ಸೋಮವಾರಪೇಟೆ, ನ. 18: ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಟರ್ಫ್ ಕಾಮಗಾರಿಯ ಬಗ್ಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಗತಿಯಲ್ಲಿರುವ ಕ್ರೀಡಾಂಗಣ ಕಾಮಗಾರಿ ಪರಿಶೀಲಿಸಿದ ಶಾಸಕರು, ಮೈದಾನದ ಸುತ್ತಲೂ ನಿರ್ಮಾಣ ವಾಗಿರುವ ಚರಂಡಿ ಕಾಮಗಾರಿ ಸಮರ್ಪಕವಾಗಿಲ್ಲದಿರುವುದರಿಂದ ಅಲ್ಲಲ್ಲಿ ನೀರು ನಿಲ್ಲುತ್ತದೆ.

ಈಗಾಗಲೇ ಮೈದಾನಕ್ಕೆ ಡಾಂಬರು ಹಾಕಲಾಗಿದ್ದು ಭೂಮಿಯಲ್ಲಿ ನೀರಿನಾಂಶ ಇರುವುದರಿಂದ ಕೆಲವೆಡೆ ಗುಣಮಟ್ಟ ಹಾಳಾಗಿದೆ. ಗುತ್ತಿಗೆ ಪಡೆದಿರುವ ಕಂಪೆನಿ ಗುಣಮಟ್ಟದ ಕಾಮಗಾರಿ ನಡೆಸಬೇಕು ಹಾಗೂ ಕ್ರೀಡಾ ಇಲಾಖೆಯ ಇಂಜಿನಿಯರ್ ಈ ಬಗ್ಗೆ ಗಮನಹರಿಸಬೇಕು. ಕಾಮಗಾರಿ ಕಳಪೆಯಾದರೆ ಸಹಿಸುವ ಪ್ರಶ್ನೆಯೇ ಇಲ್ಲ ಎಂದರು.

ನಂತರ ಮಾಧ್ಯಮದೊಂದಿಗೆ ಮಾತನಾಡಿದ ರಂಜನ್, ತಾನು ಕ್ರೀಡಾಸಚಿವನಾಗಿದ್ದ ಸಂದರ್ಭ ಈ ಕಾಮಗಾರಿ ಮಂಜೂರಾಗಿದ್ದು, ರೂ. 4.15 ಕೋಟಿ ವೆಚ್ಚದ ಕಾಮಗಾರಿಯನ್ನು ಹೈದರಾಬಾದ್ ಮೂಲದ ಕಂಪೆನಿ ನಿರ್ವಹಿಸುತ್ತಿದೆ. ಈಗಾಗಲೇ ಕ್ರೀಡಾ ಇಲಾಖೆಯ ಇಂಜಿನಿಯರ್ ಜತೆಯಲ್ಲಿ ಮಾತನಾಡಿದ್ದು, ತಕ್ಷಣ ಕಾಮಗಾರಿ ಪರಿಶೀಲಿಸುವಂತೆ ಸೂಚಿಸಿದ್ದೇನೆ. ಕಾಮಗಾರಿ ಮುಗಿದ ಬಳಿಕ ಈ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಮಟ್ಟದ ಹಾಕಿ ಪಂದ್ಯಾಟ ಆಯೋಜಿಸು ವುದಾಗಿ ತಿಳಿಸಿದರು.

ಕ್ರೀಡಾಂಗಣ ಕಾಮಗಾರಿ ಪರಿಶೀಲಿಸಲು ಪದವಿಪೂರ್ವ ಕಾಲೇಜಿನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ಅಧ್ಯಕ್ಷತೆಯಲ್ಲಿ ಉಸ್ತುವಾರಿ ಸಮಿತಿ ರಚಿಸಲಾಗಿದ್ದು, ಗುಣಮಟ್ಟದ ಕಾಮಗಾರಿಯ ಬಗ್ಗೆ ಜಾಗೃತಿ ವಹಿಸುವಂತೆ ಸೂಚಿಸಲಾಗಿದೆ ಎಂದರು.

ಈ ಸಂದರ್ಭ ತಾಲೂಕು ಪಂಚಾಯಿತಿ ಉಪಾಧ್ಯಕ್ಷ-ಕ್ರೀಡಾಂಗಣ ಕಾಮಗಾರಿ ಉಸ್ತುವಾರಿ ಸಮಿತಿ ಅಧ್ಯಕ್ಷ ಅಭಿಮನ್ಯುಕುಮಾರ್ ಸೇರಿದಂತೆ ಇತರರು ಇದ್ದರು.