ಸೋಮವಾರಪೇಟೆ,ನ.11: ಆಕಸ್ಮಿಕವಾಗಿ ಬಾವಿಗೆ ಬಿದ್ದು ಜೀವನ್ಮರಣದ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಸೋಮವಾರಪೇಟೆ ಪೊಲೀಸ್ ವೃತ್ತ ನಿರೀಕ್ಷಕ ಬಿ.ಜಿ. ಮಹೇಶ್ ಹಾಗೂ ಚಾಲಕ ನದಾಫ್ ಅವರು, ಸ್ಥಳೀಯರ ನೆರವಿನೊಂದಿಗೆ ರಕ್ಷಿಸಿದ ಘಟನೆ ಇಂದು ಸಂಜೆ 6 ಗಂಟೆಗೆ ಸಮೀಪದ ತೋಳೂರು ಶೆಟ್ಟಳ್ಳಿ ಗ್ರಾಮದಲ್ಲಿ ನಡೆದಿದೆ.
ತೋಳೂರುಶೆಟ್ಟಳ್ಳಿಯ ಶಾಲಾ ಹಿಂಭಾಗದ ಕಾಡು ಪ್ರದೇಶದಲ್ಲಿರುವ ಬಾವಿಗೆ ಬಿದ್ದಿದ್ದ ಸ್ಥಳೀಯ ಬಾಲಕಿ, ಪಿಯುಸಿ ವಿದ್ಯಾರ್ಥಿನಿಯನ್ನು ರಕ್ಷಿಸಲಾಗಿದ್ದು, ಸದ್ಯ ಬಾಲಕಿ ಚೇತರಿಸಿಕೊಳ್ಳುತ್ತಿದ್ದಾಳೆ.
ಇಂದು ಸಂಜೆ ಸೂರ್ಲಬ್ಬಿ ವ್ಯಾಪ್ತಿಯಲ್ಲಿ ಗ್ರಾಮ ಗಸ್ತಿಗೆ ತೆರಳಿ ವಾಪಸ್ ಆಗುತ್ತಿದ್ದ ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್ ಅವರು ತೋಳೂರುಶೆಟ್ಟಳ್ಳಿ ಕಡೆಗೆ ಆಗಮಿ ಸುವ ಸಂದರ್ಭ ರಸ್ತೆ ಬದಿಯಲ್ಲಿ ಗ್ರಾಮಸ್ಥರ ಗುಂಪನ್ನು ಕಂಡಿದ್ದಾರೆ.
ಈ ಸಂದರ್ಭ ಜೀಪ್ ನಿಲ್ಲಿಸಿ ವಿಚಾರಿಸಿದ ಮೇರೆಗೆ, ಬಾಲಕಿ ಯೋರ್ವಳು ನಾಪತ್ತೆಯಾಗಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಅಷ್ಟರಲ್ಲಿ ಕಾಡು ಪ್ರದೇಶದ ಮಧ್ಯ ಇರುವ ಬಾವಿಯ ಬಳಿಯಲ್ಲಿ ಚಪ್ಪಲಿ ಪತ್ತೆಯಾಗಿದ್ದು, ಬಾವಿಯೊಳಗೆ ಬಾಲಕಿ ಇಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ಸ್ಥಳೀಯರ ಮಾತು ಕೇಳಿ ಸ್ಥಳದಿಂದ ತೆರಳುವ ಮನಸ್ಸು ಮಾಡಿದ್ದ ವೃತ್ತ ನಿರೀಕ್ಷಕರು ಕೊನೆಕ್ಷಣದಲ್ಲಿ ಮನಸ್ಸು ಬದಲಾಯಿಸಿ ಚಾಲಕ ನದಾಫ್‍ನೊಂದಿಗೆ ಬಾವಿಯ ಬಳಿ ತೆರಳಿದ್ದಾರೆ. ಸುಮಾರು 13 ಅಡಿ ಆಳವಿದ್ದ ಬಾವಿಯೊಳಗೆ ಇಣುಕಿ ನೋಡುವಾಗ ಮೂಗಿನ ಮಟ್ಟಕ್ಕೆ ನೀರು ತುಂಬಿಕೊಂಡು ಬಾಲಕಿ ಜೀವನ್ಮರಣದ ಸ್ಥಿತಿಯಲ್ಲಿ ಚೀರಾಡುತ್ತಿದ್ದುದು ಕಂಡುಬಂದಿದೆ.
ತಕ್ಷಣ ಸಮೀಪದಲ್ಲಿದ್ದ ಮರದ ದೊಣ್ಣೆಯನ್ನು ಬಾವಿಯೊಳಗೆ ಹಾಕಿ ಬಾಲಕಿಗೆ ಆಸರೆ ನೀಡಿದ್ದಾರೆ. ನಂತರ ಹಗ್ಗದ ಸಹಾಯದಿಂದ ಬಾವಿ ಯೊಳಗಿದ್ದ ಬಾಲಕಿಯನ್ನು ಸ್ಥಳೀಯ ರೊಂದಿಗೆ ಮೇಲೆತ್ತಿ ಮರುಜೀವ ನೀಡಿದ್ದಾರೆ.
ನಂತರ ಬಾಲಕಿಗೆ ಧೈರ್ಯ ತುಂಬಿ, ಪೋಷಕರಿಗೆ ಒಪ್ಪಿಸಿದ್ದು, ಬಿಸಿನೀರಿನಲ್ಲಿ ಸ್ನಾನ ಮಾಡಿಸಿ ಊಟ ಕೊಟ್ಟು ಉಪಚರಿಸುವಂತೆ ಪೋಷಕರಿಗೆ ತಿಳಿಸಿದ್ದಾರೆ. ಒಂದು ವೇಳೆ ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್ ಅವರು ಮನಸ್ಸು ಬದಲಾಯಿಸಿ ಬಾವಿಯ ಬಳಿ ತೆರಳದೇ ಇದ್ದಿದ್ದರೆ, ಬಾಲಕಿ ರಾತ್ರಿಯಿಡೀ ಬಾವಿಯೊಳಗಿದ್ದು ದುರಂತ ಸಂಭವಿಸುತ್ತಿತ್ತು. ಸ್ಥಳೀಯರು ಬಾವಿಯಲ್ಲಿ ಇಣುಕಿದಾಗ ಕಾಣದ ಬಾಲಕಿ, ವೃತ್ತ ನಿರೀಕ್ಷಕರು ಪರಿಶೀಲಿ ಸಿದಾಗ ಕಂಡು ಬಂದಿದ್ದರಿಂದ ಜೀವದೊಂದಿಗೆ ಮೇಲೆ ಬಂದಿದ್ದಾಳೆ. ಬಾಲಕಿಯ ಪೋಷಕರು ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್, ಚಾಲಕ ನದಾಫ್ ಅವರುಗಳಿಗೆ ಕೈಮುಗಿದು ಕೃತಜ್ಞತೆ ಸಲ್ಲಿಸಿದ್ದು, ಬಾಲಕಿ ಮರುಜನ್ಮ ಪಡೆದು ಚೇತರಿಸಿ ಕೊಳ್ಳುತ್ತಿದ್ದಾಳೆ. -ವಿಜಯ್