ಕಣಿವೆ, ನ. 14: ಸಹಕಾರ ಸಂಘಗಳು ಮಾಡಿರುವ ಸಾಧನೆಗಳನ್ನು ಜನಮಾನಸಕ್ಕೆ ತಿಳಿಯಪಡಿಸಿ ಹಿರಿಯ ಸಹಕಾರಿಗಳನ್ನು ಸ್ಮರಿಸುವುದೇ ಸಹಕಾರ ಸಪ್ತಾಹದ ಉದ್ದೇಶ ಎಂದು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎ.ಕೆ. ಮನು ಮುತ್ತಪ್ಪ ಹೇಳಿದರು.ಕೂಡಿಗೆಯ ರಾಮೇಶ್ವರ ಕೂಡುಮಂಗಳೂರು ಸಹಕಾರ ಭವನದಲ್ಲಿ ನಡೆದ 67ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಿರಿಯ ಸಹಕಾರಿಗಳು ಕಟ್ಟಿ ಬೆಳೆಸಿರುವ ಸಹಕಾರ ಸಂಘಗಳು ಇಂದು ಹೆಮ್ಮರವಾಗಿ ಬೆಳೆದಿರುವುದರಿಂದ ಕೃಷಿಕರು, ಮಹಿಳೆಯರು ಹಾಗೂ ಗ್ರಾಮೀಣ ಪ್ರದೇಶಗಳ ಜನರು ಸ್ವಾವಲಂಬಿಗಳಾಗಿ ಜೀವನ ನಡೆಸಲು ಸಾಧ್ಯವಾಗಿದೆ. ಹಾಲು ಉತ್ಪಾದಕರ ಸಂಘಗಳು, ಪತ್ತಿನ ಸಹಕಾರ ಸಂಘಗಳು, ಮಹಿಳಾ ಸಂಘಗಳು ಮತ್ತು ದವಸ ಭಂಡಾರಗಳನ್ನು ಕಟ್ಟಿ ಬೆಳೆಸಿದ ಹಿರಿಯರು ಯಾವುದೇ ಫಲಾಪೇಕ್ಷೆಗಳಿಲ್ಲದೇ ನಿರಂತರವಾದ ನಿಸ್ವಾರ್ಥ ಸೇವೆಯನ್ನು ಮಾಡಿಕೊಂಡು ಬಂದಿರುವುದನ್ನು ನಾವು ಮುನ್ನಡೆಸುತ್ತಿದ್ದೇವೆ.
ಆದರೆ ಇಂತಹ ನಿಸ್ವಾರ್ಥ ಸಾಧಕರನ್ನು ಗುರುತಿಸಿ ಗೌರವಿಸುವ ಕೆಲಸ ಸಹಕಾರ ಇಲಾಖೆ ಯಿಂದಾಗಲೀ ಸರ್ಕಾರಗಳಿಂದಾಗಲೀ ಆಗದಿರುವುದು ವಿಷಾದನೀಯ ಎಂದರು. ಕಳೆದ ಮೂರು ವರ್ಷಗಳಿಂದ ಕೊಡಗಿನಲ್ಲಿ ಸಹಕಾರ ಯೂನಿಯನ್ ವತಿಯಿಂದ ಇಂತಹ ಸಾಧಕರನ್ನು ಗುರುತಿಸಿ ಗೌರವಿಸುವ ಕೆಲಸ ಮಾಡುತ್ತಿರುವ ಹೆಮ್ಮೆ ನಮ್ಮ ತಂಡಕ್ಕಿದೆ ಎಂದರು.
ಸಹಕಾರ ಧ್ವಜಾರೋಹಣ ಮಾಡಿದ ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಅಧ್ಯಕ್ಷ ಕೊಡಂದೇರ ಪಿ. ಗಣಪತಿ, ಕೊಡಗು ಜಿಲ್ಲೆಯಲ್ಲಿರುವ 274 ಸಹಕಾರ ಸಂಘಗಳ ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗ ಪ್ರಾಮಾಣಿಕವಾದ ಹಾಗೂ ಪಾರದರ್ಶಕವಾದ ಆಡಳಿತ ಮಾಡಿಕೊಂಡು ಬರುತ್ತಿರುವುದು ಶ್ಲಾಘನೀಯ.
ಜಿಲ್ಲೆಯಲ್ಲಿರುವ ಎಲ್ಲಾ ಸಹಕಾರ ಸಂಘಗಳ ವಾರ್ಷಿಕ ವ್ಯವಹಾರ 8 ರಿಂದ 9 ಸಾವಿರ ಕೋಟಿಗಳಷ್ಟಿದ್ದರೆ, ಡಿಸಿಸಿ ಬ್ಯಾಂಕ್ ಒಂದರಿಂದಲೇ 1800 ಕೋಟಿ ವ್ಯವಹಾರ ನಡೆಯುತ್ತಿದೆ. ಶೇ. 70 ರಷ್ಟು ಕೃಷಿಕರಿಗೆ ಎಲ್ಲಾ ರೀತಿಯ ಸಹಕಾರ ಜಿಲ್ಲೆಯ ಸಹಕಾರ ಸಂಘಗಳಿಂದ ಆಗುತ್ತಿದೆ.
