ವೀರಾಜಪೇಟೆ, ನ.15: ಇಂದು ಸಂಜೆ 6-30 ರ ಸಮಯದಲ್ಲಿ ಪಂಜರ್ಪೇಟೆ ಬಳಿಯ ನಿಸರ್ಗ ಬಡಾವಣೆ ಬಳಿ ಬೈಕ್ವೊಂದಕ್ಕೆ ಚತುಷ್ಚಕ್ರ ವಾಹನವೊಂದು ಡಿಕ್ಕಿಯಾಗಿ ಪರಾರಿಯಾಗಿದ್ದು, ಬೈಕ್ ಸವಾರ ಎ.ಎಸ್.ತಿಮ್ಮಯ್ಯ (34) ಎಂಬವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಮೃತ ತಿಮ್ಮಯ್ಯ ಅವರ ಪರ್ಸ್ನಲ್ಲಿದ್ದ ದಾಖಲೆಗಳಿಂದ ತಿಮ್ಮಯ್ಯ ಹೊದ್ದೂರು ಗ್ರಾಮದ ನಿವಾಸಿ ಎಂಬುದು ಗೊತ್ತಾಗಿದ್ದು, ಡಿಕ್ಕಿಯಾದ ವಾಹನದೊಂದಿಗೆ ಚಾಲಕ ತಲೆಮರೆಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಯಾವ ವಾಹನ ಡಿಕ್ಕಿಯಾಗಿದೆ ಎಂದು ಪೊಲೀಸ್ ತನಿಖೆಯಿಂದ ಬಯಲಾಗಬೇಕಿದೆ. ತಿಮ್ಮಯ್ಯ ತನ್ನ ಬೈಕ್ನಲ್ಲಿ ಮೂರ್ನಾಡು ಬಳಿಯ ಹೊದ್ದೂರು ಗ್ರಾಮದಿಂದ ಬಿಟ್ಟಂಗಾಲ ಕಡೆಗೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಬಿಟ್ಟಂಗಾಲ ಕಡೆಯಿಂದ ಬಂದ ವಾಹನ ಬೈಕ್ಗೆ ಡಿಕ್ಕಿ ಹೊಡೆದಿರುವುದಾಗಿ ತಿಳಿದುಬಂದಿದೆ.
ವೀರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಾಪತ್ತೆಯಾದ ವಾಹನ ಹಾಗೂ ಚಾಲಕನ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. ಅಪಘಾತ ನಡೆದ ಸ್ಥಳಕ್ಕೆ ವೀರಾಜಪೇಟೆ ವಲಯದ ಡಿ.ವೈ.ಎಸ್.ಪಿ. ಸಿ.ಟಿ.ಜಯಕುಮಾರ್ ಭೇಟಿ ನೀಡಿ ಮಹಜರು ನಡೆಸಿದರು.