ಎನ್‍ಕೌಂಟರ್‍ನಲ್ಲಿ 4 ಉಗ್ರರು ಬಲಿ

ಶ್ರೀನಗರ, ನ. 19: ಶ್ರೀನಗರ ರಾಷ್ಟ್ರೀಯ ಹೆದ್ದಾರಿ ನಾಗ್ರೊಟಾದಲ್ಲಿ ನಡೆದ ಎನ್‍ಕೌಂಟರ್‍ನಲ್ಲಿ ಹತರಾದ ನಾಲ್ವರು ಉಗ್ರರು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುವ ಜಿಲ್ಲಾ ಅಭಿವೃದ್ಧಿ ಮಂಡಳಿಯ (ಡಿಡಿಸಿ) ಚುನಾವಣೆಗೆ ಅಡ್ಡಿಯುಂಟು ಮಾಡುವ ಉದ್ದೇಶವನ್ನು ಹೊಂದಿದ್ದರು ಎಂಬ ವಿಚಾರ ಇದೀಗ ಬಹಿರಂಗಗೊಂಡಿದೆ. ಇಂದು ಬೆಳಿಗ್ಗೆ ಜಮ್ಮು ಮತ್ತು ಕಾಶ್ಮೀರ ನಾಗ್ರೊಟಾದಲ್ಲಿ ಭಾರತೀಯ ಸೇನಾಪಡೆ ಎನ್‍ಕೌಂಟರ್ ನಡೆಸಿದ್ದು, ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆ ನಾಲ್ವರು ಉಗ್ರರನ್ನು ಹತ್ಯೆ ಮಾಡಿದ್ದರು. ಎನ್‍ಕೌಂಟರ್ ಕುರಿತು ಮಾಹಿತಿ ನೀಡಿರುವ ಕಾಶ್ಮೀರದ ಐಜಿಪಿ ವಿಜಯ್‍ಕುಮಾರ್ ಅವರು, ಜಮ್ಮು ಮತ್ತು ಕಾಶ್ಮೀರದಲ್ಲಿನ ರಾಜಕೀಯ ಪ್ರಕ್ರಿಯೆಯನ್ನು ನಾಶಪಡಿಸಲು ಪಾಕಿಸ್ತಾನ ಪ್ರಯತ್ನಿಸುತ್ತಿದೆ. ಇದಕ್ಕಾಗಿಯೇ ಕಳೆದ ಕೆಲವು ದಿನಗಳಿಂದ ಭಾರತದೊಳಗೆ ನುಸುಳುವಂತೆ ಉಗ್ರರಿಗೆ ಪಾಕಿಸ್ತಾನ ಪ್ರಚೋದನೆ ನೀಡುತ್ತಿದೆ. ಆದರೆ, ಜಮ್ಮು ಮತ್ತು ಕಾಶ್ಮೀರ ಪೆÇಲೀಸರು ಹಾಗೂ ಭದ್ರತಾ ಪಡೆಗಳು ತೀವ್ರ ಕಟ್ಟೆಚ್ಚರ ವಹಿಸಿರುವುದರಿಂದ ಉಗ್ರರ ನುಸುಳುವಿಕೆ ಪ್ರಯತ್ನಗಳು ವಿಫಲಗೊಳ್ಳುತ್ತಿವೆ. ಪ್ರಸ್ತುತ ಹತ್ಯೆಯಾಗಿರುವ ಈ ನಾಲ್ವರು ಉಗ್ರರು ಚುನಾವಣಾ ಪ್ರಕ್ರಿಯೆಗೆ ಅಡ್ಡಿಪಡಿಸುವ ಉದ್ದೇಶವನ್ನು ಹೊಂದಿದ್ದರು ಎಂದು ಹೇಳಿದ್ದಾರೆ.

