ವೀರಾಜಪೇಟೆ ನ. 13: ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ಎರಡೂವರೆ ವರ್ಷಗಳ ಅವಧಿಯಲ್ಲಿ ಈ ಹಿಂದಿನ ಬಾಕಿ ಸೇರಿದಂತೆ ಒಟ್ಟು 2,14, 33,000 ಬಾಕಿ ಇದ್ದು ಈ ಅವಧಿಯಲ್ಲಿ 1ಕೋಟಿಗೂ ಅಧಿಕ ವಸೂಲಾತಿಯಾಗಿದ್ದರೂ ಇನ್ನು ಆಸ್ತಿ ತೆರಿಗೆ, ನೀರಿನ ಶುಲ್ಕ, ಪರವಾನಗಿ ಶುಲ್ಕ, ಇತರ ತೆರಿಗೆ ಸೇರಿದಂತೆ ಪಟ್ಟಣ ಪಂಚಾಯಿತಿಗೆ ರೂ ಒಂದು ಕೋಟಿ ಎರಡು ಲಕ್ಷದ ಐದು ಸಾವಿರ ತೆರಿಗೆ ಬರಲು ಬಾಕಿ ಇದೆ, ಈ ಭಾರೀ ದೊಡ್ಡ ಮೊತ್ತದ ತೆರಿಗೆ ಬಾಕಿಯಿಂದ ಪಟ್ಟಣ ಪಂಚಾಯಿತಿಯ ಆಡಳಿತ ನಡೆಸುವುದೇ ದುಸ್ತರವಾಗಿದೆ, ಈ ತೆರಿಗೆ ವಸೂಲಾತಿಗಾಗಿ ವಸೂಲಾತಿ ಆಂದೋಲನ ಆರಂಭಿಸಲಾಗಿದೆ ಎಂದು ಮುಖ್ಯಾಧಿಕಾರಿ ಎ.ಎಂ. ಶ್ರೀಧರ್ ತಿಳಿಸಿದರು.ವೀರಾಜಪೇಟೆ ಪಟ್ಟಣದ ಮುಖ್ಯ ರಸ್ತೆ, ಖಾಸಗಿ ಬಸ್ಸು ನಿಲ್ದಾಣದ ಸುತ್ತ ಮುತ್ತ ನಿವಾಸಿಗಳಿಂದ ಅಂಗಡಿ ಪರವಾನಗಿ ಶುಲ್ಕ, ಆಸ್ತಿ ತೆರಿಗೆಯ ವಸೂಲಾತಿ ಆರಂಭಿಸಿದ ಮುಖ್ಯಾಧಿಕಾರಿ ಶ್ರೀಧರ್ ಅವರು ಪಟ್ಟಣ ಪಂಚಾಯಿತಿಯ ಸುಮಾರು 1498 ಉದ್ದಿಮೆದಾರರಲ್ಲಿ ಈ ತನಕ ಒಟ್ಟು 236 ಉದ್ದಿಮೆದಾರರು ಪರವಾನಗಿಯನ್ನು ನವೀಕರಿಸಿದ್ದಾರೆ. 1262 ಮಂದಿ ನವೀಕರಣಗೊಳಿಸದೆ ವ್ಯವಹಾರ ನಡೆಸುತ್ತಿದ್ದಾರೆ.
