ಸೋಮವಾರಪೇಟೆ, ನ. 13: ತಾಲೂಕಿನ ಬೆಟ್ಟದಕೊಪ್ಪ ಮೈಕ್ರೋ ಸ್ಟೇಷನ್‍ವರೆಗೆ ಸರ್ಕಾರಿ ಬಸ್ ಸೇವೆಯನ್ನು ಒದಗಿಸಲು ಕೆಎಸ್‍ಆರ್‍ಟಿಸಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಕಿಕ್ಕರಳ್ಳಿ ಹಾಗೂ ಬೆಟ್ಟದಕೊಪ್ಪ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕಳೆದ 10 ವರ್ಷಗಳಿಂದ ಮಡಿಕೇರಿಯಿಂದ ಬೆಳಿಗ್ಗೆ 8 ಗಂಟೆಗೆ ಹೊರಟು ಮಾದಾಪುರ ಮಾರ್ಗವಾಗಿ ಸೂರ್ಲಬ್ಬಿ, ಕಿಕ್ಕರಳ್ಳಿ, ಬೆಟ್ಟದಕೊಪ್ಪ ಮೈಕ್ರೋ ಸ್ಟೇಷನ್‍ವರೆಗೆ ಕೆಎಸ್‍ಆರ್‍ಟಿಸಿ ಬಸ್ ಸಂಚಾರವಿತ್ತು. ಇದರಿಂದಾಗಿ ಈ ಭಾಗದ ಸಾರ್ವಜನಿಕರಿಗೆ ಹೆಚ್ಚು ಅನುಕೂಲವಾಗಿತ್ತು. ಇದೀಗ ಬಸ್ ಸಂಚಾರ ಸ್ಥಗಿತಗೊಂಡಿರುವದರಿಂದ ಗ್ರಾಮಸ್ಥರಿಗೆ ತೊಂದರೆಯಾಗಿದೆ ಎಂದು ಸ್ಥಳೀಯರಾದ ರಘು, ಬೋಪಯ್ಯ, ಲವ, ನಂಜುಂಡ, ಉತ್ತಪ್ಪ ಸೇರಿದಂತೆ ಇತರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದೀಗ ಕೆಎಸ್‍ಆರ್‍ಟಿಸಿ ಬಸ್ ಕಿಕ್ಕರಳ್ಳಿ ವರೆಗೆ ಮಾತ್ರ ಆಗಮಿಸುತ್ತಿದ್ದು, ಅಲ್ಲಿಂದ ವಾಪಸ್ ಮಂಕ್ಯ, ಹರಗ, ಶಾಂತಳ್ಳಿ ಮಾರ್ಗವಾಗಿ ಸಂಚರಿಸುತ್ತಿದ್ದು, ಇದರಿಂದಾಗಿ ಬೆಟ್ಟದಕೊಪ್ಪ ಗ್ರಾಮಸ್ಥರಿಗೆ ಸಮಸ್ಯೆಯಾಗಿದೆ. ಮೈಕ್ರೋ ಸ್ಟೇಷನ್ ಆಸುಪಾಸಿನಲ್ಲಿ 25ಕ್ಕೂ ಅಧಿಕ ಕುಟುಂಬಗಳು ನೆಲೆಸಿವೆ. ಮುಖ್ಯರಸ್ತೆಯಿಂದ 2 ಕಿ.ಮೀ. ಒಳಭಾಗದಲ್ಲಿರುವ ಮೂಲ ನಿವಾಸಿಗಳು ತೀರಾ ಬಡವರಾಗಿದ್ದು, ಮನೆಯಲ್ಲಿ ವಾಹನದ ಸೌಕರ್ಯವೂ ಇಲ್ಲ. ಈ ಹಿನ್ನೆಲೆ ಈ ಹಿಂದೆ ಇದ್ದಂತೆ ಮೈಕ್ರೋ ಬಳಿಯವರೆಗೆ ಬಸ್ ಸಂಚಾರ ವಿಸ್ತರಿಸಿ, ನಂತರ ಮಂಕ್ಯ, ಹರಗ ಮಾರ್ಗವಾಗಿ ಸಂಚರಿಸಲು ಕ್ರಮವಹಿಸಬೇಕೆಂದು ಆಗ್ರಹಿಸಿದ್ದಾರೆ.

ಈ ಬಗ್ಗೆ ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚುರಂಜನ್ ಅವರೂ ಸಹ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆದು ಗ್ರಾಮಸ್ಥರ ಅನುಕೂಲಕ್ಕೆ ಆದ್ಯತೆ ನೀಡಬೇಕೆಂದು ಒತ್ತಾಯಿಸಿದ್ದರೂ ಕೆಎಸ್‍ಆರ್‍ಟಿಸಿ ಅಧಿಕಾರಿಗಳು ಗಮನ ಹರಿಸಿಲ್ಲ. ತಕ್ಷಣ ಈ ಬಗ್ಗೆ ಗಮನಹರಿಸಿ ಬಸ್ ಸಂಚಾರವನ್ನು ವಿಸ್ತರಿಸಬೇಕೆಂದು ತಾ.ಪಂ. ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ಒತ್ತಾಯಿಸಿದ್ದಾರೆ.