ಉನ್ನತ ಮಟ್ಟದ ತಾಂತ್ರಿಕತೆಗಳಲ್ಲಿ ಹೂಡಿಕೆ

ಬೆಂಗಳೂರು, ನ. 19: ಕರ್ನಾಟಕ ರಾಜ್ಯವನ್ನು ಹೂಡಿಕೆಯಲ್ಲಿ ಅದರಲ್ಲೂ ಉನ್ನತ ಮಟ್ಟದ ತಾಂತ್ರಿಕತೆಗಳಲ್ಲಿ ಪ್ರಮುಖ ಆಕರ್ಷಣೀಯ ಹೂಡಿಕೆ ರಾಜ್ಯವನ್ನಾಗಿ ಮಾಡಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಅವರು ಇಂದು “ಬೆಂಗಳೂರು ಟೆಕ್ ಸಮ್ಮಿಟ್ 2020” ಭಾಗವಹಿಸಿ ಮಾತನಾಡಿ, 2025ರ ವೇಳೆಗೆ ಭಾರತದ ಆರ್ಥಿಕತೆಯನ್ನು 5 ಟ್ರಿಲಿಯನ್ ಡಾಲರ್‍ನಷ್ಟು ಮಾಡಲು ಮತ್ತು ಜಾಗತಿಕ ಮಟ್ಟದಲ್ಲಿ ಆರ್ಥಿಕ ಬಲಿಷ್ಠ ದೇಶವನ್ನಾಗಿ ಪರಿವರ್ತಿಸಲು ಪ್ರಧಾನಿ ಮೋದಿ ತೀವ್ರ ಉತ್ಸುಕವಾಗಿದ್ದಾರೆ. ಭಾರತ ಸರ್ಕಾರದ ಈ ದೃಷ್ಟಿಕೋನದಲ್ಲಿ ಸಾಗಲು ಕರ್ನಾಟಕ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು. 2019ರಲ್ಲಿ 7 ಯುನಿಕಾನ್ರ್ಸ್ ಸ್ಟಾರ್ಟ್ ಅಪ್‍ಗಳಲ್ಲಿ 4(1 ಬಿಲಿಯನ್ ಡಾಲರ್ ಮೊತ್ತ) ಬೆಂಗಳೂರಿನದ್ದಾಗಿವೆ ಎಂದರು.

ಟೆಕ್ ಶೃಂಗಸಭೆಯನ್ನು ಉದ್ಘಾಟಿಸಿದ ಪ್ರಧಾನಿ

ಬೆಂಗಳೂರು, ನ. 19: ನಮ್ಮ ಸ್ಥಳೀಯ ತಂತ್ರಜ್ಞಾನಗಳು ಜಾಗತಿಕ ಮಟ್ಟಕ್ಕೇರುವ ಸಾಮಥ್ರ್ಯವನ್ನು ಹೊಂದಿವೆ. ಭಾರತದಲ್ಲಿ ವಿನ್ಯಾಸಗೊಳಿಸ ಲಾದ ತಂತ್ರಜ್ಞಾನಗಳನ್ನು ಜಗತ್ತಿಗೆ ನಿಯೋಜಿಸುವ ಸಮಯ ಈಗ ಬಂದಿದೆ. ಇತ್ತೀಚೆಗೆ ಐಟಿ ಉದ್ಯಮದ ಅನುಸರಣೆ ಹೊರೆಯನ್ನು ಸರಾಗವಾಗಿಸಿದ ಕ್ರಮವೂ ಸೇರಿದಂತೆ ಸರ್ಕಾರದ ನೀತಿ ನಿರ್ಧಾರಗಳು ಯಾವಾಗಲೂ ತಂತ್ರ ಜ್ಞಾನ ಮತ್ತು ನಾವೀನ್ಯತೆ ಉದ್ಯಮವನ್ನು ಉದಾರೀಕರಣಗೊಳಿಸುವ ಗುರಿಯನ್ನು ಹೊಂದಿವೆ ಎಂದು ಪ್ರಧಾನಿ ನರೇಂದ್ರಮೋದಿ ಅವರು ಶ್ಲಾಘಿಸಿದರು. ಬೆಂಗಳೂರು ಟೆಕ್ ಶೃಂಗಸಭೆಯನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಭಾರತದ ಭವಿಷ್ಯದ ನೀತಿ ಚೌಕಟ್ಟುಗಳನ್ನು ರೂಪಿಸಲು ಟೆಕ್ ಉದ್ಯಮದ ಪಾಲುದಾರರನ್ನು ತೊಡಗಿಸಿಕೊಳ್ಳಲು ಸರ್ಕಾರ ಯಾವಾಗಲೂ ಪ್ರಯತ್ನಿಸುತ್ತದೆ. ಇಂದು ಡಿಜಿಟಲ್ ಇಂಡಿಯಾವನ್ನು ಸರ್ಕಾರದ ಒಂದು ಸಾಮಾನ್ಯ ಉಪಕ್ರಮವಾಗಿ ನೋಡುತ್ತಿಲ್ಲ. ಬದಲಿಗೆ ಇದು ವಿಶೇಷವಾಗಿ ಬಡವರಿಗೆ, ಹಿಂದುಳಿದವರಿಗೆ ಮತ್ತು ಸರ್ಕಾರದಲ್ಲಿರುವವರಿಗೆ ಒಂದು ಜೀವನ ವಿಧಾನವಾಗಿದೆ ಎಂದು ಪ್ರಧಾನಿ ಹರ್ಷ ವ್ಯಕ್ತಪಡಿಸಿದರು.

