ಮಡಿಕೇರಿ, ನ. 20: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನ ವಿರೋಧಿ ನೀತಿಯನ್ನು ಖಂಡಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ (ಜೆಸಿಟಿಯು) ರಾಜ್ಯ ವ್ಯಾಪಿ ಕರೆ ನೀಡಿರುವ ಅಖಿಲ ಭಾರತ ಮುಷ್ಕರಕ್ಕೆ ಬೆಂಬಲವಾಗಿ ತಾ. 26 ರಂದು ಕೊಡಗಿನ ವಿವಿಧೆಡೆ ಪ್ರತಿಭಟನೆ ನಡೆಸಲಾಗುವುದೆಂದು ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಬಿ. ರಮೇಶ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 11 ಗಂಟೆಗೆ ಮಡಿಕೇರಿಯ ಜಿಲ್ಲಾಡಳಿತ ಕಚೇರಿ, ವೀರಾಜಪೇಟೆ ಮತ್ತು ಸೋಮವಾರಪೇಟೆಯಲ್ಲಿ ಅಲ್ಲಿನ ತಾಲೂಕು ಕಚೇರಿಗಳ ಎದುರು ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು. ಸಿಐಟಿಯುನ ಜಿಲ್ಲಾಧ್ಯಕ್ಷ ಎ. ಮಹದೇವು, ಎಐಟಿಯುಸಿ ಜಿಲ್ಲಾಧ್ಯಕ್ಷ ಹೆಚ್.ಎಂ. ಸೋಮಪ್ಪ ಅವರುಗಳು ಮಾತನಾಡಿ, ಕಾರ್ಮಿಕ ಹಕ್ಕನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಿತ್ತುಕೊಂಡಿದೆ ಎಂದು ಟೀಕಿಸಿದರು. ಐಎನ್‍ಟಿಯುಸಿ ಜಿಲ್ಲಾಧ್ಯಕ್ಷ ಗೋವಿಂದರಾಜ್ ದಾಸ್ ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ರೈತ, ಕಾರ್ಮಿಕ ವಿರೋಧಿ ನೀತಿ ವಿರುದ್ಧ ಜಂಟಿ ಹೋರಾಟ ಅಗತ್ಯವೆಂದರು.

ಸಿಐಟಿಯು ಉಪ ಕಾರ್ಯದರ್ಶಿ ಪಿ.ಆರ್. ಭರತ್ ಮಾತನಾಡಿ, ಕೊರೊನಾ ಸಂಕಷ್ಟದ ಸಮಯದಲ್ಲಿ ಕಾರ್ಮಿಕರು, ರೈತರು, ದಲಿತರನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗೋಷ್ಠಿಯಲ್ಲಿ ಸಿಐಟಿಯು ಪ್ರಧಾನ ಕಾರ್ಯದರ್ಶಿ ಎ.ಸಿ. ಸಾಬು ಉಪಸ್ಥಿತರಿದ್ದರು.