ಮಡಿಕೇರಿ, ನ. 15: ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘದ ನಿರ್ದೇಶಕರೊಬ್ಬರು 2019-20ನೇ ಸಾಲಿನಲ್ಲಿ ದಾಸ್ತಾನು ಪರಿಶೀಲನೆ ಸಂದರ್ಭ ಸಿಮೆಂಟ್ ಶೀಟ್ಗಳು ಹಾನಿಗೀಡಾಗಿವೆ ಎಂದು ಹೇಳಿ ಯಾರ ಒಪ್ಪಿಗೆಯೂ ಇಲ್ಲದೆ ನಿಯಮ ಬಾಹಿರವಾಗಿ ತೆಗೆದುಕೊಂಡು ಹೋಗಿದ್ದು, ಇವರ ಸದಸ್ಯತ್ವವನ್ನು ರದ್ದುಗೊಳಿಸಬೇಕೆಂದು ಸಂಘದ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಬಿ.ಈ. ಬೋಪಯ್ಯ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಂಸ್ಥೆಗೆ ಸೇರಿದ ಯಾವುದೇ ವಸ್ತುಗಳನ್ನು ತೆಗೆದುಕೊಂಡು ಹೋಗಲು ಸಹಕಾರ ಇಲಾಖೆಯ ಅನುಮತಿ ಪಡೆಯಬೇಕು. ಮಹಾಸಭೆಯ ಒಪ್ಪಿಗೆಬೇಕು. ಸಂಸ್ಥೆಯ ವಸ್ತುಗಳ ದರವನ್ನು ಅಥವಾ ಹರಾಜಿನ ನಿರ್ಧಾರವನ್ನು ಆಡಳಿತ ಮಂಡಳಿ ಮಾಡಬೇಕಾಗುತ್ತದೆ. ಆದರೆ ಇದನ್ನು ಮೀರಿ ಶೀಟ್ಗಳನ್ನು ತೆಗೆದುಕೊಂಡು ಹೋಗಲಾಗಿದೆ ಎಂದು ಆರೋಪಿಸಿದರು.
ಇದಕ್ಕೆ ಸಂಬಂಧಿಸಿದಂತೆ ಕಚೇರಿಯ ರಶೀದಿ ಸಂಖ್ಯೆ 580 ಆಗಿದ್ದು, ಅರ್ಧ ಹಣವನ್ನು ನೀಡಿರುತ್ತಾರೆ. ಆದರೆ ತೆಗೆದುಕೊಂಡು ಹೋದ ಶೀಟ್ಗಳು ಹಾನಿಗೀಡಾಗಿರಲಿಲ್ಲ. ಆದ್ದರಿಂದ ಸಹಕಾರ ಇಲಾಖೆ ಶೀಟ್ಗಳನ್ನು ಮರಳಿ ಪಡೆಯಬೇಕು ಮತ್ತು ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಸದಸ್ಯತ್ವವನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿದರು.
ಸಂಸ್ಥೆಗೆ ಹೊಸದಾಗಿ ಇಬ್ಬರು ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುವ ಸಂದರ್ಭ ರೈತ ಮಿತ್ರ ಕೂಟದ ಸದಸ್ಯರೊಬ್ಬರು ನಾಲ್ಕನೇ ದರ್ಜೆ ನೌಕರರೊಬ್ಬರಿಂದ ರೂ. 25 ಸಾವಿರ ಹಣವನ್ನು ಪಡೆದಿದ್ದಾರೆ ಎಂದು ಆರೋಪಿಸಿದ ಅವರು, ಈ ಬಗ್ಗೆಯೂ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದರು.