ಅಮೇರಿಕಾದಲ್ಲಿ ಮಿತಿ ಮೀರಿದ ಕೊರೊನಾ ವಾಷಿಂಗ್ಟನ್, ನ. 14: ಅಮೇರಿಕಾದಲ್ಲಿ ಮೊದಲ ಬಾರಿಗೆ 1.70 ಲಕ್ಷಕ್ಕೂ ಹೆಚ್ಚು ದೈನಂದಿನ ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿವೆ. ಇದೂವರೆಗೆ ವಿಶ್ವದ ಯಾವುದೇ ರಾಷ್ಟ್ರದಲ್ಲಿ ಇಷ್ಟೊಂದು ಅಧಿಕ ಪ್ರಮಾಣದ ದೈನಂದಿನ ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿರಲಿಲ್ಲ. ತಾ. 4 ರಂದು ಅಮೇರಿಕಾದಲ್ಲಿ ದೈನಂದಿನ ಪ್ರಕರಣಗಳ ಸಂಖ್ಯೆ 1 ಲಕ್ಷ ಗಡಿದಾಟಿತ್ತು. ಆ ಬಳಿಕ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇರುವುದು ಆತಂಕಕ್ಕೆ ಕಾರಣವಾಗಿದೆ. ಸಾರ್ವಜನಿಕ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ವರದಿಯ ಪ್ರಕಾರ, ಶನಿವಾರದಂದು ಅಮೇರಿಕಾದಲ್ಲಿ 1,70,000 ಹೊಸ ಪ್ರಕರಣಗಳು ದಾಖಲಾಗಿವೆ. ಪ್ರಸ್ತುತ ಅಮೇರಿಕಾದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 10,728,497ಕ್ಕೆ ಏರಿಕೆಯಾಗಿದೆ ಎಂದು ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ವರದಿ ಮಾಡಿದೆ. ಅಮೇರಿಕಾದ ಪ್ರತೀ ನಗರಗಳಲ್ಲಿಯೂ ಹೆಚ್ಚೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿವೆ. ಇಲಿನಾಯ್ಸ್, ಅಯೋವಾ, ಕಾನ್ಸಾಸ್ ಮತ್ತು ಓಹಿಯೋ ಸೇರಿದಂತೆ ಕನಿಷ್ಟ 10 ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿವೆ. ಅಲ್ಲಿನ ಆಸ್ಪತ್ರೆಗಳಲ್ಲಿ ಪರಿಸ್ಥಿತಿ ಅಪಾಯಮಟ್ಟಕ್ಕೆ ತಲುಪಿದೆ ಎಂದು ಹೇಳಲಾಗುತ್ತಿದೆ.

ಇಬ್ಬರು ಅಗ್ನಿಶಾಮಕ ಸಿಬ್ಬಂದಿ ಸಾವು

ಮಧುರೈ, ನ. 14: ಬೆಂಕಿ ನಂದಿಸಲು ಪ್ರಯತ್ನಿಸುತ್ತಿದ್ದಾಗ ಕಟ್ಟಡ ಕುಸಿದು ಇಬ್ಬರು ಅಗ್ನಿಶಾಮಕ ಸಿಬ್ಬಂದಿ ಮೃತಪಟ್ಟಿರುವ ದಾರುಣ ಘಟನೆ ಶನಿವಾರ ನಡೆದಿದೆ ಎಂದು ಪೆÇಲೀಸರು ತಿಳಿಸಿದ್ದಾರೆ. ಮಧುರೈನಲ್ಲಿ ಹಳೆಯ ಕಟ್ಟಡವೊಂದರಲ್ಲಿ ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ಹೊತ್ತಿಕೊಂಡಿತ್ತು. ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಕಟ್ಟಡ ಕುಸಿದಿದೆ. ಮೃತ ಅಗ್ನಿ ಶಾಮಕ ಸಿಬ್ಬಂದಿ ಕೆ. ಶಿವರಾಜನ್ ಮತ್ತು ಪಿ. ಕೃಷ್ಣಮೂರ್ತಿ ಅವರ ನಿಧನಕ್ಕೆ ಮುಖ್ಯಮಂತ್ರಿ ಪಳನಿಸ್ವಾಮಿ ಅವರು ಸಂತಾಪ ಸೂಚಿಸಿದ್ದು, ಅವರ ಕುಟುಂಬಕ್ಕೆ ತಲಾ ರೂ. 25 ಲಕ್ಷ ಪರಿಹಾರ ಘೋಷಿಸಿದ್ದಾರೆ. ಅಲ್ಲದೆ ಮೃತ ಸಿಬ್ಬಂದಿಯ ಸಂಬಂಧಿಕರೊಬ್ಬರಿಗೆ ಅರ್ಹತೆಯ ಆಧಾರದ ಮೇಲೆ ಸರ್ಕಾರಿ ಕೆಲಸ ನೀಡಲಾಗುವುದು ಎಂದು ಸಿಎಂ ಹೇಳಿದ್ದಾರೆ.