ಸಚಿವ ಡಿ.ವಿ. ಸದಾನಂದಗೌಡÀರಿಗೆ ಕೋವಿಡ್

ಬೆಂಗಳೂರು, ನ. 19: ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಕೊರೊನಾ ಪಾಸಿಟಿವ್ ಬಗ್ಗೆ ಸದಾನಂದ ಗೌಡ ಅವರು ಟ್ವೀಟರ್‍ನಲ್ಲಿ ಸ್ಪಷ್ಟಪಡಿಸಿದ್ದಾರೆ. ಕೋವಿಡ್‍ನ ಆರಂಭಿಕ ರೋಗ ಲಕ್ಷಣಗಳ ಕಾಣಿಸಿಕೊಂಡಿದ್ದು, ಕೂಡಲೇ ನಾನು ಪರೀಕ್ಷಿಸಿಕೊಂಡೆ, ವರದಿ ಪಾಸಿಟಿವ್ ಬಂದಿದೆ. ಸದ್ಯ ನಾನು ಕ್ವಾರಂಟೈನ್‍ನಲ್ಲಿದ್ದು, ನನ್ನ ಸಂಪರ್ಕಕ್ಕೆ ಬಂದವರು ಜಾಗರೂಕರಾಗಿರಿ ಮತ್ತು ತಮ್ಮನ್ನು ಪರೀಕ್ಷಿಸಿಕೊಳ್ಳಿ ಎಂದು ವಿನಂತಿಸುತ್ತೇನೆ, ಸುರಕ್ಷಿತವಾಗಿರಿ ಎಂದು ಟ್ವಿಟಿಸಿದ್ದಾರೆ.

ಬೆಂಗಳೂರು-ಚೆನ್ನೈ ರೈಲು ಸ್ಥಗಿತ

ಬೆಂಗಳೂರು, ನ. 19: ಅತ್ಯಂತ ಹೆಚ್ಚು ಪ್ರಯಾಣಿಕರು ಇರುತ್ತಿದ್ದ ಬೆಂಗಳೂರು-ಚೆನ್ನೈ ನಡುವಣ ರೈಲಿನಲ್ಲಿ ಇತ್ತೀಚಿನ ದಿನಗಳಲ್ಲಿ ಕೋವಿಡ್-19 ಕಾರಣದಿಂದಾಗಿ ಪ್ರಯಾಣಿಕರು ಕಡಿಮೆಯಾಗಿದ್ದು, ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಸೂಪರ್ ಫಾಸ್ಟ್ ವಿಶೇಷ ರೈಲನ್ನು ತಾ. 21 ರಿಂದ ಸ್ಥಗಿತಗೊಳಿಸಲಾಗುತ್ತಿದೆ. ಅ. 23 ರಿಂದ ಪ್ರಾರಂಭವಾದ ರೈಲು ನಂಬರ್ 02027/02028 ಮಂಗಳವಾರ ಹೊರತುಪಡಿಸಿ ವಾರದ ಎಲ್ಲಾ ದಿನಗಳೂ ಕಾರ್ಯನಿರ್ವಹಿಸುತ್ತಿದ್ದವು. ಆದರೆ ಈಗ ಜನ ಕಡಿಮೆಯಾಗುತ್ತಿರುವ ಹಿನ್ನೆಲೆ ಸ್ಥಗಿತಗೊಳಿಸಲಾಗುತ್ತಿದೆ ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಎ.ಕೆ. ವರ್ಮಾ ತಿಳಿಸಿದ್ದಾರೆ.

