ಸುಂಟಿಕೊಪ್ಪ,-19 ಇಲ್ಲಿನ ಕೊಡಗರಹಳ್ಳಿಯ ಕೃಷಿಕರ ಗದ್ದೆಗಳಿಗೆ ಕಾಡಾನೆಗಳ ಹಿಂಡು ದಾಳಿ ನಡೆಸಿ ನಷ್ಟ ಉಂಟುಮಾಡಿದೆ.
ಕೊಡಗರ ಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಎ.ಎಂ.ಕಾರ್ಯಪ್ಪ, ಚೆಂಗಪ್ಪ, ಎ.ಎ.ರಾಜೇಂದ್ರ ಅವರ ಗದ್ದೆಗೆ ಆನೆಗಳು ದಾಳಿ ಮಾಡಿ ಕಟಾವಿಗೆ ಬಂದ ಭತ್ತದ ಪೈರುಗಳನ್ನು ತಿಂದು ನಾಶಪಡಿಸಿವೆ ಎಂದು ಅರಣ್ಯ ಇಲಾಖೆಗೆ ದೂರು ಮತ್ತು ಪರಿಹಾರಕ್ಕಾಗಿ ಅರ್ಜಿ ಸಲ್ಲ್ಲಿಸಿದ್ದಾರೆ. ಎ.ಎ. ರಾಜೇಂದ್ರ ಅವರ ತೋಟಕ್ಕೂ ಆನೆಗಳು ನುಗ್ಗಿ ಹಣ್ಣಾಗಿರುವ ಕಾಫಿ ಗಿಡಗಳನ್ನು ನಾಶ ಪಡಿಸಿವೆ. ಈ ಭಾಗದಲ್ಲಿ ನಿರಂತರವಾಗಿ ಸುತ್ತಮುತ್ತಲಿನ ತೋಟಗಳಲ್ಲಿ ಹಗಲು ವೇಳೆಯಲ್ಲಿಯೇ ಆನೆಗಳು ಕಂಡುಬರುತ್ತಿದ್ದು, ಕೂಲಿ ಕಾರ್ಮಿಕರು ತೋಟದ ಕೆಲಸಕ್ಕೆ ಬರಲು ಹೆದರುವಂತಾಗಿದೆ. ಸಾರ್ವಜನಿಕರು ಮನೆಯಿಂದ ಹೊರ ಬರುವುದಕ್ಕೂ ಭಯ ಪಡುತ್ತಿದ್ದಾರೆ.ರಾತ್ರಿ ವೇಳೆ ಸುಂಟಿಕೊಪ್ಪದಿಂದ ಮಾದಾಪುರದೆಡೆಗೆ ಹಲವಾರು ವಾಹನಗಳು ಸಂಚರಿಸುತ್ತಿದ್ದು ಆನೆ ಉಪಟಳದಿಂದ ತೊಂದರೆ ತಪ್ಪಿದಲ್ಲ ಕೂಡಲೇ ಅರಣ್ಯ ಅಧಿಕಾರಿಗಳು ಆನೆಗಳನ್ನು ಅರಣ್ಯಗಳಿಗೆ ಓಡಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.