ಕೂಡಿಗೆ, ನ. 13: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆಹೊಸೂರು ಗ್ರಾಮದ ಜೇನುಕಲ್ಲು ಭುವನಗಿರಿ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ತಾಲೂಕು ಕೃಷಿ ಇಲಾಖೆ ವತಿಯಿಂದ ಆತ್ಮ ಯೋಜನೆಯ ಅಡಿಯಲ್ಲಿ ಸಾವಯವ ಕೃಷಿ ಯೋಜನೆಯ ತರಬೇತಿ ಕಾರ್ಯಾಗಾರ ನಡೆಯಿತು.
ಮಡಿಕೇರಿಯ ಕೃಷಿ ವಿಸ್ತರಣಾ ಶಿಕ್ಷಣ ಘಟಕದ ವಿಜ್ಞಾನಿ ಡಾ. ಬಸವಲಿಂಗಯ್ಯ ಸಾವಯವ ಕೃಷಿ ಬೇಸಾಯದ ಬಗ್ಗೆ ಸಮಗ್ರ ಮಾಹಿತಿ ಸಾವಯವ ಘಟಕಗಳ ರಚನೆಯ ಮಾಡುವ ಬಗ್ಗೆ ಮಾಹಿತಿ ಒದಗಿಸಿದರು. ರೈತರ ಜಮೀನಿನಲ್ಲಿ ಇರುವಂತಹ ಎಲೆ ಉದುರುವ ಮರಗಳಿಂದ ಸಾವಯವ ಗೊಬ್ಬರ ತಯಾರಿಸುವ ವಿಧಾನವನ್ನು ಸವಿಸ್ತಾರವಾಗಿ ತಿಳಿಸಿದರು.
ಕುಶಾಲನಗರ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಅರುಣ ಆತ್ಮ ಯೋಜನೆಯ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು ಸರಕಾರ ಕೃಷಿ ಇಲಾಖೆಯ ಮುಖಾಂತರ ನೀಡುವ ವಿವಿಧ ಯೋಜನೆಗಳ ವಿವರಗಳನ್ನು ತಿಳಿಸಿದರು. ಜೇನುಕಲ್ಲು ಭುವನಗಿರಿ ಹಾಲು ಉತ್ಪಾದಕರ ಸಂಘ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ನಿರ್ದೇಶಕರು ಸೇರಿದಂತೆ ಹಲವಾರು ರೈತರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.