ಮಡಿಕೇರಿ, ನ. 20: ಆಧುನಿಕ ಮನುಷ್ಯನು ಅನುಭವಿಸುತ್ತಿರುವ ಸಮಸ್ಯೆಗಳಿಂದ ಹೊರಬರಬೇಕಾದಲ್ಲಿ ದಾರ್ಶನಿಕತೆಯೆಡೆಗೆ ಹಾಗೂ ಧರ್ಮದೆಡೆಗೆ ಮರಳ ಬೇಕಾಗಿದೆ ಎಂದು ಮಂಗಳೂರಿನ ಶಾಂತಿಪ್ರಕಾಶನದ ವ್ಯವಸ್ಥಾಪಕ, ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಕಾರ್ಯದರ್ಶಿ ಎಂ.ಹೆಚ್. ಮುಹಮ್ಮದ್ ಕುಂಞÂ ಅಭಿಪ್ರಾಯಪಟ್ಟಿದ್ದಾರೆ.

ಅವರು ಮಡಿಕೇರಿಯ ಕಾರುಣ್ಯ ಸದನದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಸ್ಥಾನೀಯ ಶಾಖೆ ಪ್ರವಾದಿ ಮುಹಮ್ಮದ್ ಮಾನವಕುಲದ ಶ್ರೇಷ್ಠ ಮಾರ್ಗದರ್ಶಕ ಸೀರತ್ ಅಭಿಯಾನದ ಅಂಗವಾಗಿ ಏರ್ಪಡಿಸಿದ್ದ ವಿಚಾರ ವಿನಿಮಯ ಕಾರ್ಯಕ್ರಮದಲ್ಲಿ ವಿಷಯಮಂಡನೆ ಮಾಡುತ್ತಾ ಮಾತನಾಡುತ್ತಿದ್ದರು. ಕೊರೊನಾ ನಂತರದ ದಿನಗಳಲ್ಲಿ ಹಲವು ವಾಸ್ತವಿಕತೆಗಳನ್ನು ಅಂಗೀಕರಿಸಬೇಕಿದೆ. ಧರ್ಮಗಳು ಮನುಷ್ಯನಿಗೆ ಬದುಕಿನ ಚೌಕಟ್ಟನ್ನು ಕಲಿಸಿವೆ ಹಾಗೂ ತಮ್ಮ ಗೌರವದ ಅರಿವನ್ನು ಮೂಡಿಸಿದೆ. ಧಾರ್ಮಿಕ ಚಿಂತನೆಗಳು ಮನುಷ್ಯನ ಬದುಕಿಗೆ ಆದರ್ಶದ ಬೆಂಬಲವನ್ನು ನೀಡಿದವು. ದೇವನ ಪ್ರವಾದಿಗಳು ಧರ್ಮದೆಡೆಗೆ ಮರಳಬೇಕೆಂದು ಜನರಿಗೆ ಆಹ್ವಾನ ನೀಡಿದರು. ಅದುವೇ ಪ್ರವಾದಿತ್ವದ ವಾಸ್ತವಿಕತೆಯಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿದ್ದ ಅಂಕಣಗಾರ್ತಿ ಉಷಾ ಪ್ರೀತಮ್ ಮಾತನಾಡಿ, ಧರ್ಮಗಳಲ್ಲಿ ಯಾವುದೇ ದೋಷಗಳು ಕಾಣುವುದಿಲ್ಲ. ಆದರೆ ಧರ್ಮದ ಅನುಯಾಯಿಗಳು ಎಂದೆನಿಸಿಕೊಂಡವರೇ ಧರ್ಮವನ್ನು ತಪ್ಪಾಗಿ ಗ್ರಹಿಸಿಕೊಂಡಿರುವುದರಿಂದ ಸಮಸ್ಯೆಗಳು ಉದ್ಭವಿಸಿವೆ. ಧರ್ಮಗಳ ನೈಜ ಸಾರವನ್ನು ಬಿತ್ತರಿಸುವುದರ ಮೂಲಕ ಆರೋಗ್ಯವಂತ ಸ್ವಸ್ಥ ಸಮಾಜವನ್ನು ನಿರ್ಮಿಸುವ ಗುರಿಯನ್ನು ಪ್ರವಾದಿ ಮುಹಮ್ಮದ್ ಸೇರಿದಂತೆ ಎಲ್ಲಾ ದಾರ್ಶನಿಕರೂ ಜನರಿಗೆ ಸಂದೇಶ ನೀಡಿದ್ದರು ಎಂದರು.

ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮೆಹಬೂಬ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಆಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ವಲಯ ಸಂಚಾಲಕ ಯು.ಅಬ್ದುಸ್ಸಲಾಂ ಸಮಾರೋಪ ನುಡಿಗಳನ್ನು ಆಡಿದರು. ಸ್ಥಾನೀಯ ಅಧ್ಯಕ್ಷ ಜಿ.ಹೆಚ್.ಮುಹಮ್ಮದ್ ಹನೀಫ್ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಅಬ್ದುಲ್ಲಾ ಧನ್ಯವಾದವಿತ್ತರು.