ಮಡಿಕೇರಿ, ನ. 20; ಒಂದೊಮ್ಮೆ ಎಲ್ಲಿ ನೋಡಿದರಲ್ಲಿ ಹಸುರ ಸಿರಿಯಿಂದ ಕಂಗೊಳಿಸುತ್ತಿದ್ದ.., ಮಂಜಿನ ನಗರಿಯೆಂದೇ ಖ್ಯಾತಿವೆತ್ತ..., ದಕ್ಷಿಣ ಕಾಶ್ಮೀರದ ಕಿರೀಟ ಮಡಿಕೇರಿಯೀಗ ಕಸದ ನಗರಿಯೆಂದೇ ಪ್ರಸಿದ್ಧವಾಗುತ್ತಿದೆ..., ಕಸ ಸಮಸ್ಯೆ ನಿವಾರಿಸಲು ನಗರಸಭೆ ಅದೇನೇನೋ ಕ್ರಮ ಕೈಗೊಂಡರೂ ಬುದ್ಧಿವಂತ, ಪ್ರಜ್ಞಾವಂತರ ಬೀಡಾಗಿರುವ ನಗರದ ಪ್ರಜೆಗಳು ಮಾತ್ರ ಹಾದಿ, ಬೀದಿಗಳನ್ನು ಕೊಳಚೆ ಮಾಡದೆ ಬಿಡುವದಿಲ್ಲವೆಂಬ ಪ್ರತಿಜ್ಞೆ ತೊಟ್ಟಂತಿದೆ...!ತನ್ನ ಮನೆ, ಮನೆಯೆದುರು ಮಾತ್ರ ಸಿಂಗರಿಸಿಕೊಳ್ಳುವ ಮಂದಿ ಮತ್ತೊಬ್ಬರ ಮನೆಯೆದುರು, ರಸ್ತೆ ಬದಿಯಲ್ಲಿ ತಮ್ಮ ಮನೆಯ ತ್ಯಾಜ್ಯಗಳನ್ನು ಸುರಿದು ವಿಕೃತಾನಂದ ಅನುಭವಿಸುತ್ತಿದ್ದಾರೆ..! ಅದರಲ್ಲೂ ನಗರ ವ್ಯಾಪ್ತಿಯಲ್ಲಿ ಅನಧಿಕೃತ ಹೋಂಸ್ಟೇ ನಡೆಸುವವರಂತೂ ಅವರಿಗೆ ಬಳುವಳಿಯಾಗಿ ಕೊಟ್ಟ ಅಂಗಳವೆಂಬಂತೆ ರಸ್ತೆಗೆ ಕಸ ಸುರಿದು ಹೋಗುತ್ತಾರೆ... !ಇದುವರೆಗಿದ್ದ ನಗರಸಭೆ ಆಡಳಿತ ಮಂಡಳಿಯಾಗಲೀ.., ನಂತರದಲ್ಲಿ ಅಧಿಕಾರ ವಹಿಸಿಕೊಂಡ ಆಡಳಿತಾಧಿಕಾರಿಯಾಗಲೀ ಈ ಬಗ್ಗೆ ತಲೆ ಕೆಡಿಸಿಕೊಂಡಿದ್ದಿಲ್ಲ..., ಆದರೀಗ ನಗರಸಭಾ ಅಧಿಕಾರಿಗಳು ನಗರ ಸ್ವಚ್ಛತೆಗೆ ಆದ್ಯತೆ ನೀಡಿದ್ದು, ಎಲ್ಲೆಂದರಲ್ಲಿ ಕಸ ಎಸೆಯುವವರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ.

ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳ ಸಹಿತ ರಾತೋರಾತ್ರಿ ಕಾರ್ಯಾಚರಣೆ ಗಿಳಿದಿದ್ದು, ಕಸ ಮುಕ್ತ ನಗರವಾಗಿಸುವತ್ತ ದಿಟ್ಟ ಹೆಜ್ಜೆಯನ್ನಿರಿಸಿದ್ದಾರೆ...!

ಈ ಹಿಂದೆ ಮಡಿಕೇರಿಯಲ್ಲಿ ಅಲ್ಲಲ್ಲಿ ಕಸದ ತೊಟ್ಟಿಗಳಿದ್ದವು. ನಾಗರಿಕರು ಕಸಗಳನ್ನು ತೊಟ್ಟಿಗೆ ಸುರಿಯುತಿದ್ದರು. ನಗರಸಭೆಯ ಕಸದ ವಾಹನಗಳು ತೊಟ್ಟಿಯಲ್ಲಿದ್ದ ಕಸಗಳನ್ನು ಕೊಂಡೊಯ್ದು ವಿಲೇವಾರಿ ಮಾಡುತಿದ್ದವು. ನಂತರದಲ್ಲಿ ನ್ಯಾಯಾಲಯದ ಆದೇಶದಂತೆ ಈ ಹಿಂದೆ ಆಯುಕ್ತರಾಗಿದ್ದ ಶುಭ ಅವರು ನಗರದಲ್ಲಿದ್ದ ಕಸದ ತೊಟ್ಟಿಗಳನ್ನು ತೆರವುಗೊಳಿಸಿದರು. ಮನೆ ಮನೆಗಳಿಂದ ಕಸ ಸಂಗ್ರಹಿಸುವ ಅಭಿಯಾನ ಆರಂಭವಾಯಿತು.

