ಮೈಸೂರು, ನ. 14: ಇಲ್ಲಿನ ಕುವೆಂಪುನಗರದ ಸಿಗ್ಮಾ ಆಸ್ಪತ್ರೆಯಲ್ಲಿ ಹೊಂದಾಣಿಕೆಯಾಗದ ರಕ್ತ ಗುಂಪಿನ ದಾನಿಯಿಂದ ಪಡೆದ ಮೂತ್ರ ಪಿಂಡವನ್ನು ಕಸಿ ಮಾಡುವ ಅಪರೂಪದ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ. ಈ ಅಪರೂಪದ ಶಸ್ತ್ರಚಿಕಿತ್ಸೆಯನ್ನು ಸಂಪೂರ್ಣ ಕೊಡಗು ಮೂಲದ ವೈದ್ಯರೇ ನಡೆಸಿರುವುದು ಜಿಲ್ಲೆಗೂ ಹೆಮ್ಮೆಯ ವಿಷಯವಾಗಿದೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಈ ಗೃಹಿಣಿ ಕಳೆದ ಆರು ತಿಂಗಳಿಂದ ಡಯಾಲಿಸಿಸ್ ಚಿಕಿತ್ಸೆಗೆ ಒಳಗಾಗಿದ್ದು ಶಸ್ತ್ರ ಚಿಕಿತ್ಸೆ ಮೂಲಕ ಇವರಿಗೆ ಬೇರೆ ರಕ್ತದ ಗುಂಪಿನ ದಾನಿಯೊಬ್ಬರ ಕಿಡ್ನಿಯನ್ನು ಯಶಸ್ವಿಯಾಗಿ ಕಸಿ ಮಾಡಲಾಗಿದೆ.
ಆಸ್ಪತ್ರೆಯ ಮೂತ್ರಪಿಂಡ ಕಸಿ ಘಟಕದ ನಿರ್ದೇಶಕ ಡಾ ಕಾವಾಡಿಚಂಡ ಎಂ. ಮಾದಪ್ಪ ಅವರ ನೇತೃತ್ವದಲ್ಲಿ ಮೂತ್ರ ತಜ್ಞರಾದ ಡಾ. ಪೆÇಂಜಾಂಡ ಟಿ. ವಿಪಿನ್ ಕಾವೇರಪ್ಪ, ಡಾ. ದೇಯಂಡ ಸೋಮಣ್ಣ ಹಾಗೂ ಡಾ. ದಯಾನಂದ ಅವರ ತಂಡವು ಈ ಯಶಸ್ವಿ ಶಸ್ತ್ರ ಚಿಕಿತ್ಸೆಯನ್ನು ಮಾಡಿದೆ. ಈ ಕುರಿತು ಮಾತನಾಡಿದ ಆಸ್ಪತ್ರೆಯ ನಿರ್ದೇಶಕ ಕಾವಾಡಿಚಂಡ ಮಾದಪ್ಪ ಅವರು ಸಾಮಾನ್ಯವಾಗಿ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿರುವವರಿಗೆ ರಕ್ತದ ಗುಂಪು ಹೊಂದಾಣಿಕೆಯಾಗುವಂತ ದಾನಿಗಳು ದೊರೆಯುವ ಸಾಧ್ಯತೆ ಕಡಿಮೆ, ಹೀಗಿರುವಾಗ ಹೊಂದಾಣಿಕೆಯಾಗದ ಸಂಬಂಧಿತ ದಾನಿಗಳಿಂದ ಕಿಡ್ನಿ ಕಸಿ ಸಾಧ್ಯವಾದಲ್ಲಿ ರೋಗಿಗಳಿಗೆ ಇದು ಪುನರ್ಜನ್ಮವೇ ಸರಿ. ಕೊರೊನಾ ಸಂದರ್ಭದಲ್ಲಿ ಭಾರೀ ಜಾಗರೂಕತೆ ವಹಿಸಿ ಈ ಚಿಕಿತ್ಸೆ ನಡೆಸಲಾಗಿದೆ ಎಂದರು.
