ಸುಂಟಿಕೊಪ್ಪ, ನ.14: ಕಾಫಿ ಬೆಳೆಗಾರರಿಗೆ ಆಶ್ರಯದಾತವಾದ ಕರಿಮೆಣಸು ವಾತಾವರಣ ವೈಪರೀತ್ಯ ಸೊರಗು ರೋಗದಿಂದ ಬಳಲುತ್ತಿದ್ದು, ಫಸಲು ಇಳಿಮುಖವಾಗುತ್ತಿರುವುದರಿಂದ ಬೆಳೆಗಾರರು ಕಂಗಲಾಗಿದ್ದಾರೆ.
ಕರಿಮೆಣಸು ಧಾರಣೆ ಏರುಮುಖವಾಗದೆ ಕಳೆದ 3 ವರ್ಷದಿಂದ ಬೆಳೆಗಾರರು ಸ್ಥಿರ ಬೆಲೆಗೆ ಕಪ್ಪು ಬಂಗಾರವೆನಿಸಿದ ಕರಿಮೆಣಸನ್ನು ಮಾರಾಟ ಮಾಡುತ್ತಿದ್ದಾರೆ.
ಕೇರಳ ಹಾಗೂ ತಮಿಳುನಾಡಿನಲ್ಲಿ ಕರಿಮೆಣಸು ಫಸಲು ತೀರಾ ಕುಂಠಿತಗೊಂಡಿದ್ದು, ಕರ್ನಾಟಕದ ಮೆಣಸಿಗೆ ಅಂತರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದೆ. ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಯ ಕೆಲ ತಾಲೂಕುಗಳಲ್ಲಿ ಕಾಫಿ ತೋಟದಲ್ಲಿ ಉಪಬೆಳೆಯಾಗಿ ಕರಿಮೆಣಸನ್ನು ಬೆಳೆಸಲಾಗುತ್ತಿದೆ. ಇತ್ತೀಚೆಗಿನ 3 ವರ್ಷದಲ್ಲಿ ವಿಪರೀತ ಅಕಾಲಿಕ ಮಳೆಯಿಂದ ಕೊಳೆರೋಗ ಬಂದು ಕರಿಮೆಣಸು ಬಳ್ಳಿ ನಾಶವಾಗಿದೆ. ಮತ್ತೊಂದೆಡೆ ದರ ಕೆ.ಜಿ.ಗೆ 300ರಿಂದ 320ರÀ ಆಸುಪಾಸಿನಲ್ಲಿ ಬಂದು ನಿಂತಿದೆ. ಕಾಫಿಗೆ ಖರ್ಚು ಹೆಚ್ಚು ತಗುಲುತ್ತಿದ್ದು, ಗೊಬ್ಬರ, ಕಾರ್ಮಿಕರ ಖರ್ಚು, ಔಷಧಿ ಸಿಂಪಡಣೆಯಿಂದ ಕಾಫಿ ತೋಟ ನಿರ್ವಹಣೆ ಕಷ್ಟಕರವಾಗಿದೆ. ರೋಗ ತಗುಲಿ ಬಳ್ಳಿ ನಾಶವಾಗಿದ್ದು, ಫಸಲು ಕೈಗೆ ಸಿಗದೆ ಗಾಯದ ಮೇಲೆ ಬರೆ ಎಳೆದಂತಾಗಿದೆ. 5 ವರ್ಷಗಳ ಹಿಂದೆ ಕರಿಮೆಣಸ್ಸಿಗೆ 800ರಿಂದ 1000 ರೂ. ವರೆಗೆ 1 ಕೆಜಿಗೆ ದರ ಲಭಿಸಿದ್ದು, ಆಗ ತೋಟವನ್ನು ಗುತ್ತಿಗೆ ಪಡೆಯಲು ಮುಗಿಬೀಳುತ್ತಿದ್ದ ಕರಿಮೆಣಸು ವ್ಯಾಪಾರಸ್ಥರು ಬೆಲೆ ಇಳಿಮುಖವಾದ ನಂತರ ತಿರುಗಿಯೂ ನೋಡುತ್ತಿಲ್ಲ. ಕರಿಮೆಣಸು ಕೊಯ್ಯುವ ವೆಚ್ಚವೂ ಅಧಿಕವಾಗಿದೆ. ಒಣಗಿಸುವ ಜವಾಬ್ದಾರಿ ಎಲ್ಲವೂ ಬೆಳೆಗಾರರಿಗೆ ದುಬಾರಿಯಾಗುತ್ತಿದೆ. ಅತಿವೃಷ್ಟಿಯಿಂದ ಜಲಪ್ರಳಯದಿಂದ 3 ವರ್ಷದಲ್ಲಿ ಬೆಳೆಗಾರರ ಸ್ಥಿತಿ ಅಯೋಮಯವಾಗಿದೆ.
ಉತ್ತರ ಭಾರತದಲ್ಲಿ ವಿಪರೀತ ಚಳಿ ಆರಂಭವಾಗಿದ್ದು, ಕರ್ನಾಟಕದ ಕರಿಮೆಣಸಿಗೆ ಬೇಡಿಕೆ ಇದೆ. ಅದರಲ್ಲೂ ಕೊಡಗು ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಮಣ್ಣಿನ ಫಲವತ್ತತೆಯಿಂದ ಉತ್ತಮ ಗುಣಮಟ್ಟ ಮೆಣಸು ಲಭಿಸುತ್ತಿದೆ. ಈ ವರ್ಷ ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್, ನವೆಂಬರ್‍ನಲ್ಲೂ ಮಳೆ ಸುರಿದಿರುವುದರಿಂದ ಕೊತ್ತುಗಳು ಉದುರಿ ಫಸಲು ಕಡಿಮೆಯಾಗಿದೆ. ಮತ್ತೊಂದೆಡೆ ಹಳದಿರೋಗ, ಸೊರಗುರೋಗ ತಗುಲಿ ನಾಶವಾಗುತ್ತಿರುವುದರಿಂದ ಮುಂದಿನ ಸಾಲಿಗೆ ತೋಟ ನಿರ್ವಹಣೆ ಹೇಗೆ ಎಂಬ ಚಿತ್ತದಲ್ಲಿ ಬೆಳೆಗಾರರು ಇದ್ದಾರೆ. ಕಾರ್ಮಿಕರ ಕೊರತೆ, ಕಾಫಿ ತೋಟದ ಕೆಲಸಕ್ಕೆ ಬೇಕಾದ ಉಪಕರಣಗಳು ದುಬಾರಿಯಾಗಿದೆ. ಬೆಲೆ, ಗೊಬ್ಬರ, ಜೌಷಧಿಗಳ ಬೆಲೆ ಏರಿಕೆಯಿಂದ ತೋಟ ನಿರ್ವಹಣೆ ಕಷ್ಟಸಾಧ್ಯವಾಗಿದೆ. ಮುಂದೆ ಮಕ್ಕಳ ವಿದ್ಯಾಭ್ಯಾಸ ಜೀವನ ಸಾಗಿಸುವುದು ಪ್ರಯಾಸವಾಗಿದೆ ಎಂದು ಬೆಳೆಗಾರರಾದ ಮಾದಾಪುರದ ಸಂದೇಶ್ ತಮ್ಮ ನೋವು ಹೇಳಿಕೊಳ್ಳುತ್ತಾರೆ. -ರಾಜು ರೈ