ಮಡಿಕೇರಿ, ನ. 15: ಕೊಡಗು ಜಿಲ್ಲೆಯಲ್ಲಿ ಜಾಗತಿಕ ಕೊರೊನಾ ನಡುವೆ ಕಳೆದ ಏಪ್ರಿಲ್ನಿಂದ ಇದೇ ಸೆಪ್ಟೆಂಬರ್ ಅಂತ್ಯದ ತನಕ ಈ ಆರು ತಿಂಗಳಿನಲ್ಲಿ 2535 ವಾಹನಗಳನ್ನು ಸಾರ್ವಜನಿಕರು ನೋಂದಣಿ ಮಾಡಿಸಿಕೊಂಡಿದ್ದಾರೆ. ಅಲ್ಲದೆ ವಾಹನಗಳ ನೋಂದಣಿಯ ಬಾಬ್ತು ರಸ್ತೆ ಸಾರಿಗೆ ಪ್ರಾಧಿಕಾರಕ್ಕೆ ಜಿಲ್ಲೆಯಲ್ಲಿ ರೂ. 14.73 ಕೋಟಿ ಮೊತ್ತದ ರಾಜಸ್ವ ಸಂಗ್ರಹವಾಗಿದೆ. ಪ್ರಸಕ್ತ ವರ್ಷದಲ್ಲಿ ಕೊರೊನಾ ನಡುವೆ ವಾಹನಗಳ ಖರೀದಿ ಕುಂಠಿತಗೊಂಡು ಸರಕಾರಕ್ಕೆ ತೆರಿಗೆ ಕೂಡ ಇಳಿಮುಖವಾಗಿದೆ.ಈ ಬಗ್ಗೆ ಕೊಡಗು ಸಾರಿಗೆ ಪ್ರಾಧಿಕಾರದ ಸಂಪರ್ಕ ಅಧಿಕಾರಿ ಮಂಜುನಾಥ್ ಶಿರಾಲಿ ಅವರು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯೆ ನೀಡುತ್ತಾ, 2019 ರಲ್ಲಿ (ಮೊದಲ ಪುಟದಿಂದ) ರೂ. 23.28 ಕೋಟಿ ಈ ಅವಧಿಯಲ್ಲಿ ಸಂಗ್ರಹವಾಗಿದ್ದಾಗಿ ವಿವರಿಸಿದರು. ಬಹುಶಃ ದೀಪಾವಳಿ ವೇಳೆಗೆ ಆರ್ಥಿಕ ಸ್ಥಿತಿ ಸುದಾರಣೆ ಆಗಬಹುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.ಕಳೆದ ಏಪ್ರಿಲ್ನಿಂದ ಇದೇ ಸೆಪ್ಟೆಂಬರ್ ಮಾಸಾಂತ್ಯದ ಹೊತ್ತಿಗೆ ಅಧಿಕ ಸಂಖ್ಯೆಯಲ್ಲಿ ದ್ವಿಚಕ್ರ ವಾಹನಗಳು ನೋಂದಾಯಿಸಲ್ಪಟ್ಟಿವೆ. 1736 ವಾಹನಗಳು ದ್ವಿಚಕ್ರವಾಗಿದ್ದು, ಇನ್ನುಳಿದಂತೆ 625 ಕಾರುಗಳು ಹಾಗೂ 45 ಆಟೋರಿಕ್ಷಾ ಸಹಿತ 70 ಕಾರುಗಳು ನೋಂದಾಯಿಸಲ್ಪಟ್ಟಿವೆ ಎಂದು ಅವರು ಅಂಕಿಅಂಶ ನೀಡಿದರು.
ನಿಯಮ ಉಲ್ಲಂಘನೆ: ಜಿಲ್ಲೆಯಲ್ಲಿ ಬೇರೆ ಬೇರೆ ಸಂದರ್ಭ ಸಾರಿಗೆ ನಿಯಮಗಳ ಉಲ್ಲಂಘನೆ ವೇಳೆ, ಪ್ರಾಧಿಕಾರದ ಅಧಿಕಾರಿಗಳು ದಂಡ ವಿಧಿಸಿದ್ದಲ್ಲದೆ, ದಾಖಲೆಗಳನ್ನು ಪರಿಶೀಲಿಸಿ ತೆರಿಗೆ ಪಾವತಿಯಾಗದ ಪ್ರಕರಣ ಗುರುತಿಸಿ, ಅಂಥವರಿಂದಲೂ ದಂಡ ವಸೂಲಿ ಮಾಡಲಾಗಿದೆ. ಈ ರೀತಿ ದಂಡ ರೂಪದಲ್ಲಿ ರೂ. 4.89 ಲಕ್ಷ ಹಾಗೂ ತೆರಿಗೆ ರೂ. 5.6 ಲಕ್ಷ ಶೇಖರಣೆಯಾಗಿದ್ದು, ಸರಕಾರಕ್ಕೆ ರೂ. 9.95 ಲಕ್ಷ ಸಂದಾಯವಾಗಿದೆ ಎಂದು ಮಂಜುನಾಥ್ ಶಿರಾಲಿ ಮಾಹಿತಿಯಿತ್ತರು. ಅಲ್ಲದೆ ಕೊರೊನಾ ಸಂದರ್ಭ ಬಹುತೇಕ ಗ್ರಾಹಕರು ಸ್ವಂತ ಉಪಯೋಗಕ್ಕೆ ಲಘು ವಾಹನ ಖರೀದಿಸಿದ್ದು, ಭಾರೀ ಅಥವಾ ಸರಕು ವಾಹನಗಳ ಖರೀದಿ ಇಳಿಮುಖಗೊಂಡಿದೆ ಎಂದು ನೆನಪಿಸಿದರು.