ಕುಶಾಲನಗರ, ನ. 13: ಮನೆಮಗನೆ ಮನೆಯಲ್ಲಿದ್ದ ತಾಯಿಯ ಚಿನ್ನವನ್ನು ಎಗರಿಸಿ ನಕಲಿ ಚಿನ್ನ ತಂದಿಟ್ಟು ಅವಾಂತರ ಸೃಷ್ಟಿಸಿದ ಪ್ರಕರಣವೊಂದು ಕುಶಾಲನಗರದಲ್ಲಿ ನಡೆದಿದೆ. ಇಲ್ಲಿನ ಮುಳ್ಳುಸೋಗೆ ಗ್ರಾ.ಪಂ. ವ್ಯಾಪ್ತಿಯ ಜನತಾ ಕಾಲನಿಯ ನಿವಾಸಿ ಮಹಿಳೆಯೊಬ್ಬರು ತನ್ನ ಮಗಳ ವಿವಾಹಕ್ಕೆಂದು ತುರ್ತು ಹಣಕಾಸಿನ ಅಗತ್ಯತೆಗಾಗಿ ತನ್ನಲ್ಲಿದ್ದ ಅಂದಾಜು 25 ಗ್ರಾಂ ಚಿನ್ನದ ಬಳೆಗಳನ್ನು ಸ್ಥಳೀಯ ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಅಡವು ಇಟ್ಟಿದ್ದರು. ಈ ಸಂಬಂಧ 1 ಲಕ್ಷ ರೂ.ಗಳನ್ನು ಪಡೆದು ಮದುವೆ ಕೂಡ ಮುಗಿದಿತ್ತು. ಅಡವು ಇಟ್ಟ ಒಂದು ತಿಂಗಳ ನಂತರ ಹಣಕಾಸು ಸಂಸ್ಥೆಯಿಂದ ಮಹಿಳೆಗೆ ದೂರವಾಣಿ ಕರೆಯೊಂದು ಬಂದು ನೀವಿಟ್ಟ ಚಿನ್ನ ನಕಲಿ ಎಂಬುದಾಗಿ ಮಾಹಿತಿ ತಿಳಿದ ಬೆನ್ನಲ್ಲೇ ಮಗನ ವಂಚನೆ ಬೆಳಕಿಗೆ ಬಂದಿದೆ.