(ಮೊದಲ ಪುಟದಿಂದ) ನವೀಕರಣಗೊಳ್ಳದ ಪರವಾನಗಿದಾರರಿಗೆ ದಂಡ ಹಾಕಲಾಗುವುದು. ಜೊತೆಗೆ ತಕ್ಷಣದಿಂದಲೇ ಅಂಗಡಿಗೆ ಬೀಗ ಜಡಿಯುವ ಕ್ರಮ ಜರುಗಿಸಲಾಗುವುದು. ಆಸ್ತಿ ತೆರಿಗೆ ರೂ. 28 ಲಕ್ಷ 52 ಸಾವಿರ ಬಾಕಿ ಇದ್ದು ಇದನ್ನು ಮುಂದಿನ 7 ದಿನಗಳಲ್ಲಿ ಪಾವತಿಸದಿದ್ದರೆ ಮನೆಯ ನಲ್ಲಿ ಸಂಪರ್ಕವನ್ನು ಕಡಿತಗೊಳಿಸಲು ಸಿದ್ಧತೆ ನಡೆಸಲಾಗಿದೆ. ನಲ್ಲಿ ನೀರಿನ ಶುಲ್ಕದಲ್ಲಿ ರೂ 46ಲಕ್ಷದಲ್ಲಿ ರೂ 32ಲಕ್ಷದ ಹನ್ನೊಂದು ಸಾವಿರ ಬಾಕಿ ಇದೆ. ತೆರಿಗೆ ವಸೂಲಾತಿ ಆಂದೋಲನ ಇನ್ನು 7ದಿನಗಳ ತನಕ ಮುಂದುವರೆಯಲಿದ್ದು ಮುಂದಕ್ಕೆ ವಸೂಲಾತಿಗೆ ಕಠಿಣ ಕ್ರಮ ಅನುಸರಿಸಲಾಗುವುದು. ಭಾರೀ ಮೊತ್ತದ ತೆರಿಗೆ ಬಾಕಿ ಇಟ್ಟುಕೊಂಡವರಿಗೆ ನೋಟೀಸ್ ನೀಡಲಾಗಿದೆ. ತೆರಿಗೆ ವಸೂಲಾತಿಯಲ್ಲಿ ಯಾರಿಗೂ ಯಾವುದೇ ರೀತಿಯ ಮುಲಾಜಿಲ್ಲ, ಪ್ರಭಾವ ಬೀರಲು ಅವಕಾಶವಿಲ್ಲ ಎಂದು ತಿಳಿಸಿದರು. ಪಟ್ಟಣ ಪಂಚಾಯಿತಿ ವತಿಯಿಂದ ಮೂರು ದಿನಗಳಿಂದ ತೆರಿಗೆ ವಸೂಲಾತಿಯ ಆಂದೋಲನ ಮುಂದುವರೆದಿದ್ದು ಮೂರು ದಿನಗಳ ಅವಧಿಯಲ್ಲಿ ರೂ. ಆರು ಲಕ್ಷದ ಐವತ್ತೊಂಬತ್ತು ಸಾವಿರ ವಸೂಲಾತಿಯಾಗಿದೆ. ಪಟ್ಟಣ ಪಂಚಾಯಿತಿಯಿಂದ ಬಾಡಿಗೆ ಒಪ್ಪಂದದ ಆಧಾರದ ಮೇಲೆ ಕಟ್ಟಡವನ್ನು ಪಡೆದ ಬಾಡಿಗೆದಾರರು ರೂ ಮೂವತ್ತೆಂಟು ಲಕ್ಷ ಒಂಬತ್ತು ಸಾವಿರ ಬಾಡಿಗೆ ಉಳಿಸಿಕೊಂಡಿದ್ದು ಮುಂದಿನ 7ದಿನಗಳೊಳಗೆ ಬಾಕಿ ಬಾಡಿಗೆ ಪಾವತಿಸದ ಬಾಡಿಗೆದಾರರ ಮಳಿಗೆಗಳಿಗೆ ಬೀಗ ಹಾಕಲಾಗುವುದು. ಜೊತೆಗೆ ದಂಡ ವಿಧಿಸಲಾಗುವುದು ಎಂದು ಶ್ರೀಧರ್ ತಿಳಿಸಿದರು.
ವೀರಾಜಪೇಟೆ ಪಟ್ಟಣ ಪಂಚಾಯಿತಿಯ ತೆರಿಗೆ ಬಾಕಿಯಿಂದ ನಿರಂತರ ಆದಾಯಕ್ಕೆ ಧಕ್ಕೆ ಉಂಟಾಗಿದೆ. ತೆರಿಗೆ ವಸೂಲಾತಿಯಲ್ಲಿ ಕಠಿಣ ಕ್ರಮ ವಹಿಸಲು ತೀರ್ಮಾನಿಸಲಾಗಿದೆ. ಪಟ್ಟಣದ ತೆರಿಗೆದಾರರು ಪಟ್ಟಣ ಪಂಚಾಯಿತಿಯೊಂದಿಗೆ ಸಹಕರಿಸಿದರೆ ಮಾತ್ರ ಪಟ್ಟಣ ಪಂಚಾಯಿತಿ ವ್ಯವಸ್ಥಿತ ಆಡಳಿತದೊಂದಿಗೆ ಜನಪರ ಅಭಿವೃದ್ಧಿ ಕಾಮಗಾರಿ ನಿರ್ವಹಿಸಲು ಸಾಧ್ಯವಾಗಲಿದೆ ಎಂದು ಅವರು ತಿಳಿಸಿದರು.