ಕೋವಿಡ್ ಬೆಡ್ ಆದೇಶ ಪರಿಷ್ಕರಣೆ

ಬೆಂಗಳೂರು, ನ. 18: ಈ ಹಿಂದೆ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್-19 ಸೋಂಕಿತರಿಗೆ ಕಡ್ಡಾಯವಾಗಿ ಶೇ. 50 ರಷ್ಟು ಬೆಡ್ ಮೀಸಲಿಡಬೇಕು ಎಂದು ಹೊರಡಿಸಿದ್ದ ಆದೇಶವನ್ನು ರಾಜ್ಯ ಸರ್ಕಾರ ಬುಧವಾರ ಪರಿಷ್ಕರಿಸಿದೆ. ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆ ಸರ್ಕಾರ ಈ ಆದೇಶ ಹೊರಡಿಸಿದ್ದು, ಇನ್ನು ಖಾಸಗಿ ಆಸ್ಪತ್ರೆಗಳು ಕಡ್ಡಾಯ ವಾಗಿ ಬೆಡ್ ಮೀಸಲಿಡುವ ಅಗತ್ಯ ಇಲ್ಲ ಎಂದು ಹೇಳಿದೆ. ಈ ಸಂಬಂಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ಆದೇಶ ಹೊರಡಿಸಿದ್ದು, ಸಾಮಾನ್ಯ ಮತ್ತು ಹೆಚ್‍ಡಿಯು ಬೆಡ್‍ಗಳನ್ನು ಸರ್ಕಾರಿ ಆಸ್ಪತ್ರೆಗಳು ಮತ್ತು ಸರ್ಕಾರಿ ವೈದ್ಯಕೀಯ ಕಾಲೇಜು ಗಳಿಗೆ ಮಾತ್ರ ಸೀಮಿತಗೊಳಿಸಲಾಗುವುದು ಎಂದು ಹೇಳಿದ್ದಾರೆ. ಸರ್ಕಾರಿ ಆಸ್ಪತ್ರೆ ಮತ್ತು ಸರ್ಕಾರಿ ವೈದ್ಯಕೀಯ ಕಾಲೇಜ್‍ಗಳಲ್ಲಿ ಸಾಮಾನ್ಯ ಮತ್ತು ಹೆಚ್‍ಡಿಯು ಹಾಸಿಗೆಗಳ ಒಟ್ಟಾರೆ ಲಭ್ಯತೆಯು ಶೇ. 10ಕ್ಕಿಂತ ಕಡಿಮೆ ಯಾಗುವವರೆಗೆ ಇದನ್ನು ಅನುಸರಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಆರೋಗ್ಯ ಸಚಿವರಿಗೆ ಮೊದಲ ಲಸಿಕೆ

ನವದೆಹಲಿ, ನ. 18: ಕೊರೊನಾ ವೈರಸ್‍ಗೆ ಲಸಿಕೆ ಕೋವಾಕ್ಸಿನ್ ಕ್ಲಿನಿಕಲ್ ಟ್ರಯಲ್‍ನ ಮೂರನೇ ಹಂತದ ಪ್ರಯೋಗ ಹರಿಯಾಣದಲ್ಲಿ ನಡೆಯಲಿದ್ದು, ಆರೋಗ್ಯ ಸಚಿವ ಅನಿಲ್ ವಿಜ್ ಅವರು ಸ್ವಯಂಪ್ರೇರಿತವಾಗಿ ಮೊದಲ ಲಸಿಕೆ ಪಡೆಯಲು ಮುಂದಾಗಿದ್ದಾರೆ. ಐಸಿಎಂಆರ್ ಹಾಗೂ ಭಾರತ್ ಬಯೋಟೆಕ್ ಸಂಸ್ಥೆಯ ಸಹಯೋಗದಲ್ಲಿ ಕೋವ್ಯಾಕ್ಸಿನ್ ಲಸಿಕೆಯ ಮೂರನೇ ಹಂತದ ಟ್ರಯಲ್‍ನಲ್ಲಿದ್ದು ಸುರಕ್ಷಾ ಹಾಗೂ ಪರಿಣಾಮಕಾರಿತ್ವದ ಬಗ್ಗೆ ಪರೀಕ್ಷೆ ನಡೆಸಲಾಗುತ್ತಿದೆ. ನವೆಂಬರ್ 20 ರಿಂದ ಮೂರನೇ ಹಂತದ ಪ್ರಯೋಗ ಆರಂಭವಾಗುತ್ತಿದ್ದು, ಅನಿಲ್ ವಿಜ್ ಅವರು ಸ್ವಯಂಸೇವಕರಾಗಿ ಮೊದಲ ಲಸಿಕೆಯನ್ನು ಪಡೆಯಲಿದ್ದಾರೆ. ಈ ಕುರಿತು ಸ್ವತಃ ಸಚಿವ ಅನಿಲ್ ಟ್ವೀಟ್ ಮಾಡಿದ್ದು, ಮೊದಲ ಲಸಿಕೆ ನನಗೇ ನೀಡುವಂತೆ ಕಂಪೆನಿ ಬಳಿ ಕೇಳಿಕೊಂಡಿದ್ದೇನೆ ಎಂದು ಹೇಳಿದ್ದಾರೆ. ಹರಿಯಾಣದ ರೋಹ್ಟಕ್‍ನ ಪಂಡಿತ್ ಭಗವತ್ ದಯಾಳ್ ಶರ್ಮಾ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಮತ್ತು ಫರಿದಾಬಾದ್‍ನ ಇಎಸ್‍ಐಸಿ ಆಸ್ಪತ್ರೆಯಲ್ಲಿ ಕೋವ್ಯಾಕ್ಸಿನ್ ಮೂರನೇ ಹಂತದ ಪ್ರಯೋಗ ನಡೆಯಲಿದೆ ಎಂದು ಭಾರತ್ ಬಯೋಟೆಕ್ ಪ್ರಕಟಣೆಯಲ್ಲಿ ತಿಳಿಸಿದೆ.

