೆ ಈ ಅರ್ಜಿಗಳನ್ನು ಕೇಂದ್ರ ಸರಕಾರ ಗಣನೆಗೆ ತೆಗೆದುಕೊಂಡಿಲ್ಲ. ಮಾತ್ರವಲ್ಲದೇ, ಡಿಸೆಂಬರ್ 31ರ ಒಳಗೆ ವರದಿಯನ್ನು ಅನುಷ್ಠಾನ ಮಾಡದಿರುವ ಅಧಿಕಾರಿಗಳ ಸಂಬಳವನ್ನು ಕಡಿತ ಮಾಡುವುದಾಗಿ ಸುಪ್ರಿಂ ಕೋರ್ಟ್ ಹೇಳಿದೆ. ಈ ಹಿಂದೆ ಸಲ್ಲಿಸಿದ್ದ ಅಫಿಡವಿಟ್ ಬಗ್ಗೆ ಸುಪ್ರಿಂ ಕೋರ್ಟ್‍ಗೆ ತಿಳಿಸಿದ್ದಾರೆ. ಯೋಜನೆಯ ಸಾಧಕ ಬಾಧಕವನ್ನು ಅರಿಯಲು ಜನಪರ ಸಮಿತಿ ರಚನೆ ಮಾಡಬೇಕಿದೆ ಎಂದು ಸುಪ್ರಿಂ ಕೋರ್ಟ್‍ಗೆ ಅರ್ಜಿ ಸಲ್ಲಿಸಬೇಕು ಎಂದು ಒತ್ತಾಯಿಸಿದರು. ಇಲ್ಲವಾದಲ್ಲಿ ಕೊಡಗು ಜಿಲ್ಲೆಯ ಜನರು ಕರಾಳ ದಿನವನ್ನು ಎದುರಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಸರಕಾರ ಭತ್ತ ಖರೀದಿಗೆ ಮುಂದಾಗಿದ್ದರೂ ಕೂಡ ಕ್ವಿಂಟಾಲ್‍ಗೆ ಕೇವಲ 1800 ರೂ. ಗಳನ್ನು ನಿಗದಿ ಮಾಡಿದೆ. ಈ ಬೆಂಬಲ ಬೆಲೆಯನ್ನು 2500 ರೂ.ಗೆ ಏರಿಸಬೇಕು. ಅದರಲ್ಲೂ ಅತೀರಾ ಭತ್ತ ಖರೀದಿಸುವುದಿಲ್ಲ ಎಂದು ಹೇಳಿದ್ದು, ಅತೀರಾ ಭತ್ತ ಬೆಳೆದ ರೈತರು ಸಂಕಷ್ಟ ಎದುರಿಸುವಂತಾಗಿದೆ. ಹೀಗಾಗಿ ಅತೀರಾ ಭತ್ತವನ್ನೂ ಬೆಂಬಲ ಬೆಲೆಯಲ್ಲಿ ಖರೀದಿ ಮಾಡಬೇಕೆಂದು ಆಗ್ರಹಸಿದರು. ವಿದೇಶಗಳಿಂದ ಕರಿ ಮೆಣಸನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಇದನ್ನು ತಡೆಹಿಡಿಯುವ ಮೂಲಕ ದೇಶೀಯ ಕರಿ ಮೆಣಸು ಬೆಳೆಗಾರರ ಹಿತ ಕಾಪಾಡ ಬೇಕಿದೆ. ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ತಕ್ಷಣವೇ ಮುಂದಾಗಬೇಕು ಎಂದು ಒತ್ತಾಯಿಸಿದರು.
ಬಳಿಕ ಜಿಲ್ಲಾಡಳಿತದ ಮೂಲಕ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯ ಸಂದರ್ಭ ಕರ್ನಾಟಕ ಪ್ರಾಂತ ರೈತ ಸಂಘದ ಕೊಡಗು ಘಟಕದ ಸದಸ್ಯರಾದ ಹಮೀದ್, ಬಾಬುಟ್ಟಿ, ಕುಶಾಲಪ್ಪ, ಅರುಣ, ರಶೀದ್ ಮತ್ತಿತ್ತರರು ಹಾಜರಿದ್ದರು.