ನಾಪೆÇೀಕ್ಲು, ನ. 19: ನೆಲಜಿ ಗ್ರಾಮದಿಂದ ಪೇರೂರು ಗ್ರಾಮದ ಮೂಲಕ ಬಲ್ಲಮಾವಟಿ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಮೋರಿ ಕಾಮಗಾರಿಯ ಕಾರಣದಿಂದ ಬಂದ್ ಮಾಡಲಾಗಿದ್ದು, ಬದಲಿ ವ್ಯವಸ್ಥೆಯಿಲ್ಲದೆ ಗ್ರಾಮಸ್ಥರು ಪರದಾಡುವಂತಾಗಿದೆ. ಮೋರಿ ನಿರ್ಮಿಸುವ ಸಲುವಾಗಿ ಒಂದು ವಾರದ ಹಿಂದೆ ರಸ್ತೆಗೆ ಅಡ್ಡಲಾಗಿ ಗುಂಡಿ ನಿರ್ಮಿಸಲಾಗಿದೆ. ಆದರೆ, ಇಂದಿನ ತನಕ ಕಾಮಗಾರಿ ಆರಂಭಿಸಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಈ ಬಗ್ಗೆ ಬಲ್ಲಮಾವಟಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ಪ್ರಶ್ನಿಸಿದಾಗ ಕೂಡಲೇ ಕಾಮಗಾರಿ ಆರಂಭಿಸಲಾಗುವದು ಎಂದು ಹೇಳುತ್ತಾ ಬಂದಿದ್ದಾರೆ ಎನ್ನಲಾಗಿದೆ. ಈ ವ್ಯಾಪ್ತಿಯ ಸಾರಿಗೆ ವ್ಯವಸ್ಥೆಗಾಗಿ ಬೆಳಿಗ್ಗೆ ಮತ್ತು ಸಂಜೆ ರಸ್ತೆ ಸಾರಿಗೆ ಸಂಸ್ಥೆಯ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ರಸ್ತೆ ಬಂದ್ ಆದ ಕಾರಣ ಬಸ್ ಸೇರಿದಂತೆ ಯಾವದೇ ವಾಹನ ಈ ರಸ್ತೆಯಲ್ಲಿ ಓಡಾಡಲು ಸಾಧ್ಯವಾಗದೆ ಗ್ರಾಮಸ್ಥರಿಗೆ ತೊಂದರೆ ಉಂಟಾಗಿದೆ. ಆದ್ದರಿಂದ ಮೋರಿ ಕಾಮಗಾರಿ ಮುಗಿಯುವವರೆಗೆ ಸಮೀಪದಲ್ಲಿ ರಸ್ತೆ ನಿರ್ಮಿಸಿ ಬದಲಿ ವ್ಯವಸ್ಥೆ ಕಲ್ಪಿಸಬೇಕೆಂದು ಈ ವ್ಯಾಪ್ತಿಯ ಸಾರ್ವಜನಿಕರು, ಗ್ರಾಮಸ್ಥರು ಮನವಿ ಮಾಡಿದ್ದಾರೆ.