ಈ ರೀತಿಯ ಬೇರೆ ರಕ್ತದ ಗುಂಪಿನ ಕಿಡ್ನಿ ಕಸಿ ಮಾಡುವುದು ವೈದ್ಯಕೀಯ ರಂಗದಲ್ಲಿ ತೀರ ಅಪರೂಪ. ದೇಶದಲ್ಲಿ 2011ಕ್ಕೂ ಮೊದಲು ಇದು ಅಸಾಧ್ಯವೂ ಆಗಿತ್ತು. ಆದರೆ 2011 ರಲ್ಲಿ ಸ್ವೀಡನ್‍ನ ಗ್ಲೈಕೊರೆಕ್ಸ್ ಎಂಬ ಸಂಸ್ಥೆ ಗ್ಲೈಕೊಸಾರ್ಬ್ ಎಬಿಒ ಎಂಬ ಸಾಧನ ವನ್ನು ಮಾರುಕಟ್ಟೆಗೆ ಪರಿಚಯಿಸಿತು. ಈ ಕಂಪೆನಿ ಅಭಿವೃದ್ಧಿಪಡಿಸಿದ ಸಾಧನವು (ಫಿಲ್ಟರ್) ಮೂತ್ರಪಿಂಡದ ಡಯಾಲಿಸಿಸ್‍ನಂತೆಯೇ ಒಂದು ವಿಧಾನವನ್ನು ಬಳಸುತ್ತದೆ ಮತ್ತು ರಕ್ತವನ್ನು ಶುದ್ಧೀಕರಿಸುತ್ತದೆ. ಈ ಸಾಧನವು “ಇಮ್ಯುನೊಆಡ್ಸಪ್ರ್ಷನ್” ಎಂಬ ಕಾರ್ಯವಿಧಾನದಲ್ಲಿ ಕಾರ್ಯನಿರ್ವಹಿಸುತ್ತದೆ, ಕಸಿಗೀಡಾದ ವ್ಯಕ್ತಿಯ ರಕ್ತವು ಮತ್ತೊಂದು ರಕ್ತದ ಗುಂಪಿನ ಅಂಗವನ್ನು ಪ್ರತಿರೋಧಿಸುವ ಆಂಟಿ ಬಾಡೀಸ್(ಪ್ರತಿಕಾಯ)ಗಳನ್ನು ಇದು ನಿಷ್ಕ್ರಿಯಗೊಳಿಸುತ್ತದೆ. ಇದರಿಂದಾಗಿ ಯಾವುದೇ ರಕ್ತದ ಗುಂಪಿನ ವ್ಯಕ್ತಿಯ ಕಿಡ್ನಿ ಯಾವುದೇ ರಕ್ತದ ಗುಂಪಿನ ವ್ಯಕ್ತಿಗೆ ಕಸಿ ಮಾಡಲು ಸಾಧ್ಯವಾಗುತ್ತದೆ. ಈ ತಂತ್ರವನ್ನು ಯಕೃತ್ತು, ಮೂತ್ರಪಿಂಡ, ಶ್ವಾಸಕೋಶ, ಕಾಂಡಕೋಶಗಳು, ಚರ್ಮ ಮತ್ತು ಹೃದಯ ಕಸಿ ಮಾಡುವಿಕೆಗೆ ಬಳಸಬಹುದಾಗಿದೆ. ಈ ತಂತ್ರಜ್ಞಾನ ಬಳಸಿ 2017 ರಲ್ಲಿ ಮೊದಲ ಬಾರಿಗೆ ಮಣಿಪಾಲದ ಕಸ್ತೂರಬಾ ಆಸ್ಪತ್ರೆಯು ಯಶಸ್ವಿ ಕಿಡ್ನಿ ಕಸಿ ಮಾಡಿತ್ತು.
ಈಗ ಕಿಡ್ನಿ ಕಸಿ ರೋಗಿಗೆ ಬಳಸಲಾಗಿರುವ ಫಿಲ್ಟರ್‍ನ್ನು ದೆಹಲಿಯಿಂದ ತರಿಸಲಾಗಿದ್ದು ಇದಕ್ಕೆ 4 ಲಕ್ಷ ರೂಪಾಯಿ ವೆಚ್ಚವಾಗಿದೆ ಎಂದು ಡಾ ಮಾದಪ್ಪ ತಿಳಿಸಿದ್ದು ಒಟ್ಟು ಶಸ್ತ್ರ ಚಿಕಿತ್ಸೆಗೆ 13 ಲಕ್ಷ ರೂಪಾಯಿ ವೆಚ್ಚವಾಗಿದೆ ಎಂದು ಹೇಳಿದರು. ಇಡೀ ರಾಜ್ಯದಲ್ಲಿ ಈವರೆಗೆ ಇಂತಹ 7-8 ಶಸ್ತ್ರ ಚಿಕಿತ್ಸೆ ಮಾತ್ರ ನಡೆದಿದೆ ಎನ್ನಲಾಗಿದೆ. ಈ ಶಸ್ತ್ರ ಚಿಕಿತ್ಸೆಗೆ ಒಳಗಾದ ರೋಗಿಯನ್ನು 10 ದಿನಗಳವರೆಗೆ ನಿಗಾದಲ್ಲಿ ಇರಿಸಲಾಗುತ್ತದೆ. ಯಶಸ್ವಿ ಆಗದಿದ್ದರೆ ಕಿಡ್ನಿ ವಿಫಲಗೊಳ್ಳುತ್ತದೆ ಎಂದು ಮಾದಪ್ಪ ತಿಳಿಸಿದ್ದು ಈಗ ಕಸಿ ಮಾಡಲಾಗಿರುವ ರೋಗಿಯು 12 ದಿನಗಳಿಂದ ಚೇತರಿಸಿಕೊಂಡು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದರು.
-ಕೋವರ್‍ಕೊಲ್ಲಿ ಇಂದ್ರೇಶ್