ತನಗೆ ಹಣಕಾಸಿನ ಅವಶ್ಯಕತೆ ಇದ್ದಾಗ ಹಲವು ಬಾರಿ ಚಿನ್ನ ಅಡವಿಟ್ಟು ಸಾಲ ಪಡೆಯುತ್ತಿದ್ದ ಮಹಿಳೆ ಇತ್ತೀಚೆಗೆ ಸಂಸ್ಥೆಯಿಂದ ಚಿನ್ನ ತಂದು ಮನೆಯಲ್ಲಿಟ್ಟ ಸಂದರ್ಭ ಆಕೆಯ ಪುತ್ರ ಮಾತ್ರ ದೊಡ್ಡದೊಂದು ವಂಚನೆಗೆ ಸಂಚು ಹೂಡಿ ಈ ಚಿನ್ನವನ್ನು ಮನೆಯಿಂದ ಎಗರಿಸಿ ನಂತರ ಅದೇ ಮಾದರಿಯ ನಕಲಿ ಚಿನ್ನದ ಬಳೆಗಳನ್ನು ತಂದು ಇರಿಸಿದ್ದು ತಾಯಿಗೆ ಗೊತ್ತೇ ಆಗಲಿಲ್ಲ. ಇತ್ತ ಮತ್ತೆ ಅಡವಿಟ್ಟ ಸಂದರ್ಭ ಹಣಹಾಸು ಸಂಸ್ಥೆಯವರು ಕೂಡ ತಮ್ಮ ಹಿಂದಿನ ಗ್ರಾಹಕರಾದ ಹಿನೆÀ್ನಲೆಯಲ್ಲಿ ಮತ್ತೆ ಅಡವಿಟ್ಟ ಚಿನ್ನವನ್ನು ಸರಿಯಾಗಿ ಪರೀಕ್ಷೆ ಕೂಡ ಮಾಡದೆ ಸಾಲ ನೀಡಿದ್ದರು. ನಂತರ ಸಂಸ್ಥೆಯ ಮೂಲಕ ಪರಿಶೀಲನೆಗೆ ಕಾಲಕಾಲಕ್ಕೆ ಬರುತ್ತಿರುವ ಪರಿಶೀಲನಾ ತಂಡ ಸಂಸ್ಥೆಯಲ್ಲಿದ್ದ ಎಲ್ಲಾ ಚಿನ್ನವನ್ನು ಪರಿಶೀಲಿಸಿದಾಗ ಮಹಿಳೆ ಅಡವಿಟ್ಟ ಚಿನ್ನ ನಕಲಿ ಎಂಬುದು ಖಚಿತವಾಗಿದೆ. ಪ್ರಾರಂಭದಲ್ಲಿ ಮಹಿಳೆ ಗೊಂದಲದಿಂದ ಹಣಕಾಸು ಸಂಸ್ಥೆಯವರೊಂದಿಗೆ ಬಿರುಸಿನ ಚರ್ಚೆ ನಡೆಸಿದರೂ ನಂತರ ಅಸಲಿ ವಿಷಯ ಬೆಳಕಿಗೆ ಬಂದಿದೆ. ಪ್ರಕರಣ ಸ್ಥಳೀಯ ರಾಜಕೀಯ ಧುರೀಣರ ಮನೆಗೂ ತಲುಪಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದೂ ಆಯಿತು. ಅಂತಿಮವಾಗಿ ತಾಯಿಗೆ ದ್ರೋಹ ಮಾಡಿದ ಮಗ ತಾನು ಮಾಡಿದ ತಪ್ಪನ್ನು ಎಲ್ಲರೊಂದಿಗೆ ಒಪ್ಪಿದ ಬೆನ್ನಲ್ಲೇ ಪ್ರಕರಣಕ್ಕೆ ಸದ್ಯ ಇತಿಶ್ರೀ ಹಾಡಲಾಗಿದೆ. ಬ್ಯಾಂಕಿನಿಂದ ಪಡೆದ ಸಾಲವನ್ನು ಮಹಿಳೆ ಮರುಪಾವತಿಸಿ ನಕಲಿ ಚಿನ್ನವನ್ನು ಹಿಂಪಡೆಯುವಂತಾಗಿದೆÉ. ಕುಶಾಲನಗರ ಮಡಿಕೇರಿ ರಸ್ತೆಯ ಚಿನ್ನದಂಗಡಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ವಂಚಕ ಪುತ್ರ ಸುಂಟಿಕೊಪ್ಪ ಹಣಕಾಸು ಸಂಸ್ಥೆಯಲ್ಲಿ ತಾಯಿಯ ಅಸಲಿ ಚಿನ್ನವನ್ನು ಅಡವಿಟ್ಟು ನಂತರ ಅದನ್ನು ಮಾರಾಟ ಮಾಡಿರುವುದಾಗಿ ಮಾಹಿತಿ ಹೊರಬಿದ್ದಿದೆ. ಕುಶಾಲನಗರದ ರಥಬೀದಿಯಲ್ಲಿರುವ ಫ್ಯಾನ್ಸಿ ಸ್ಟೋರ್ ಒಂದರಲ್ಲಿ ನಕಲಿ ಚಿನ್ನ ಖರೀದಿಸಿರುವ ಬಗ್ಗೆಯೂ ತನಿಖಾ ಹಂತದಲ್ಲಿ ವಿಷಯ ಬಹಿರಂಗವಾಗಿದೆ.

ಇತ್ತ ತಾಯಿಗೆ ವಂಚನೆ ಮಾಡಿದ ಮಗ ತನ್ನ ಸ್ನೇಹಿತರೊಂದಿಗೆ ಸೇರಿ ಸುಂಟಿಕೊಪ್ಪ, ಕುಶಾಲನಗರ ಮತ್ತಿತರ ಜಾಗಗಳಲ್ಲಿ ಇಂತಹ ನಕಲಿ ವ್ಯವಹಾರ ಮಾಡಿರುವ ಶಂಕೆ ವ್ಯಕ್ತಗೊಂಡಿದ್ದು ಇತ್ತೀಚಿನ ದಿನಗಳಲ್ಲಿ ನಕಲಿ ಮತ್ತು ವಂಚನೆಗಳ ಜಾಲಗಳ ಖ್ಯಾತಿಗೆ ಹೆಸರಾಗಿರುವ ಕುಶಾಲನಗರ ಮತ್ತು ಸುತ್ತಮುತ್ತ ವ್ಯಾಪ್ತಿಯಲ್ಲಿ ನಕಲಿ ಚಿನ್ನ ಮಾಡಿಕೊಡುವ ದಂಧೆ ತಲೆ ಎತ್ತಿರುವ ಬಗ್ಗೆ ತಲೆಕೆಡಿಸಿಕೊಳ್ಳಬೇಕಾಗಿದೆ ಎನ್ನುವುದು ಮಾತ್ರ ಸತ್ಯ.

-ಚಂದ್ರಮೋಹನ್