ಬೆಂಗಳೂರಿನಲ್ಲಿ ಚಳಿಗಾಲದ ಅಧಿವೇಶನ

ಬೆಂಗಳೂರು, ನ. 18: ವಿಧಾನ ಮಂಡಲದ ಚಳಿಗಾಲದ ಅಧಿವೇಶನ ಡಿಸೆಂಬರ್ 7 ರಿಂದ 15 ರವರೆಗೆ ಬೆಂಗಳೂರಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು. ಆರಂಭದಲ್ಲಿ ಬೆಳಗಾವಿಯಲ್ಲಿ ನಡೆಸುವ ಚಿಂತನೆಯಿತ್ತು ಆದರೆ ಆರ್ಥಿಕ ಹಾಗೂ ಇತರ ಸಮಸ್ಯೆಗಳ ಹಿನ್ನೆಲೆ ಬೆಂಗಳೂರಿನಲ್ಲಿ ಅಧಿವೇಶನ ನಡೆಸಲು ತೀರ್ಮಾನಿಸಲಾಗಿದೆ. ಇದೇ ವೇಳೆ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಸಂಬಂಧ ಸ್ಪಷ್ಟೀಕರಣ ನೀಡಿದ ಅವರು, ಅದು ಮರಾಠ ಅಭಿವೃದ್ಧಿ ಪ್ರಾಧಿಕಾರವಲ್ಲ, ಸಮುದಾಯ ಅಭಿವೃದ್ದಿ ನಿಗಮವಾಗಿದೆ. ಮರಾಠ ಅಭಿವೃದ್ಧಿ ಪ್ರಾಧಿಕಾರದ ಹೆಸರು ಬದಲಾವಣೆಗೆ ನಿರ್ಧರಿಸಿದ್ದು, ಇನ್ನು ಮುಂದೆ ಮರಾಠ ಸಮುದಾಯ ನಿಗಮ ಎಂದು ಬದಲಾವಣೆಯಾಗಲಿದೆ. ಮರಾಠ ಸಮುದಾಯ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಪ್ರಾಧಿಕಾರ ಮಾಡಬೇಕಾದರೆ ಕಾನೂನು ಮಾಡಬೇಕು. ಆದರೆ ನಿಗಮಕ್ಕೆ ಸರ್ಕಾರವೇ ನಿರ್ಧಾರ ಕೈಗೊಳ್ಳಬಹುದು. ಹಣ ಎಷ್ಟು ನಿಗದಿ ಮಾಡಬೇಕು ಎಂಬುದು ಇನ್ನೂ ಚರ್ಚೆಯಾಗಿಲ್ಲ. ಒಂದು ಸಮುದಾಯದ ಅಭಿವೃದ್ಧಿ ವಿಷಯದಲ್ಲಿ ಯಾಕೆ ವಿರೋಧ ಮಾಡುತ್ತಿದ್ದಾರೋ ಗೊತ್ತಿಲ್ಲ. ಆದರೂ ಅಭಿವೃದ್ಧಿಯ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು.

