ಸೋಮವಾರಪೇಟೆ, ನ. 18: ಸಮೀಪದ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡವಾರೆ-ಸಜ್ಜಳ್ಳಿಯಲ್ಲಿ ತಾ. 17 ರಂದು ನಡೆದ ವಾಹನ ಅಪಘಾತದಲ್ಲಿ ವ್ಯಕ್ತಿಯೋರ್ವರು ದುರ್ಮರಣಕ್ಕೀಡಾಗಿದ್ದಾರೆ.

ದನಗಳನ್ನು ಹೊಡೆದುಕೊಂಡು ಬರಲೆಂದು ಮನೆಯಿಂದ ಹೊರಬಂದ ಗಣೇಶ್ (62) ಅವರಿಗೆ, ಚಾಲಕನ ನಿಯಂತ್ರಣದ ತಪ್ಪಿದ ಪಿಕ್‍ಅಪ್ ಡಿಕ್ಕಿ ಹೊಡೆದು ನಂತರ ಪಲ್ಪಿಯಾಗಿದೆ. ಘಟನೆಯಿಂದ ಗಣೇಶ್ (62) ಅವರ ಸೊಂಟ ಹಾಗೂ ಹೊಟ್ಟೆ ಭಾಗಕ್ಕೆ ಗಂಭೀರ ಗಾಯವಾಗಿ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಯಡವನಾಡು ಕಡೆಯಿಂದ ಕಾಫಿ ಮೂಟೆಗಳನ್ನು ತುಂಬಿಸಿಕೊಂಡು ಆಗಮಿಸುತ್ತಿದ್ದ, ಯಡವಾರೆಯ ಮೋಹನ್‍ಕುಮಾರ್ ಅವರು ಚಾಲಿಸುತ್ತಿದ್ದ ಪಿಕ್‍ಅಪ್ ವಾಹನ ನಿಯಂತ್ರಣ ತಪ್ಪಿ ಗಣೇಶ್ ಅವರಿಗೆ ಡಿಕ್ಕಿಯಾಗಿದ್ದು, ತಕ್ಷಣ ಗಾಯಾಳುವನ್ನು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಗೆ ಸಾಗಿಸುವ ಮಾರ್ಗಮಧ್ಯೆ ಕೋವರ್‍ಕೊಲ್ಲಿಯಲ್ಲಿ ಸಾವನ್ನಪ್ಪಿದ್ದಾರೆ.

ಮೃತ ಗಣೇಶ್ ಅವರು ಪತ್ನಿ ಸೇರಿದಂತೆ ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಸೋಮವಾರಪೇಟೆ ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್, ಠಾಣಾಧಿಕಾರಿ ಶ್ರೀಧರ್ ಅವರುಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.