ಸಹಕಾರ ಕ್ಷೇತ್ರದತ್ತ ಸರ್ಕಾರ ಆದೇಶ ಮಾಡುವುದು ಬಿಟ್ಟು ಸಹಕಾರ ಕ್ಷೇತ್ರದ ಅಭಿವೃದ್ಧಿಗೆ
(ಮೊದಲ ಪುಟದಿಂದ) ಹಣಕಾಸು ಸೇರಿದಂತೆ ಎಲ್ಲಾ ರೀತಿಯ ನೆರವು ನೀಡಬೇಕು ಎಂದು ಹೇಳಿದರು.
ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಗಳ ಮೂಲಕ ವಾರ್ಷಿಕ ವಾಗಿ ಸಾವಿರಾರು ಕೋಟಿ ಹಣ ಖರ್ಚು ಮಾಡುವ ಸರ್ಕಾರ ಸಹಕಾರ ಕ್ಷೇತ್ರಕ್ಕೆ ನೀಡುತ್ತಿರುವ ಕೊಡುಗೆ ಏನು ? ಎಂದು ಬಾಂಡ್ ಗಣಪತಿ ಪ್ರಶ್ನಿಸಿದರು.
ಡಿಸಿಸಿ ಬ್ಯಾಂಕಿನ ಮಾಜಿ ಅಧ್ಯಕ್ಷ ಬಿ.ಡಿ. ಮಂಜುನಾಥ್ ಮಾತನಾಡಿ, ಸಹಕಾರ ಸಂಘದ ಸಪ್ತಾಹಗಳು ಇತ್ತೀಚಿನ ದಿನಗಳಲ್ಲಿ ನೀರಸವಾಗುತ್ತಿವೆ. ಸಪ್ತಾಹದ ಮೂಲ ಉದ್ದೇಶಗಳ ಕುರಿತು ಜನರಿಗೆ ಅರಿವು ಮೂಡಿಸುವ ಕೆಲಸವಾಗಬೇಕು. ಸಹಕಾರ ಸಂಘಗಳ ಮೂಲಕ ನೆರವು ಪಡೆದ ರೈತರು ಅಥವಾ ಸಾರ್ವಜನಿಕರು ಸ್ವಯಂ ಪಾಲ್ಗೊಳ್ಳುವಂತಹ ಹೊಸ ಚಿಂತನೆಗಳನ್ನು ಸಹಕಾರ ಸಂಘಗಳ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿ ರೂಪಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಎಸ್.ಎನ್. ರಾಜರಾವ್, ಕೆ.ಟಿ. ಅರುಣಕುಮಾರ್, ಅಲಮೇಲಮ್ಮ, ಪ್ರಕಾಶ್ ಮೊದಲಾದ ಹಿರಿಯ ಸಹಕಾರಿಗಳನ್ನು ಗೌರವಿಸಲಾಯಿತು.
ರಾಮೇಶ್ವರ ಕೂಡುಮಂಗಳೂರು ಸಹಕಾರ ಸಂಘದ ಅಧ್ಯಕ್ಷ ಕೆ.ಕೆ. ಹೇಮಂತಕುಮಾರ್, ಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿ ನಿರ್ದೇಶಕರಾದ ಬಿ.ಕೆ. ಚಿಣ್ಣಪ್ಪ, ಎಸ್.ಬಿ. ಭರತಕುಮಾರ್, ಉಷಾ ತೇಜಸ್ವಿ, ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಮನು ರಾಮಚಂದ್ರ, ನಿರ್ದೇಶಕರಾದ ಪಿ.ಸಿ. ಅಚ್ಚಯ್ಯ, ಎಚ್.ಎನ್. ರಾಮಚಂದ್ರ, ಪಿ.ಬಿ. ಯತೀಶ್, ರವಿಬಸಪ್ಪ, ಎನ್. ಉಮೇಶ್ ಉತ್ತಪ್ಪ, ಹಾಸನ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಬಿ.ವಿ. ವೀಣಾ ಇದ್ದರು.
ಮದಲಾಪುರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಸ್.ಎನ್. ರಾಜಾರಾವ್ ಅಧ್ಯಕ್ಷತೆ ವಹಿಸಿದ್ದರು. ಪುಷ್ಪಾವತಿ ಪ್ರಾರ್ಥಿಸಿದರು. ಸಹಕಾರ ಯೂನಿಯನ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ಸ್ವಾಗತಿಸಿ, ವಂದಿಸಿದರು.