ವೀರಾಜಪೇಟೆ, ನ. 15: ಸಹಕಾರಿ ಕ್ಷೇತ್ರ ಇನ್ನಷ್ಟು ಅಭಿವೃದ್ಧಿಯಲ್ಲಿ ಮುನ್ನಡೆಯಲು ಕೊಡಗಿನ ಸಹಕಾರಿಗಳ ಸಹಕಾರ ಅಗತ್ಯ ಎಂದು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ನ ಆಡಳಿತ ಮಂಡಳಿ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಹೇಳಿದರು.

ವೀರಾಜಪೇಟೆಯ ಕೊಡಗು ಜಿಲ್ಲಾ ಮಹಿಳಾ ಸಮಾಜದ ಸಭಾಂಗಣದಲ್ಲಿ ಜಿಲ್ಲಾ ಸಹಕಾರ ಯೂನಿಯನ್, ಜಿಲ್ಲಾ ಸಹಕಾರ ಬ್ಯಾಂಕ್ ಹಾಗೂ ಕೊಡಗು ಮಹಿಳಾ ವಿವಿಧೋದ್ದೇಶ ಸಹಕಾರ ಸಂಘದ ಸಂಯುಕ್ತ ಆಶ್ರಯದಲ್ಲಿ 67ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ‘ಸಹಕಾರಿ ಮಾರಾಟ, ಗ್ರಾಹಕ ರೂಪಾಂತರ ಮತ್ತು ಮೌಲ್ಯ ವರ್ಧನೆ’ ದಿನಾಚರಣೆಯ ಪ್ರಯುಕ್ತ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಬಾಂಡ್ ಗಣಪತಿ, ವೀರಾಜಪೇಟೆಯಲ್ಲಿರುವ ಕೊಡಗು ಜಿಲ್ಲಾ ಮಹಿಳಾ ಸಹಕಾರ ಸಂಘ ಸಹಕಾರ ಬ್ಯಾಂಕ್ ಆಗಿ ಪರಿವರ್ತನೆಗೊಂಡರೆ ಇನ್ನಷ್ಟು ಪ್ರಗತಿ ಕಾಣಲು ಸಾಧ್ಯವಾಗಲಿದೆ ಎಂದರು.

ಕೊಡಗು ಸಹಕಾರಿ ರತ್ನ ಪುರಸ್ಕøತರಾದ ಬಲ್ಲಡಿಚಂಡ ನಾಣಯ್ಯ ಸಪಾಹವನ್ನು ಉದ್ಘಾಟಿಸಿ ಮಾತನಾಡಿ, ಕೊಡಗಿನಲ್ಲಿ ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ಹಿಂದಿನ ಹಿರಿಯ ಸಹಕಾರಿಗಳು ಅಡಿಗಲ್ಲು ಹಾಕಿದ್ದಾರೆ. ಇದನ್ನು ಉಳಿಸಿ ಬೆಳೆಸಿ ಮುಂದುವರೆಸುವುದು ಇಂದಿನ ಸಹಕಾರಿಗಳ ಕರ್ತವ್ಯ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಅಪ್ಪಚಟ್ಟೋಳಂಡ ಮನು ಮುತ್ತಪ್ಪ ಮಾತನಾಡಿ, ವೀರಾಜಪೇಟೆ ಮಹಿಳಾ ಸಮಾಜ ಅನೇಕ ವರ್ಷಗಳ ಹಿಂದಿನ ಸಹಕಾರ ಸಂಘವಾಗಿದ್ದು ಮಹಿಳೆಯರು ಸಹಕಾರಿ ಕ್ಷೇತ್ರದಲ್ಲಿ ಸಬಲೆಯರು ಎನ್ನುವುದನ್ನು ತೋರಿಸಿ ಕೊಟ್ಟಿದೆ ಎಂದರು.

ಇದೇ ಸಂದರ್ಭ ಸಹಕಾರ ಕ್ಷೇತ್ರದಲ್ಲಿ ವಿವಿಧ ರೀತಿಯಲ್ಲಿ ಸಾಧನೆಗೈದ ಸೋಮೆಯಂಡ ಕಮಲ, ಐ.ಎಂ. ಕಾವೇರಮ್ಮ, ಬೊವ್ವೇರಿಯಂಡ ಆಶಾ ಸುಬ್ಬಯ್ಯ ಹಾಗೂ ಬಿ.ಆರ್ ಸುಧಾ ಇವರುಗಳನ್ನು ಬಾಂಡ್ ಗಣಪತಿ ಸನ್ಮಾನಿಸಿದರು.

ಸಮಾರಂಭದಲ್ಲಿ ಅತಿಥಿಗಳಾಗಿ ಸಹಕಾರ ಯೂನಿಯನ್‍ನ ಉಪಾಧ್ಯಕ್ಷ ಪಟ್ಟಡ ಮನು ರಾಮಚಂದ್ರ, ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕ ರಘುನಾಣಯ್ಯ, ನಿರ್ದೇಶಕ ಎಚ್.ಎಂ. ರಮೇಶ್, ಪೆಮ್ಮಂಡ ವಿ. ಭರತ್, ಕೊಂಗಂಡ ವಾಸು ಮುದ್ದಯ್ಯ, ಅರುಣ್ ಭೀಮಯ್ಯ, ನಾಪಂಡ ಉಮೇಶ್ ಉತ್ತಪ್ಪ, ಅಜಯ್ ಕುಮಾರ್, ಮೂಕಚಂಡ ಟಿ. ಸುಬ್ಬಯ್ಯ, ಕೊಡಗು ಮಹಿಳಾ ವಿವಿಧೋದ್ದೇಶ ಸಹಕಾರ ಸಂಘದ ಯು.ಕೆ. ಪೊನ್ನಮ್ಮ ಹಾಗೂ ಸಹಕಾರ ಅಭಿವೃದ್ಧಿ ಅಧಿಕಾರಿ ಎಂ.ಎಸ್. ಮೋಹನ್ ಮತ್ತಿತರರು ಹಾಜರಿದ್ದರು.

ಕೊಡಗು ಮಹಿಳಾ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷೆ ಪಟ್ರಪಂಡ ಗೀತಾ ಬೆಳ್ಳಿಯಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಜಿಲ್ಲಾ ಸಹಕಾರಿ ಯೂನಿಯನ್‍ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ನಿರೂಪಿಸಿ, ವಂದಿಸಿದರು.