ಕುಶಾಲನಗರ, ನ 13: ಜಾಗತಿಕ ತಾಪಮಾನ ಹೆಚ್ಚಾಗುತ್ತಿದ್ದು ಪರಿಸರ ಸಮತೋಲನ ಕಾಪಾಡುವಲ್ಲಿ ಪ್ರತಿಯೊಬ್ಬರು ಚಿಂತನೆ ಹರಿಸಬೇಕಿದೆ ಎಂದು ಕುಶಾಲನಗರ ಪಪಂ ಅಧ್ಯಕ್ಷ ಬಿ.ಜಯವರ್ಧನ್ ಹೇಳಿದರು.

ಕರ್ನಾಟಕ ರಾಜ್ಯಮಾಲಿನ್ಯ ನಿಯಂತ್ರಣ ಮಂಡಳಿ ಕೊಡಗು ಪ್ರಾದೇಶಿಕ ಕಚೇರಿ, ಕುಶಾಲನಗರ ಪಟ್ಟಣ ಪಂಚಾಯ್ತಿ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿಯ ