ಸಿದ್ದಾಪುರ, ನ, 14: ವ್ಯಕ್ತಿಯೋರ್ವ ಆಕಸ್ಮಿಕವಾಗಿ ತೆರೆದ ಬಾವಿಗೆ ಬಿದ್ದು ಅಚ್ಚರಿಯಾಗಿ ಬದುಕುಳಿದ ಘಟನೆ ಸಿದ್ದಾಪುರದ ಕರಡಿಗೋಡು ಸಮೀಪ ಇಂದು ಬೆಳಿಗ್ಗೆ ನಡೆದಿದೆ. ಸಿದ್ದಾಪುರದ ಕರಡಿಗೋಡು ಸಮೀಪದ ಅಂಗನವಾಡಿ ಶಿಕ್ಷಕಿ ಸರಸು ಎಂಬವರ ಪತಿ ಕೃಷ್ಣ (55) ಎಂಬವರು ಶನಿವಾರ ಬೆಳಗ್ಗಿನ ಜಾವ ಅಂದಾಜು 5.45ರ ಸಮಯಕ್ಕೆ ನಿದ್ರೆಯಿಂದ ಎದ್ದು ಮನೆಯ ಮುಂಭಾಗಕ್ಕೆ ಬಂದಿದ್ದರು ಎನ್ನಲಾಗಿದೆ. ಈ ಸಂದರ್ಭ ಮನೆಯ ಮುಂಭಾಗದಲ್ಲಿದ್ದ ತೆರೆದ ಬಾವಿಗೆ ಕಾಲು ಜಾರಿ ಬಿದ್ದಿದ್ದಾರೆ. ನಂತರ ಹುಡುಕಾಡಿದ ಸಂದರ್ಭದಲ್ಲಿ ಮನೆಯ ಮುಂಭಾಗದ ಬಾವಿಯ ಒಳಗಿನಿಂದ ಕೂಗುವ ಸದ್ದು ಕೇಳಿ ಬಂದಿತು. ಕೂಡಲೇ ಸರಸು ಅವರು ಅಕ್ಕಪಕ್ಕದ ನಿವಾಸಿಗಳನ್ನು ಕರೆದು ಬಾವಿಯಲ್ಲಿ ಬಿದ್ದಿರುವ ತನ್ನ ಪತಿಯನ್ನು ರಕ್ಷಣೆ ಮಾಡಲು ಸ್ಥಳೀಯರೊಂದಿಗೆ ಸೇರಿ ಪ್ರಯತ್ನಿಸಿದರು. ಆದರೆ ಸುಮಾರು 30 ರಿಂದ 40 ಅಡಿಗಳ ಆಳದಷ್ಟು ಇರುವ ಬಾವಿಯ ಒಳಗಿನಿಂದ ಕೃಷ್ಣ ಅವರನ್ನು ಮೇಲಕ್ಕೆತ್ತಲು ಹರಸಾಹಸ ಪಟ್ಟರೂ ಕೂಡ ಸಾಧ್ಯವಾಗಲಿಲ್ಲ. ಹಗ್ಗಗಳನ್ನು ಬಳಸಿ ಪ್ರಯತ್ನಿಸಿದರು ಕೂಡ ಕೃಷ್ಣರವರು ಬಾವಿಯೊಳಗಿನಿಂದ ಬರಲು ಕಷ್ಟಕರವಾಗಿತ್ತು. ನಂತರ ಗೋಣಿಕೊಪ್ಪಲಿನ ಅಗ್ನಿಶಾಮಕದಳದ ಸಿಬ್ಬಂದಿಗಳು ವಾಹನದಲ್ಲಿ ಆಗಮಿಸಿ ಸತತ 3 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬಾವಿಯೊಳಗಿದ್ದ ಕೃಷ್ಣ ಅವರನ್ನು ಮೇಲಕ್ಕೆತ್ತುವಲ್ಲಿ ಯಶಸ್ವಿಯಾದರು.
ಅದೃಷ್ಟವಶಾತ್ ಬಾವಿಯೊಳಗೆ ಬಿದ್ದಿದ್ದ ಕೃಷ್ಣ ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಸ್ಥಳೀಯರು ನಿಟ್ಟುಸಿರು ಬಿಡುವಂತಾಯಿತು. ಬಾವಿಯೊಳಗೆ ಬಿದ್ದ ಪರಿಣಾಮ ಕೃಷ್ಣ ಅವರಿಗೆ ಸಿದ್ದಾಪುರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಯನ್ನು ನೀಡಲಾಯಿತು. ಸ್ಥಳಕ್ಕೆ ಸಿದ್ದಾಪುರದ ಸಹಾಯಕ ಠಾಣಾಧಿಕಾರಿ ಪ್ರವೀಣ್ ಹಾಗೂ ಸಿಬ್ಬಂದಿ ಭರತ್ ಭೇಟಿ ನೀಡಿ ಕಾರ್ಯಾಚರಣೆಗೆ ಸಹಕರಿಸಿದರು. ಅಲ್ಲದೇ ಸ್ಥಳೀಯರು ಕೂಡ ವಿಚಾರ ತಿಳಿದು ಧಾವಿಸಿ ಬಂದು ಎಲ್ಲಾ ರೀತಿಯಲ್ಲಿ ಕಾರ್ಯಾಚರಣೆಗೆ ಸಹಕಾರ ನೀಡಿದರು.
-ವಾಸು ಎ.ಎನ್.