ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ.ಜಾತಿ, ವರ್ಗಗಳ ಸಭೆ

ಗೋಣಿಕೊಪ್ಪಲು, ನ. 19: ಈ ದೇಶದ ಕಾನೂನನ್ನು ಗೌರವಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಗೋಣಿಕೊಪ್ಪ ಪೊಲೀಸ್ ಠಾಣೆಯ ನೂತನ ಠಾಣಾಧಿಕಾರಿ ಹೆಚ್. ಸುಬ್ಬಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು. ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಆಯೋಜನೆ ಗೊಂಡಿದ್ದ ಪ.ಜಾತಿ, ಪರಿಶಿಷ್ಟ ವರ್ಗಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಠಾಣಾಧಿಕಾರಿ ಸರ್ಕಾರದ ಸುತ್ತೋಲೆಯಂತೆ ಬಡ ಜನತೆಯ ಕಷ್ಟಗಳನ್ನು ಆಲಿಸುವುದು, ಹಾಗೂ ಕಷ್ಟಗಳಿಗೆ ಕಾನೂನಾತ್ಮಕವಾಗಿ ನ್ಯಾಯ ಕೊಡಿಸುವುದು ಪೊಲೀಸರ ಕರ್ತವ್ಯವಾಗಿದೆ.

ಈ ನಿಟ್ಟಿನಲ್ಲಿ ಪ್ರತಿ ತಿಂಗಳು ಬಡ ವರ್ಗದ ಜನರೊಂದಿಗೆ ಸಭೆ ಮಾಡಬೇಕಾಗಿದ್ದು, ಸಭೆ ಆಯೋಜಿಸಲಾಗಿದೆ; ಮುಂದೆ ಹಾಡಿ, ಕಾಲೋನಿ ಮಟ್ಟದಲ್ಲಿ ಸಭೆಗಳನ್ನು ಮಾಡಲಾಗುವುದು. ಆ ಸಂದರ್ಭ ಸ್ಥಳೀಯವಾಗಿಯೇ ತಮ್ಮಲ್ಲಿರುವ ಸಮಸ್ಯೆಗಳನ್ನು ಪೊಲೀಸರೊಂದಿಗೆ ಹಂಚಿಕೊಳ್ಳಲು ಅವಕಾಶ ನೀಡಲಾಗುತ್ತದೆ. ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಲು ವಿಶೇಷ ಆಸಕ್ತಿ ವಹಿಸಬೇಕು.

ಮಕ್ಕಳಿಗೆ ವಿದ್ಯಾಭ್ಯಾಸವೇ ಬಹುದೊಡ್ಡ ಆಸ್ತಿ. ಅಂಬೇಡ್ಕರ್ ಕೂಡ ಇಂದು ವಿಶ್ವಮಟ್ಟದಲ್ಲಿ ಹೆಸರು ಮಾಡಲು ವಿದ್ಯಾಭ್ಯಾಸವೇ ಮೂಲ ಕಾರಣ. ಇವರ ಮಾರ್ಗಗಳನ್ನು ಅಳವಡಿಸಿ ಕೊಂಡು ಮುಂದೆ ಸಾಗಬೇಕು ಎಂದು ಹೇಳಿದರು.

ಕಾನೂನು ಬಾಹಿರ ಚಟುವಟಿಕೆಗಳಿಗೆ ಎಂದೂ ಕೂಡ ಇಲಾಖೆ ಅವಕಾಶ ನೀಡುವುದಿಲ್ಲ. ಅನವಶ್ಯಕವಾಗಿ ಸಮಾಜದ ಬಡವರಿಗೆ ತೊಂದರೆ ನೀಡುವವರನ್ನು ಕೂಡ ಪೊಲೀಸ್ ಇಲಾಖೆ ಸಹಿಸುವುದಿಲ್ಲ, ಯಾವುದೇ ಸಂದರ್ಭದಲ್ಲಿ ತೊಂದರೆ ಎದುರಾದಾಗ ಪೊಲೀಸ್ ಠಾಣೆಗೆ ನೇರವಾಗಿ ಆಗಮಿಸಿ ತಮ್ಮ ಸಮಸ್ಯೆಗಳನ್ನು ಪೊಲೀಸರ ಮುಂದೆ ಹೇಳಿಕೊಳ್ಳಬಹುದು ಎಂದರು.

ಮುಖಂಡರಾದ ಪರಶುರಾಮ್, ಕುಮಾರ್ ಮಹಾದೇವ್, ಲಕ್ಷ್ಮಿ, ಕುಮಾರ್, ಸಿಂಗಿಸತೀಶ್, ಮುಂತಾದವರು ಬಡ ಜನತೆಗೆ ಆಗುತ್ತಿರುವ ಶೋಷಣೆಯ ಬಗ್ಗೆ ಅಧಿಕಾರಿಗಳ ಗಮನ ಸೆಳೆದರು. ನಗರದಲ್ಲಿ ಗಾಂಜಾ ವ್ಯಸನಿಗಳ ಬಗ್ಗೆ ಕ್ರಮ ಕೈಗೊಳ್ಳುವುದು, ಆಯಾಕಟ್ಟಿನ ಪ್ರದೇಶದಲ್ಲಿ ಪುಂಡಾಟಿಕೆ ನಡೆಸುವವರ ಮೇಲೆ ಕ್ರಮ ಕೈಗೊಳ್ಳುವುದು ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಸುಧೀರ್ಘ ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ ಪೊಲೀಸ್ ಠಾಣೆಗೆ ಸಿಂಗಿ ಸತೀಶ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ಕೊಡುಗೆಯಾಗಿ ನೀಡಿದರು. ತಿತಿಮತಿ ಅರುವತೋಕ್ಲು, ಗೋಣಿಕೊಪ್ಪ ಭಾಗದಿಂದ ಹಲವು ಮುಖಂಡರು ಭಾಗವಹಿಸಿದ್ದರು. ಠಾಣೆಯ ಸಿಬ್ಬಂದಿ ಸ್ವಾಗತಿಸಿ, ವಂದಿಸಿದರು.