ಭಾರತೀಯ ಅಮೇರಿಕನ್ನರಿಗೆ ಪ್ರಮುಖ ಖಾತೆ

ವಾಷಿಂಗ್‍ಟನ್, ನ. 18: ಅಮೇರಿಕಾದ ನಿಯೋಜಿತ ನೂತನ ಅಧ್ಯಕ್ಷ ಜೋ ಬೈಡನ್ ಸಚಿವ ಸಂಪುಟದಲ್ಲಿ ಇಬ್ಬರು ಭಾರತೀಯ ಅಮೇರಿಕನ್ನರಿಗೆ ಪ್ರಮುಖ ಖಾತೆಗಳು ಲಭ್ಯವಾಗಲಿದೆ. ಅಲ್ಲಿನ ಮಾಧ್ಯಮಗಳ ವರದಿಗಳ ಪ್ರಕಾರ ಅಮೇರಿಕಾದ ಸರ್ಜನ್ ಜನರಲ್ ವಿವೇಕ್ ಮೂರ್ತಿ ಹಾಗೂ ಸ್ಟ್ಯಾಂಡ್ ಫೆÇೀರ್ಡ್ ವಿವಿಯ ಪೆÇ್ರಫೆಸರ್ ಆಗಿರುವ ಅರುಣ್ ಮಜುಮ್ದಾರ್ ಅವರಿಗೆ ಜೋ ಬೈಡನ್-ಕಮಲ ಹ್ಯಾರಿಸ್ ಆಡಳಿತದಲ್ಲಿ ಪ್ರಮುಖ ಖಾತೆಗಳು ಲಭ್ಯವಾಗಲಿದೆ. ವಿವೇಕ್ ಮೂರ್ತಿ ಕೋವಿಡ್-19ಗೆ ಸಂಬಂಧಿಸಿದಂತೆ ಈಗಾಗಲೇ ಜೋ ಬೈಡನ್ ಅವರ ಪ್ರಮುಖ ಸಲಹೆಗಾರರಾಗಿ ಆಯ್ಕೆಯಾಗಿದ್ದಾರೆ, ಇವರಿಗೆ ಅಮೇರಿಕಾದ ಆರೋಗ್ಯ ಹಾಗೂ ಮಾನವ ಸೇವೆಗಳ ಖಾತೆಯ ಹೊಣೆಗಾರಿಕೆ ಸಿಗಲಿದೆ ಹಾಗೂ ಸ್ಟ್ಯಾಂಡ್ ಫೆÇೀರ್ಡ್ ವಿವಿಯ ಪೆÇ್ರಫೆಸರ್ ಆಗಿರುವ ಅರುಣ್ ಮಜುಮ್ದಾರ್ ಅವರನ್ನು ಇಂಧನ ಖಾತೆ ಸಚಿವರನ್ನಾಗಿ ಮಾಡಲಾಗುತ್ತದೆ ಎಂದು ವಿಶ್ಲೇಷಿಸಲಾಗಿದೆ. ಮಜುಮ್ದಾರ್ ಮೆಕಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದು, ಏಜೆನ್ಸಿ-ಎನರ್ಜಿಯ ಯೋಜನಾ ಸಂಶೋಧನೆಯ ಪ್ರಥಮ ನಿರ್ದೇಶಕರಾಗಿ ಇವರು ಕಾರ್ಯನಿರ್ವಹಿಸಿದ್ದು ಇಂಧನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬೈಡನ್‍ಗೆ ಉನ್ನತ ಮಟ್ಟದ ಸಲಹೆಗಾರರಾಗಿದ್ದಾರೆ.

