ಕಣಿವೆ, ನ.19 : ಹಸುಗಳನ್ನು ಅರಣ್ಯಕ್ಕೆ ಅಟ್ಟಿ ಮೇಯಿಸುವ ಅರಣ್ಯದಂಚಿನ ಕೃಷಿಕರು, ಕರುಗಳು ಹಸುಗಳಿಂದ ಹಾಲು ಕುಡಿಯದಂತೆ ಕರುಗಳ ಕೊರಳಿಗೂ; ಹಸುಗಳು ಕೃಷಿಕರ ಬೆಳೆಗಳನ್ನು ತಿನ್ನದಂತೆ ಹಸುಗಳ ಕೊರಳಿಗೂ ಉದ್ದದ ಬಡಿಗೋಲು ಕಟ್ಟಿ ಅವುಗಳಿಗೆ ಹಿಂಸಿಸುವ ಮತ್ತು ನೋಯಿಸುವ ಕೆಲಸಕ್ಕೆ ಮುಂದಾಗುತ್ತಾರೆ. ಇಂತಹ ಒಂದು ಚಿತ್ರಣ ಗುರುವಾರ ಹೆರೂರು ಅರಣ್ಯದ ಬಳಿ ಕಂಡುಬಂತು.

ಮನೆಯಂಗಳದಲ್ಲಿ ಕಟ್ಟಿ ಸಾಕಬೇಕಾದ ಗೋವುಗಳನ್ನು ಕಾಡಿಗಟ್ಟಿ, ಅಲ್ಲಿನ ವನ್ಯಪ್ರಾಣಿಗಳ ಮೇವಿಗೆ ಭಂಗ ತರುವ ಈ ಜನರು ಹಸುಗಳು ನೀಡುವ ಹಾಲನ್ನು ತಾವು ಕುಡಿಯಲು ಹಾಗೂ ಮಾರುವದಕ್ಕಾಗಿ ಹಾಲನ್ನು ಕರುಗಳು ಕುಡಿಯದಂತೆ ತಡೆಯುವ ಪರಿ ಬೇಸರ ಮೂಡಿಸುತ್ತದೆ.

ಹೈನುಗಾರಿಕೆ ಮಾಡುವ ಕೃಷಿಕರು ತಮ್ಮ ಹೊಲಗದ್ದೆಗಳಲ್ಲಿ ಗೋವುಗಳಿಗಾಗಿಯೇ ಹುಲ್ಲು ಬೆಳೆಸಿ ಹಸುಗಳಿಗೆ ತಿನ್ನಿಸಿ ಹಾಲು ಕರೆಯುತ್ತಾರೆ. ಆದರೆ ಕಾಡಂಚಿನ ಈ ಜನರು ಗೋವುಗಳ ಮೇವಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಗೋವುಗಳ ಮೇವಿಗೆ, ನೀರಿಗೆ ಹಾಗೂ ಹುಲ್ಲಿಗೆ ಅರಣ್ಯವನ್ನೇ ಅವಲಂಭಿಸುತ್ತಾರೆ. ಹೀಗಿರುವಾಗ ಯಾವ ಖರ್ಚೂ ಇಲ್ಲದೇ ಹಸು ಕೊಡುವ ಹಾಲನ್ನು ಅದರ ಕರು ಕುಡಿಯದಂತೆ ತಡೆಯುವ ಪದ್ಧತಿ ನಿಲ್ಲಬೇಕಿದೆ.

ಮೂಕ ಪ್ರಾಣಿಗಳಿಗೆ ನೀಡುವ ಇಂತಹ ಹಿಂಸಾ ಪ್ರವೃತ್ತಿಯನ್ನು ನಿಲ್ಲಿಸಿ ತಮ್ಮ ತಮ್ಮ ಗೋವುಗಳನ್ನು ತಮ್ಮ ತೋಟಗಳಲ್ಲಿ ಮೇಯಿಸಿ ಆರೈಕೆ ಮಾಡುವ ಮನಸ್ಥಿತಿ ಎಲ್ಲರಿಗೂ ಬರಬೇಕಿದೆ. - ಮೂರ್ತಿ