ಗೋಣಿಕೊಪ್ಪಲು, ನ. 18: ಸರ್ಕಾರಿ ನೌಕರಿಯ ಮೇಲೆ ದೂರದ ಊರಿನಲ್ಲಿ ವಾಸವಾಗಿದ್ದರೂ ಹುಟ್ಟಿದ ನಾಡಿಗೆ ನಾನು ಎಂದೆಂದಿಗೂ ಚಿರಋಣಿಯಾಗಿರುತ್ತೇನೆ ಎಂದು ಮುಖ್ಯ ವಿದ್ಯುತ್ ಪರಿವೀಕ್ಷಕ ತೀತಿರ ಎನ್. ರೋಶನ್ ಅಪ್ಪಚ್ಚು ಹೇಳಿದರು. ತನ್ನ ಹುಟ್ಟೂರಾದ ಹುದಿಕೇರಿಯ 7ನೇ ಮೈಲ್ನ ಸಮುದಾಯ ಭವನದಲ್ಲಿ ಚಾಮುಂಡಿ ದೇವಸ್ಥಾನ ಸಮಿತಿ ಹಾಗೂ ತ್ರಿವೇಣಿ ಮಹಿಳಾ ಸೇವಾ ಸಮಿತಿ ವತಿಯಿಂದ ನಡೆದ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ ರೋಶನ್ ಅಪ್ಪಚ್ಚು ಎಷ್ಟೇ ದೊಡ್ಡ ಪದವಿ ಬಂದರೂ ಹುಟ್ಟೂರನ್ನು ಮರೆಯಬಾರದು, ಬೆಳೆದ ಊರಿನಲ್ಲಿ ಗೌರವ ಸಿಗುವುದು ಸುಲಭದ ಮಾತಲ್ಲ. ಅವಿರತ ಪರಿಶ್ರಮದಿಂದ ಇಂದು ಉತ್ತಮ ಹುದ್ದೆಯಲ್ಲಿದ್ದೇನೆ.
ಪ್ರತಿಯೊಬ್ಬರೂ ಶ್ರಮಿಸಿದ್ದಲ್ಲಿ ಯಾವುದೇ ಶಿಫಾರಸ್ಸುಗಳಿಲ್ಲದೆ ಉನ್ನತ ಹುದ್ದೆಗಳಿಗೆ ನೇಮಕಗೊಳ್ಳಬಹುದು ಎಂಬದಕ್ಕೆ ನಾನೇ ಸಾಕ್ಷಿಯಾಗಿದ್ದೇನೆ. ಹುದಿಕೇರಿ ಹೋಬಳಿ ವ್ಯಾಪ್ತಿಯಲ್ಲಿ ನಿರಂತರ ವಿದ್ಯುತ್ನ ಸಮಸ್ಯೆ ಎದುರಿಸುತ್ತಿರುವ ಬಗ್ಗೆ ಅರಿತಿದ್ದೇನೆ. ಗ್ರಾಮದ ಜನತೆ ಪಕ್ಷ ಭೇದ ಮರೆತು ಒಟ್ಟಾಗಿ ಆಗಮಿಸಿದಲ್ಲಿ ಶಾಶ್ವತ ವಿದ್ಯುತ್ಗೆ ಶ್ರಮಿಸುವುದಾಗಿ ಭರವಸೆ ನೀಡಿದರು. ಉನ್ನತ ಸ್ಥಾನಕ್ಕೆ ತೆರಳಿದವರು ತಮ್ಮ ಊರಿನ ಬಗ್ಗೆ ವಿಶೇಷ ಕಾಳಜಿ ವಹಿಸಿ ಕೈಲಾದ ಸಹಾಯ ಮಾಡುವಂತೆ ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಚಾಮುಂಡಿ ದೇವಸ್ಥಾನ ಸಮಿತಿಯ ಅಧ್ಯಕ್ಷರು, ಗ್ರಾಮದ ಮುಖಂಡರಾದ ಬೊಳ್ಳಜ್ಜಿರ ಸುಧಿ ಹುದಿಕೇರಿ ಗ್ರಾಮದ ಸಮೀಪವಿರುವ 7ನೇ ಮೈಲಿನಲ್ಲಿ ವಾಸವಿದ್ದು ತಮ್ಮ ಉನ್ನತ ವಿದ್ಯಾಭ್ಯಾಸದ ನಂತರ ಸ್ವಶಕ್ತಿಯ ಮೂಲಕ ಇಂದು ರಾಜ್ಯದಲ್ಲಿ ಉನ್ನತ ಹುದ್ದೆಯನ್ನು ಪಡೆಯುವ ಮೂಲಕ ರೋಶನ್ ಗಮನ ಸೆಳೆದಿದ್ದಾರೆ. ಇದರಿಂದಾಗಿ ನಮ್ಮ ಗ್ರಾಮದ ಹೆಸರು ಕೂಡ ರಾಜ್ಯ ಮಟ್ಟದಲ್ಲಿ ಗುರುತಿಸು ವಂತಾಗಿದೆ. ಇವರ ಸಹಕಾರವನ್ನು ಪಡೆದುಕೊಂಡು ಗ್ರಾಮದಲ್ಲಿ ವಿದ್ಯಾವಂತರು ಉನ್ನತ ಸ್ಥಾನವನ್ನು ಪಡೆಯಲು ಮುಂದಾಗಬೇಕು ಎಂದರು.
ತ್ರಿವೇಣಿ ಮಹಿಳಾ ಸೇವಾ ಸಮಿತಿಯ ಅಧ್ಯಕ್ಷೆ ತೀತಿರ ಊರ್ಮಿಳಾ ಮಾತನಾಡಿ ನಾಡಿನಲ್ಲಿ ಅನೇಕ ಪ್ರತಿಭೆಗಳಿದ್ದು ಇವುಗಳಿಗೆ ಪ್ರೋತ್ಸಾಹ ಸಿಗಬೇಕಾಗಿದೆ. ಪಟ್ಟ ಶ್ರಮದಿಂದ ಇಂದು ರಾಜ್ಯದಲ್ಲಿಯೇ ಜಿಲ್ಲೆಯಿಂದ ಉನ್ನತ ಹುದ್ದೆ ಪಡೆದ ರೋಶನ್ ಈ ನಾಡಿಗೆ ಮಾದರಿಯಾಗಿದ್ದಾರೆ ಎಂದರು. ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕ ಚೆಕ್ಕೇರ ಪ್ರಮೋದ್, ತ್ರಿವೇಣಿ ಮಹಿಳಾ ಸೇವಾ ಸಮಿತಿಯ ಕಾರ್ಯದರ್ಶಿ ರಾಧ ಕರುಂಬಯ್ಯ, ಡಿಸಿಸಿ ಬ್ಯಾಂಕಿನ ತೀತಿರ ಪ್ರವೀಣ್ ಗಣಪತಿ, ಗ್ರಾಮ ಪ್ರಮುಖರಾದ ಐಪುಮಾಡ ರೋನಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ನೂರಾರು ಸಂಖ್ಯೆಯಲ್ಲಿ ಗ್ರಾಮದ ಜನತೆ ಭಾಗವಹಿಸಿದ್ದರು. ಕಿರಿಯಮಾಡ ಈಶ ಮಂದಣ್ಣ ಸ್ವಾಗತಿಸಿ, ತೀತಿರ ಮೇರಿಪೂಣಚ್ಚ ವಂದಿಸಿದರು.