ಸಿದ್ದಾಪುರ, ನ. 14: ವಾಲ್ನೂರು- ತ್ಯಾಗತ್ತೂರು ಹಾಗೂ ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ವತಿಯಿಂದ ಮಕ್ಕಳ ದಿನಾಚರಣೆ ಅಂಗವಾಗಿ ಮಕ್ಕಳಿಗೆ ಓದಿನ ಬೆಳಕು ಯೋಜನೆಯಡಿ ಉಚಿತ ಗ್ರಂಥಾಲಯ ನೋಂದಣಿ ಅಭಿಯಾನ ಕಾರ್ಯಕ್ರಮವು ನಡೆಯಿತು. ಕಾರ್ಯಕ್ರಮದಲ್ಲಿ ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ ಅನಿಲ್ ಕುಮಾರ್ ಮಾತನಾಡಿ ಮಕ್ಕಳ ಕಲಿಕೆ ಹಾಗೂ ಜ್ಞಾನಾರ್ಜನೆ ಹೆಚ್ಚಿಸುವ ನಿಟ್ಟಿನಲ್ಲಿ ಗ್ರಾ. ಪಂ. ಮೂಲಕ ಉಚಿತ ಗ್ರಂಥಾಲಯ ನೋಂದಣಿ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಮಕ್ಕಳು ಪುಸ್ತಕಗಳನ್ನು ಓದುವ ಮೂಲಕ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು. ಮಕ್ಕಳ ಓದುವಿಕೆಗೆ ಪೋಷಕರು ಗಮನ ಹರಿಸಿ ಸಹಕಾರ ನೀಡಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಜಿ.ಪಂ. ಸದಸ್ಯೆ ಸುನಿತಾ ಮಂಜುನಾಥ್, ಪಂಚಾಯತ್ ಆಡಳಿತಾಧಿಕಾರಿ ಎಸ್.ಎನ್ ನಾಗರಾಜು, ಮಾಜಿ ಗ್ರಾ.ಪಂ. ಸದಸ್ಯರುಗಳು ಹಾಗೂ ಪಂಚಾಯಿತಿ ಸಿಬ್ಬಂದಿಗಳು ಹಾಜರಿದ್ದರು.