ಅಲ್ಲಿಂದ ಶುರುವಾಯ್ತು ಎಲ್ಲೆಂದರಲ್ಲಿ ಕಸ ಎಸೆಯುವ ಕೆಲಸ.., ಮನೆ ಮನೆಗಳಿಗೆ ನಗರಸಭೆ ವಾಹನಗಳು ಬರುವ ವೇಳೆಗೆ ಕೆಲವರು ಎದ್ದಿರೊಲ್ಲ, ಇನ್ನೂ ಕೆಲವರಿಗೆ ಕಸ ಹಾಕಲು ಸಮಯವಿರಲ್ಲ..,

(ಮೊದಲ ಪುಟದಿಂದ) ಹಾಗಾಗಿ ವಾಹನ ಹೋದ ಬಳಿಕ ಎಲ್ಲೆಂದರಲ್ಲಿ ಕಸ ಸುರಿಯಲಾರಂಭವಾಯಿತು. ಅದಕ್ಕಿಂತ ಹೆಚ್ಚಾಗಿ ಹೋಂಸ್ಟೇ, ರೆಸಾರ್ಟ್‍ಗಳ ಕಸಗಳು ತುಂಬತೊಡಗಿದವು..!

ತದನಂತರದಲ್ಲಿ ಕಸ ಸುರಿಯುವ ಸ್ಥಳಗಳಲ್ಲಿ ನಗರ ಸಭೆ ವತಿಯಿಂದ ಕಸ ಸುರಿದರೆ ದಂಡ ವಿಧಿಸಲಾಗುವದೆಂಬ ಫಲಕ ಅಳವಡಿಸಿದಲ್ಲದೆ ಕೆಲವೆಡೆ ಸಿಸಿ ಕ್ಯಾಮರಾ ಕೂಡ ಅಳವಡಿಸಲಾಯಿತು. ಆದರೂ ಕಸ ಸುರಿಯುವದೂ ಮಾತ್ರ ನಿಲ್ಲಲೇ ಇಲ್ಲ...!

ಈ ನಿಟ್ಟಿನಲ್ಲಿ ಇದೀಗ ನಗರ ಸಭೆ ಕಠಿಣ ಕ್ರಮಕ್ಕೆ ಮುಂದಾಗಿದೆ. ಆಯುಕ್ತ ರಾಮ್‍ದಾಸ್, ಪರಿಸರ ನೈರ್ಮಲ್ಯ ಅಧಿಕಾರಿ ರೀತೂ ಸಿಂಗ್, ಆರೋಗ್ಯ ವಿಭಾಗದ ಹರಿಣಿ, ಪೌರ ಸಿಬ್ಬಂದಿಗಳು ರಾತ್ರಿ ಕಾರ್ಯಾಚರಣೆಗೆ ಇಳಿದಿದ್ದಾರೆ. ರಾತ್ರಿ ಗಸ್ತು ತಿರುಗುತ್ತಿರುವ ಈ ತಂಡ ರಾತ್ರಿ ವೇಳೆ ರಸ್ತೆ ಬದಿ ಕಸ ಸುರಿಯುತ್ತಿರುವವರನ್ನು ಹಿಡಿದು ಕಸವನ್ನು ಮರಳಿ ಕಳುಹಿಸುವುದಲ್ಲದೆ ದಂಡ ವಿಧಿಸುತ್ತಿದೆ. ಇದರೊಂದಿಗೆ ಕಸವನ್ನು ಎಲ್ಲೆಂದರಲ್ಲಿ ಎಸೆಯದಂತೆ ಜಾಗೃತಿ ಕೂಡ ಮೂಡಿಸುತ್ತಿದೆ.

