ಕಣಿವೆ, ನ. 14: ತೋಟಕ್ಕೆ ಬೇಲಿ ನಿರ್ಮಿಸುವ ಬದಲು ತರಕಾರಿ ಹಾಸುಗಳ ಬಳ್ಳಿಗಳನ್ನು ಬೆಳೆಸಿ, ರಸ್ತೆ ಹೋಕರನ್ನು ಆಕರ್ಷಿಸಿ ವ್ಯಾಪಾರ ಮಾಡುವದು., ಮಾರುಕಟ್ಟೆಗಿಂತ ಕಡಿಮೆ ಬೆಲೆಯಲ್ಲಿ ತಾಜಾ ತರಕಾರಿಗಳನ್ನು ಮಾರಾಟ ಮಾಡುವ ಪರಿದು.ಇದು ಹಾರಂಗಿ ಜಲಾಶಯದ ಎದುರಿನ ಯಡವನಾಡು ರಸ್ತೆಯ ನಿವಾಸಿ ಬೊಳ್ತಂಡ ಪೂವಯ್ಯ ಹಾಗೂ ಕಾಮವ್ವ ಎಂಬವರ ಪುತ್ರÀ ಸಜನ್ ಹಾಗೂ ಸೊಸೆ ಕನ್ನಿಕಾ ದಂಪತಿಗಳು ಮಾಡಿರುವ ವಿನೂತನ ಪ್ರಯತ್ನ.ವರ್ಷವಿಡೀ ಹರಿಯುವ ಹಾರಂಗಿ ನದಿಯ ನೀರನ್ನು ಬಳಸಿ ಬೆಳೆಯುವ ತರಕಾರಿ ಹಾಗೂ ಕಾಯಿಪಲ್ಲೆಗಳನ್ನು ಸ್ಥಳೀಯವಾಗಿ ಮಾರಾಟ ಮಾಡಿ ನಂತರ ಉಳಿದಿದ್ದನ್ನು ಕುಶಾಲನಗರ ಮೊದಲಾದ ಮಾರುಕಟ್ಟೆಗಳಿಗೆ ಪೂರೈಸುವಲ್ಲಿ ಈ ದಂಪತಿಗಳು ಮಾದರಿಯಾಗಿದ್ದಾರೆ.

ಮೂಲತಃ ಟ್ಯಾಕ್ಸಿ ಚಾಲಕ ಹಾಗೂ ಮಾಲೀಕನಾಗಿರುವ ಸಜನ್, ಕೊರೊನಾ ಲಾಕ್ ಡೌನ್‍ನಿಂದಾಗಿ ಪ್ರವಾಸಿ ಟ್ಯಾಕ್ಸಿಗಳು ಸಂಚರಿಸದ ಕಾರಣ ಜೀವನೋಪಾಯಕ್ಕಾಗಿ ಮತ್ತು ಲಾಭದಾಯಕ್ಕಾಗಿ ತಮ್ಮ ಮೂರು ಎಕರೆ ಕಾಫಿ ತೋಟದ ಒಂದು ಭಾಗದ ಬೇಲಿಯನ್ನು ತಾಜಾ ತರಕಾರಿಗಳನ್ನು ಬೆಳೆಸಲೆಂದೇ ಬಿಟ್ಟುಕೊಂಡಿದ್ದಾರೆ.ರಸ್ತೆಯಂಚಿನಲ್ಲಿರುವ ಈ ತೋಟಕ್ಕೆ ಬೀಡಾಡಿ ದನಗಳು ಬರದಂತೆ ಸೋಲಾರ್ ಬೇಲಿಯನ್ನು ಅಳವಡಿಸಿರುವ ಇವರು ಸೋಲಾರ್ ಬೇಲಿ ಪಕ್ಕದಲ್ಲಿ ರಸ್ತೆಯಲ್ಲಿ ಸಾಗುವವರನ್ನು ಆಕರ್ಷಿಸುವಂತೆ ತಾಜಾ ತರಕಾರಿಗಳನ್ನು ಬೆಳೆಸಿರುವ ಪರಿ ಹೇಗಿದೆ ಎಂದರೆ ತೋಟದ ಬೇಲಿಯಾಕಾರದಲ್ಲಿ ಹಾಸು ಹೊದ್ದಿರುವ ಹಲಸಂದೆ, ಕಾಳು ಬೀನ್ಸ್, ನುಗ್ಗೆ ಸೊಪ್ಪು, ನುಗ್ಗೆ ಕಾಯಿ, ಹಸಿ ಮೆಣಸಿನ ಕಾಯಿ, ತೊಂಡೆ, ಬದನೆ ಮೊದಲಾದ ತಾಜಾ ತರಕಾರಿಗಳು ರಸ್ತೆಯಲ್ಲಿ ಸಾಗುವ ಎಂಥವರನ್ನು ಒಮ್ಮೆ ಇತ್ತ ಆಕರ್ಷಿಸದೆ ಇರಲಾರದು.

ಜೊತೆಗೆ ಅಕ್ಕಪಕ್ಕದ ನಿವಾಸಿಗಳು ತರಕಾರಿಗಳು ಬೇಕೆಂದರೆ, ಈ ದಂಪತಿಗಳ ಬಳಿ ಬಂದು ತಮಗೆ ಅಗತ್ಯವಿರುವ ತರಕಾರಿಗಳನ್ನು ಗಿಡದಿಂದ ಬಿಡಿಸಿಕೊಂಡು ನೇರವಾಗಿ ತಮ್ಮ ಮನೆಗಳ ಅಡುಗೆ ಮನೆಗೆ ಕೊಂಡೊಯ್ಯುತ್ತಿದ್ದಾರೆ.

ರಸ್ತೆಯಲ್ಲಿ ಸಾಗುವ ಹಿಂಡು ಹಿಂಡು ಬೀಡಾಡಿ ದನಗಳಿಂದ ಉಚಿತವಾಗಿಯೇ ಸಿಗುವ ಸಗಣಿಯನ್ನು ಸಂಗ್ರಹಿಸಿಟ್ಟು ಸಾವಯವ ಗೊಬ್ಬರವಾಗಿಸುವ

ಈ ದಂಪತಿಗಳು ತಾವು ಬೆಳೆಸಿದ ತರಕಾರಿ ಬಳ್ಳಿಗಳ ಬುಡಕ್ಕೆ ಸಾವಯವ ಗೊಬ್ಬರ ಹಾಕಿ, ನೀರನ್ನು

ಸಿಂಪಡಿಸಿ ಬೆಳೆಸುವ ರೀತಿಗೆ ಸ್ಥಳೀಯರು ಮಾರು ಹೋಗಿದ್ದಾರೆ.