ಗೋಣಿಕೊಪ್ಪ ವರದಿ, ನ. 20: ದೇವಣಗೇರಿ ಅಂಗಾರಪ್ಪ ದೇವರಿಗೆ ಪೂಜಾ ಕಾರ್ಯಕ್ರಮ ನಡೆಯಿತು. ಗ್ರಾಮಸ್ಥರಿಂದ ಅಂಗಾರಪ್ಪ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ಒಪ್ಪಿಸಲಾಯಿತು. ಮಹಿಳೆಯರು, ಮಕ್ಕಳು ಕೂಡ ಭಾಗವಹಿಸಿದ್ದರು.
ನಂತರ ನಡೆದ ಗ್ರಾಮಸ್ಥರ ಸಭೆಯಲ್ಲಿ ಗ್ರಾಮದ ತಲಕತೇರಿ ಊರ್ ಮಂದ್ ಆಚರಣೆಯನ್ನು ವಾಡಿಕೆಯಂತೆ ಪುತ್ತರಿ ಆಚರಣೆ ಮಾರನೆ ದಿನವಾದ ಡಿಸೆಂಬರ್ 1 ರಂದು ನಡೆಸಲು ನಿರ್ಧರಿಸಲಾಯಿತು.
ತಾ. 30 ರಂದು ಆಚರಿಸಲ್ಪಡುವ ಪೊವ್ದ್ ಆಚರಣೆಯ ಒಂದು ದಿನದ ನಂತರ ಊರ್‍ಮಂದ್ ನಡೆಸಿ, ಸಾಂಪ್ರದಾಯಿಕವಾಗಿ ಊರ್‍ಮಂದ್, ನಂತರ ಬೈರನಾಡ್ ಮಂದ್, ನಂತರ ಪೂಮಾಲೆ ಮಂದ್‍ನಲ್ಲಿ ಸಾಂಪ್ರದಾಯಿಕ ಉಡುಪಿನೊಂದಿಗೆ ಪಾಲ್ಗೊಳ್ಳಲು ಗ್ರಾಮದ ಪ್ರಮುಖರು ನಿರ್ಧರಿಸಿದರು.
ಪುಗ್ಗೇರ, ಐಚಂಡ, ಮೇದೂರ, ಬೀನಂಡ ಕುಟುಂಬಸ್ತರು ಸೇರಿ ಆಚರಿಸುವ ಊರ್‍ಮಂದ್‍ನಲ್ಲಿ ಕುಪ್ಯಚೇಲೆ, ದುಡಿಕೊಟ್ಟ್ ಮೂಲದ ಮಂದ್ ಹತ್ತುವ ಕಾರ್ಯಕ್ರಮ ನಡೆಸುವಂತೆ, ಮಕ್ಕಳು, ಮಹಿಳೆಯರು ಸೇರಿದಂತೆ ಪುರುಷರಿಗೆ ಓಟ, ಹಗ್ಗಜಗ್ಗಾಟ, ಸಂಗೀತ ಕುರ್ಚಿ ಆಚರಿಸುವಂತೆ ನಿರ್ಧರಿಸಲಾಯಿತು.
ತಾ. 30 ರಂದು ಈಡ್ ಹಾಕುವುದು, ಇಗ್ಗುತ್ತಪ್ಪನಿಗೆ ಕದಿರು ತೆಗೆದ ನಂತರ ಪೊವ್ದ್ ಆಚರಣೆ ಮುನ್ನ ದೇವಸ್ಥಾನದಲ್ಲಿ ಧಾರೆ ಪೂಜೆ ಮಾಡಿ, ರಾತ್ರಿ ಮಂದ್ ಸೇರಿ, ತಳಿಯತಕ್ಕಿ ಬೆಳಕಿನೊಂದಿಗೆ, ಬಿಳಿ ಕುಪ್ಯದಲ್ಲಿ ವಾಲಗದೊಂದಿಗೆ ಸೇರುವ ಮೂಲಕ ಆಚರಣೆಯನ್ನು ಸಾಂಪ್ರದಾಯಿಕವಾಗಿ ನಡೆಸುವಂತೆ ನಿರ್ಧಾರ ತೆಗೆದುಕೊಳ್ಳಲಾಯಿತು.
ಅಂಗಾರಪ್ಪ, ಅಯ್ಯಪ್ಪ, ಊರ್ ತಕ್ಕ ಸೇರಿದಂತೆ ತಕ್ಕರಿಗೆ ಹೂಮಾಲೆ ಹಾಕಿ, ನಂತರ ದೇವರ ಗದ್ದೆಯಲ್ಲಿ ಕದಿರು ತೆಗೆಯುವುದು, ಮಹಿಳೆಯರು, ಮಕ್ಕಳು ಸೇರಿ, ಪೂಜೆ ನಂತರ ಕದಿರು ತೆಗೆದು ಭಗವತಿಗೆ ಕದಿರು ಹಾಕಿ ಪೊವ್ವೋದಿ ಆಚರಿಸಿ ಪ್ರಸಾದ ವಿನಿಯೋಗ ಮಾಡುವ ಬಗ್ಗೆ ಚರ್ಚಿಸಿ ನಿರ್ಧರಿಸಲಾಯಿತು.
ಡಿ. 1 ರಂದು ತಲಕತೇರಿ ಊರ್‍ಮಂದ್ ನಂತರ ಮಾರನೆ ದಿನ ಬೈರನಾಡ್ ಮಂದ್, ಪೂಮಲೆ ಮಂದ್‍ಗೆ ಸೇರುವಂತೆ ನಿರ್ಧರಿಸಲಾಯಿತು. ಪ್ರಮುಖರಾದ ಪುಗ್ಗೇರ ವಿಜು ನಂಜಪ್ಪ, ಪುಗ್ಗೇರ ನಂದಾ, ಪೊನ್ನಪ್ಪ, ಪ್ರವೀಣ್, ಐಚಂಡ ಸಾಬು ಮುತ್ತಣ್ಣ, ಬೀನಂಡ ಪೂಣಚ್ಚ, ಮೇದೂರ ಬಿಪಿನ್ ಇತರರಿದ್ದರು