ನಾಯಕರನ್ನು ನಿರ್ಲಕ್ಷಿಸಿದರೆ ಕಾಂಗ್ರೆಸ್ ಉದ್ಧಾರವಾಗಲ್ಲ

ಬೆಂಗಳೂರು, ನ. 19: ಸ್ಥಳೀಯ ನಾಯಕರು ಜವಾಬ್ದಾರಿ ತೆಗೆದುಕೊಳ್ಳಬೇಕೆ ಹೊರತು ನಾಯಕರನ್ನು ನಿರ್ಲಕ್ಷ್ಯ ಮಾಡಿದರೆ ಪಕ್ಷ ಉದ್ಧಾರವಾಗಲ್ಲ. ಸಿದ್ಧಾಂತ ಹಳಿ ತಪ್ಪಿದರೆ ಪಕ್ಷ ಸರ್ವನಾಶ ಖಂಡಿತ. ನಮ್ಮ ವರಿಷ್ಠರಿಗೆ ನಾವು ಬೆಲೆ ಕೊಡಬೇಕು. ನಮ್ಮ ಕ್ಷೇತ್ರಗಳಲ್ಲಿ ನಾವು ಪಕ್ಷವನ್ನು ಬಲಿಷ್ಠಗೊಳಿಸಬೇಕು. ಬೇರೆಯವರ ಮೇಲೆ ಜವಾಬ್ದಾರಿ ಹಾಕಿ ತಾವು ತಪ್ಪಿಸಿಕೊಳ್ಳಬಾರದು ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರು ಪಕ್ಷದ ನಾಯಕರಿಗೆ ಕಿವಿಮಾತು ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿಂದು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ 103ನೇ ಜನ್ಮದಿನಾಚರಣೆ ಹಿನ್ನೆಲೆ ಇಂದಿರಾ ಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಚುನಾವಣಾ ಸೋಲು ಹಾಗೂ ಸಂಘಟನೆಯಲ್ಲಿ ವೈಫಲ್ಯ ಕುರಿತು ಪಕ್ಷದ ನಾಯಕರಿಗೆ ಖಾರವಾಗಿಯೇ ಕ್ಲಾಸ್ ತೆಗೆದುಕೊಂಡರು. ಸ್ಥಳೀಯ ನಾಯಕರು ತಮ್ಮ ಕ್ಷೇತ್ರಗಳಲ್ಲಿ ಓರ್ವ ಕಾಪೆರ್Çೀರೇಟರ್‍ಗಳನ್ನು ಆರಿಸಿ ಕಳುಹಿಸುವುದಿಲ್ಲ. ತಾವು ಸರಿಯಾಗಿ ಜವಾಬ್ದಾರಿ ನಿಭಾಯಿಸದೆ ಅಭ್ಯರ್ಥಿ ಸೋತರೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಕಾರಣವೆನ್ನುತ್ತಾರೆ. ಇಂತಹವರಿಗೆ ಟಿಕೆಟ್ ಬೇಕು ಎಂದು ಸ್ಥಳೀಯ ನಾಯಕರು ಟಿಕೆಟ್ ಕೊಡಿಸುತ್ತಾರೆ. ಸೋತಾಗ ಪಕ್ಷದ ಹಿರಿಯ ನಾಯಕರ ಮೇಲೆ ತಪ್ಪು ಹೊರಿಸುತ್ತಾರೆ. ರಾಜ್ಯದಲ್ಲಿ ರಾಹುಲ್ ಗಾಂಧಿ ನಾಯಕರಾಗಿದ್ದಾರೆಯೇ ಎಂದು ಖಾರವಾಗಿಯೇ ಸ್ಥಳೀಯ ನಾಯಕರನ್ನು ಮಲ್ಲಿಕಾರ್ಜುನ್ ಖರ್ಗೆ ತರಾಟೆ ತೆಗೆದುಕೊಂಡರು.

