ಬೆಂಗಳೂರು, ನ. 19: ಹಿಂದೂ ನಾವೆಲ್ಲ ಒಂದು ಎಂದು ಹೇಳುವ ಬಿಜೆಪಿ ನಾಯಕರು ಜಾತಿ-ಜಾತಿ ಗಳನ್ನು ಒಡೆಯುವ ಕೆಲಸ ಮಾಡುತ್ತಿದ್ದು, ಅದರ ಜೊತೆಗೆ ಭಾಷೆಯನ್ನು ಸಹ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಎಐಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಬಿ.ಕೆ ಹರಿಪ್ರಸಾದ್ ಅವರು ಟೀಕಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿಂದು ರಾಜ್ಯ ಸರ್ಕಾರದ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಜಾತಿಗೊಂದು ಪ್ರಾಧಿಕಾರ ಸ್ಥಾಪನೆ ಮಾಡಿ, ಒಂದು ಜಾತಿ ಸಮುದಾಯವನ್ನು ಒಡೆಯುವ ಕೆಲಸ ಬಿಜೆಪಿ ನಾಯಕರಿಗೆ ಹೊಸದೇನಲ್ಲ. ಆರ್.ಎಸ್.ಎಸ್ ನಾಯಕರು ಬಿಜೆಪಿ ನಾಯಕರಿಂದ ಜಾತಿ ಸಮುದಾಯ ಒಡೆಯುವ ಕೆಲಸ ಮಾಡಿಸುತ್ತಿದ್ದಾರೆ ಎಂದು ಹರಿಪ್ರಸಾದ್ ಆರೋಪಿಸಿದರು.ಭಾಷಿಕರಿಗೆ ಪ್ರಾಧಿಕಾರ ಸ್ಥಾಪನೆ ಮಾಡುವುದಾದರೆ, ಉರ್ದು, ಕೊಡವ, ತುಳು ನಿಗಮವನ್ನು ರಾಜ್ಯ ಸರ್ಕಾರ ಸ್ಥಾಪಿಸಲಿ. ಒಂದು ಕಣ್ಣಿಗೆ ಸುಣ್ಣ ಮತ್ತೊಂದು ಕಣ್ಣಿಗೆ ಬೆಣ್ಣೆ ರೀತಿಯಲ್ಲಿ ಮರಾಠಿಗರಿಗೆ ಮಾತ್ರ ರಾಜ್ಯ ಸರ್ಕಾರ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಿರುವುದನ್ನು ಹರಿಪ್ರಸಾದ್ ಖಂಡಿಸಿದರು.