ರಾಮನ ವಿಗ್ರಹದ ಮೇಲೆ ಸೂರ್ಯ ಕಿರಣ

ಮಂಗಳುರು, ನ. 18: ಅಯೋಧ್ಯೆಯಲ್ಲಿ ನಿರ್ಮಿಸಲಿರುವ ರಾಮಮಂದಿರದ ರಾಮನ ವಿಗ್ರಹದ ಮೇಲೆ ಶ್ರೀರಾಮ ನವಮಿಯ ದಿನ ಸೂರ್ಯನ ಕಿರಣಗಳು ಬೀಳುವಂತಾಗಲಿ ಎಂದು ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ. ಶ್ರೀರಾಮ ನವಮಿಯಂದು ಭಗವಾನ್ ರಾಮನ ವಿಗ್ರಹದ ಮೇಲೆ ಸೂರ್ಯನ ಕಿರಣಗಳು ಬೀಳುವ ರೀತಿಯಲ್ಲಿ ರಾಮ ಮಂದಿರ ವಿನ್ಯಾಸಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ ಎಂದು 15 ಸದಸ್ಯರ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸದಸ್ಯರಾದ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ. ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್‍ಐಆರ್) ಇದರ ಕಾರ್ಯವನ್ನು ನಿರ್ವಹಿಸುವ ಜವಾಬ್ದಾರಿ ಹೊತ್ತಿದೆ. ವಿಗ್ರಹದ ಮುಂದೆ ಪ್ರಾರ್ಥನೆ ಸಲ್ಲಿಸುವಾಗ ಭಕ್ತರಿಗೆ 3ಡಿ ಅನುಭವ ನೀಡುವ ಕೆಲಸ ಮಾಡುವಂತೆ ಮೋದಿ ಸಲಹೆ ನೀಡಿದರು. 3ಡಿ ಕೆಲಸವನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ ವಹಿಸಲಾಗಿದೆ ಎಂದು ಶ್ರೀಗಳು ಹೇಳಿದ್ದಾರೆ. ರಾಮ ಮಂದಿರವನ್ನು ನಿರ್ಮಿಸಲಿರುವ ಜಮೀನಿನ ಸಾಮಥ್ರ್ಯ ಪರೀಕ್ಷೆಯನ್ನು 200 ಅಡಿ ಆಳದವರೆಗೆ ಅಗೆಯುವ ಮೂಲಕ ನಡೆಸಲಾಗುತ್ತಿದೆ ಎಂದು ಹೇಳಿದ ಶ್ರೀಗಳು ಇತ್ತೀಚೆಗೆ ಅಯೋಧ್ಯೆಗೆ ಭೇಟಿ ನೀಡಿದ್ದು ಭೂಮಿಯನ್ನು ಹಸನುಗೊಳಿಸುವ ಕೆಲಸವನ್ನು ಗಮನಿಸಿದ್ದಾರೆ.

ಹಿಮಪಾತ ಅಪ್ಪಳಿಸಿ ಸೈನಿಕ ಹುತಾತ್ಮ

ಶ್ರೀನಗರ, ನ. 18: ಕುಪ್ವಾರಾದ ತಂಗ್‍ಧರ್ ಸೆಕ್ಟರ್‍ನ ಗಡಿ ನಿಯಂತ್ರಣಾ ರೇಖೆ (ಎಲ್‍ಒಸಿ)ಯಲ್ಲಿ ಸೇನಾ ಶಿಬಿರದಲ್ಲಿ ಹಿಮಪಾತ ಅಪ್ಪಳಿಸಿದ ಪರಿಣಾಮ ಓರ್ವ ಸೈನಿಕ ಹುತಾತ್ಮನಾಗಿದ್ದು, ಇತರ ಇಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. `ರೋಶನ್' ಎಂಬ ಮುನ್ನೆಲೆ ಶಿಬಿರಕ್ಕೆ ಹಿಮಪಾತ ಅಪ್ಪಳಿಸಿದೆ. ಶಿಬಿರದಲ್ಲಿದ್ದ ಮೂವರು ಸೈನಿಕರು ಹಿಮಪಾತದಲ್ಲಿ ಹೂತುಹೋಗಿದ್ದು, ತಕ್ಷಣವೇ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಲಾಗಿತ್ತು ಎಂದು ಅವರು ಹೇಳಿದ್ದಾರೆ. ನಂತರ, ಸೈನಿಕರಾದ ನಿಖಿಲ್ ಶರ್ಮಾ, ರಮೇಶ್ ಚಂದ್ ಮತ್ತು ಗುರುವಿಂದರ್ ಸಿಂಗ್ ಎಂದು ಗುರುತಿಸಲಾದ ಮೂವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ವಾಯುಭಾರ ಕುಸಿತ : ಇನ್ನೆರಡು ದಿನ ಮಳೆ

ಬೆಂಗಳೂರು, ನ. 18: ಅರಬ್ಬಿ ಸಮುದ್ರದಲ್ಲಿ ಉಂಟಾಗಲಿರುವ ವಾಯುಭಾರ ಕುಸಿತದ ಕಾರಣ ಕರಾವಳಿ ಹಾಗೂ ದಕ್ಷಿಣ ಒಳನಾಡು ಸೇರಿದಂತೆ ರಾಜ್ಯ ಹಲವೆಡೆ ಇನ್ನೆರಡು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮುಂದಿನ ಎರಡು ದಿನ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್. ಪಾಟೀಲ್ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಕಳೆದೆರಡು ದಿನಗಳಿಂದ ಕೆಲವು ಕಡೆ ಸುರಿಯುತ್ತಿರುವ ಮಳೆ 2 ದಿನ ಮುಂದುವರಿಯುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.