ಕಣಿವೆ, ನ. 15: ಬರೋಬ್ಬರಿ 20 ಲಕ್ಷಕ್ಕೂ ಅಧಿಕ ಹಣ ವ್ಯಯಿಸಿ ಇತ್ತೀಚಿಗಷ್ಟೇ ಘನ ತ್ಯಾಜ್ಯ ನಿರ್ವಹಣಾ ಘಟಕವನ್ನು ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಆಡಳಿತ ಅನುಷ್ಠಾನಗೊಳಿಸಿದೆ.
ಕುಶಾಲನಗರದಿಂದ ಕೂಡಿಗೆಯತ್ತ ಸಾಗುವ ಹೆದ್ದಾರಿಯ ಗುಮ್ಮನಕೊಲ್ಲಿ ಸರ್ಕಾರಿ ಶಾಲೆ ಸನಿಹ ನಿವಾಸಿಗಳು ತಮ್ಮ ಮನೆಗಳಲ್ಲಿ ಸಂಗ್ರಹವಾಗುವ ತ್ಯಾಜ್ಯ ವಸ್ತುಗಳನ್ನು ತಂದು ಹೆದ್ದಾರಿಯ ಬದಿಯಲ್ಲೇ ಸುರಿಯಲಾಗುತ್ತಿದೆ.
ಇಲ್ಲಿ ಕಳೆದ ಹಲವು ವರ್ಷಗಳಿಂದಲೂ ಕಸ ಸುರಿಯಲಾಗುತ್ತಿದೆ. ಆದರೂ ಕೂಡ ಪಂಚಾಯಿತಿ ಅಲ್ಲೊಂದು ಕಾಟಾಚಾರಕ್ಕೆಂಬಂತೆ ಇಲ್ಲಿ ಕಸ ಸುರಿಯಬೇಡಿ ಎಂಬ ನಾಮಫಲಕ ಅಳವಡಿಸಿ ಸ್ಯಾನಿಟೈಸರ್ ಹಾಕಿ ಕೈ ತೊಳೆದುಕೊಂಡಿದೆ.
ಆದರೆ ಆ ನಾಮಫಲಕದಲ್ಲಿನ ಎಚ್ಚರಿಕೆಗೆ ಕೀಮತ್ತೇ ನೀಡದೇ ಮತ್ತೆ ಕಸ ಬಿಸಾಕಿ ತೆರಳುವ ಮಂದಿಯನ್ನು ಪತ್ತೆಹಚ್ಚಿ ಅಧಿಕಾರಿಗಳು ಅವರಿಗೆ ದಂಡ ಹಾಕಿದರೆ ಶುಚಿತ್ವ ಹತೋಟಿಗೆ ಬರುತ್ತಿತ್ತು. ಈ ಪಂಚಾಯಿತಿಯಲ್ಲಿ ಕೇವಲ ಐವರು ಸ್ವಚ್ಛತಾ ಸಿಬ್ಬಂದಿಗಳಿದ್ದು ಇಡೀ ಪಂಚಾಯಿತಿ ನೈರ್ಮಲ್ಯ ಸಾಧ್ಯವಾಗುತ್ತಿಲ್ಲ. ಕನಿಷ್ಟ ಹದಿನೈದು ಮಂದಿ ಸ್ವಚ್ಛತಾ ಸಿಬ್ಬಂದಿಯ ಅಗತ್ಯವಿದೆ. ಆ ಕೆಲಸವನ್ನು ಮಾಡದ ಹೊರತು ಪಂಚಾಯಿತಿ ವ್ಯಾಪ್ತಿಯ ಬಡಾವಣೆಗಳ ಸ್ವಚ್ಛತೆ ಹಾಗೂ ಹೆದ್ದಾರಿ ಬದಿಯ ನೈರ್ಮಲ್ಯ ಅಸಂಭವವಾದೀತು.