ಸಿಎಂ ಮಾಧ್ಯಮ ಸಲಹೆಗಾರ ರಾಜೀನಾಮೆ

ಬೆಂಗಳೂರು, ನ. 19: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮಾಧ್ಯಮ ಸಲಹೆಗಾರ ಹುದ್ದೆಗೆ ಮಹದೇವ್ ಪ್ರಕಾಶ್ ಅವರು ಗುರುವಾರ ರಾಜೀನಾಮೆ ಸಲ್ಲಿಸಿದ್ದಾರೆ. ಒಂದೂವರೆ ವರ್ಷಗಳ ಹಿಂದೆ ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಹಿರಿಯ ಪತ್ರಕರ್ತ ಮಹದೇವ್ ಪ್ರಕಾಶ್ ಅವರನ್ನು ಸಿಎಂ ಮಾಧ್ಯಮ ಸಲಹೆಗಾರರಾಗಿ ನೇಮಕ ಮಾಡಲಾಗಿತ್ತು. ಇದೀಗ ಸಿಎಂ ಮಾಧ್ಯಮ ಸಲಹೆಗಾರ ಹುದ್ದೆಗೆ ಮಹದೇವ್ ಪ್ರಕಾಶ್ ಅವರು ರಾಜೀನಾಮೆ ನೀಡಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿರುವ ಮಹದೇವ ಪ್ರಕಾಶ್ ಅವರು, ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ.

ಮನೆ ಮೇಲೆ ಕಾಡಾನೆ ದಾಳಿ : ಓರ್ವ ಸಾವು

ಮೈಸೂರು, ನ. 19: ಬೆಳ್ಳಂಬೆಳಗ್ಗೆ ಮನೆಯೊಂದರ ಮೇಲೆ ಕಾಡಾನೆ ಯೊಂದು ದಾಳಿ ಮಾಡಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ಹೆಚ್.ಡಿ. ಕೋಟೆ ತಾಲೂಕಿನ ನೆಟ್ಟಕಲ್ಲಹುಂಡಿ ಗ್ರಾಮದಲ್ಲಿ ನಡೆದಿದೆ. ಚಿನ್ನಪ್ಪ (58) ಮೃತ ವ್ಯಕ್ತಿ. ಚಿನ್ನಪ್ಪ, ಕೊಟ್ಟೂರಮ್ಮ ನೆಲೆಸಿದ್ದ ಮನೆ ಮೇಲೆ ಬೆಳ್ಳಂಬೆಳಗ್ಗೆ ಕಾಡಾನೆ ದಾಳಿ ಮಾಡಿದೆ. ಪರಿಣಾಮ ಕಾಡಾನೆ ದಾಳಿಗೆ ಚಿನ್ನಪ್ಪ ಮೃತಪಟ್ಟಿದ್ದು, ಅವರ ಪತ್ನಿ ಕೊಟ್ಟೂರಮ್ಮ ಅವರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳು ಕೊಟ್ಟೂರಮ್ಮ ಅವರನ್ನು ಹೆಚ್.ಡಿ. ಕೋಟೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಕಾಡಾನೆ ದಾಳಿಯಿಂದ ಎರಡು ಮನೆಗಳು ಸಂಪೂರ್ಣ ಹಾನಿಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಬೀಚನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.