ಮಡಿಕೇರಿ, ನ. 20 : ಲೋಕೋಪಯೋಗಿ ಇಲಾಖೆ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ತಡೆಗೋಡೆ ನಿರ್ಮಾಣ ಕಾರ್ಯ ಪ್ರಾರಂಭವಾಗಿದ್ದು, ರೂ.7 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ ಎಂದು ಸಂಬಂಧಿಸಿದ ಅಧಿಕಾರಿಗಳು ತಿಳಿಸಿದ್ದಾರೆ. ಈ ವರ್ಷ ಆಗಸ್ಟ್‍ನಲ್ಲಿ ಸುರಿದ ಭಾರೀ ಮಳೆಗೆ ಜಿಲ್ಲೆಯ ಹಲವಾರು ಕಡೆ ಭೂಕುಸಿತ ಉಂಟಾಗಿದ್ದು ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಮಂಗಳೂರು ರಸ್ತೆ ಬದಿಯಲ್ಲಿಯೂ ಭೂಕುಸಿದಿದ್ದು, ಕಚೇರಿ ಸಿಬ್ಬಂದಿ 3 ದಿನಗಳ ಕಾಲ ನಗರಸಭಾ ಕಚೇರಿಯಲ್ಲಿ ಕಾರ್ಯನಿರ್ವಹಿಸಿದ್ದರು. ಮುಂದಿನ ದಿನಗಳಲ್ಲಿ ಆಗಬಹುದಾದ ಅನಾಹುತ ತಡೆಯುವಂತೆ ಕಚೇರಿ ಮುಂಭಾಗದ ರಸ್ತೆ ಬದಿ ತಡೆಗೋಡೆ ನಿರ್ಮಾಣ ಕಾರ್ಯಕ್ಕೆ ಇಂದಿನಿಂದ ಚಾಲನೆ ದೊರೆತಿದೆ. 130 ಮೀಟರ್ ಉದ್ದ ಹಾಗೂ 13 ಮೀಟರ್ ಎತ್ತರದ ತಡೆಗೋಡೆ ನಿರ್ಮಾಣವಾಗಲಿದ್ದು ಅಂದಾಜು 7 ಕೋಟಿ ವೆಚ್ಚವಾಗಲಿದೆ ಎಂದು ಲೋಕೋಪಯೋಗಿ ಅಧಿಕಾರಿಗಳು ತಿಳಿಸಿದ್ದಾರೆ.