ಪ್ಲಾಸ್ಟಿಕ್‍ಗೆ ದಂಡ: ಇದರೊಂದಿಗೆ ನಗರವನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವ ನಿಟ್ಟಿನಲ್ಲಿ ಕಠಿಣ ಕ್ರಮಕ್ಕೆ ನಗರಸಭೆ ಮುಂದಾಗಿದೆ. ಈಗಾಗಲೇ ಪ್ಲಾಸ್ಟಿಕ್ ಮಾರಾಟ, ಬಳಕೆ ಮಾಡುವ ಅಂಗಡಿ ಮಳಿಗೆಗಳಿಗೆ ದಾಳಿ ಮಾಡಿ ದಂಡ ವಿಧಿಸಲಾಗಿದೆ. ಈಗಾಗಲೇ ವಿವಿಧ ಅಂಗಡಿಗಳಿಗೆ ದಾಳಿ ಮಾಡಿ ಸುಮಾರು 80 ಕೆ.ಜಿ.ಯಷ್ಟು ಪ್ಲಾಸ್ಟಿಕ್‍ಗಳನ್ನು ವಶಪಡಿಸಿಕೊಂಡು ದಂಡ ವಿಧಿಸಲಾಗಿದೆ. ಹೆಚ್ಚಿನದಾಗಿ ಸ್ಪೈಸಸ್ ಮಳಿಗೆಗಳಲ್ಲಿ ಪ್ಲಾಸ್ಟಿಕ್ ಕಂಡು ಬರುತ್ತಿದ್ದು ಬಳಕೆ ಮಾಡದಂತೆ ಸೂಚನೆ ನೀಡಲಾಗಿದೆ, ಮತ್ತೂ ಬಳಕೆ ಮಾಡಿದಲ್ಲಿ ಕ್ರಮ ಕೈಗೊಳ್ಳುವದಾಗಿ ಪೌರಾಯುಕ್ತ ರಾಮ್‍ದಾಸ್ ಎಚ್ಚರಿಕೆ ನೀಡಿದ್ದಾರೆ. ಇತರ ಅಂಗಡಿ ಮಳಿಗೆಯವರು, ವ್ಯಾಪಾರಸ್ತರು ಪ್ಲಾಸ್ಟಿಕ್ ಬಳಕೆ ಮಾಡದಂತೆ ಕೋರಿದ್ದಾರೆ.

ಲೈಸೆನ್ಸ್ ಪಡೆಯಿರಿ: ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಬಹುತೇಕ ಮಂದಿ ವ್ಯಾಪಾರಸ್ತರು ಪರವಾನಗಿ ಇಲ್ಲದೆ, ಪರವಾನಗಿ ನವೀಕರಿಸಿಕೊಳ್ಳದೆ ವ್ಯಾಪಾರ ಮಾಡುತ್ತಿರುವದು ಗಮನಕ್ಕೆ ಬಂದಿದೆ. ಅಂತಹವರು ಕೂಡಲೇ ಪರವಾನಗಿ ಪಡೆದುಕೊಳ್ಳುವಂತೆ, ನವೀಕರಣ ಮಾಡಿಕೊಳ್ಳಬೇಕಿದೆ, ಇಲ್ಲವಾದಲ್ಲಿ ವ್ಯಾಪಾರ ವಹಿವಾಟನ್ನು ರದ್ದು ಮಾಡಲಾಗುವದೆಂಬ ಎಚ್ಚರಿಕೆಯನ್ನು ಆಯುಕ್ತರು ನೀಡಿದ್ದಾರೆ. ಪ್ರಸ್ತುತ ಎಲ್ಲೆಡೆ ಕಸಾಂದೋಲನ ಆರಂಭವಾಗಿದ್ದು, ಜಾಗೃತರಾಗಿರುವ ಜನತೆ, ಸಂಘ-ಸಂಸ್ಥೆಗಳು ಕಸ ನಿರ್ಮೂಲನೆ ಮಾಡುವತ್ತ ಹೆಜ್ಜೆಯಿರಿಸಿದ್ದಾರೆ. ಮಡಿಕೇರಿಯಲ್ಲಿ ಈ ಕಾರ್ಯ ಅಗತ್ಯವಾಗಿ ಆಗಬೇಕಾಗಿದೆ.

ಹದಗೆಟ್ಟಿದ್ದ ನಗರಸಭೆ ಇನ್ನಾದರೂ ಒಂದಿಷ್ಟು ಚುರುಕಾಗಬಹುದು.., ಜನಸಾಮಾನ್ಯರಿಗೆ ನೆಮ್ಮದಿಯ ಬದುಕಿನೊಂದಿಗೆ ಪರಿಹಾರ ಸಿಗಬಹುದೆಂಬ ನಿರೀಕ್ಷೆಯಲ್ಲಿರುವವರಿಗೆ ಅಧಿಕಾರಿ ವರ್ಗದವರಿಂದ ಸಮಾಧಾನ ದೊರಕಬಹುದೋ.., ಅಥವಾ ಈ ಹಿಂದಿನಂತೆಯೇ ‘ಅದೇ ರಾಗ ಅದೇ ಹಾಡು...’ ಎಂಬಂತಾಗುತ್ತೋ...? ಆ ದೇವನೇ ಬಲ್ಲ....!

ವರದಿ: ಕುಡೆಕಲ್ ಸಂತೋಷ್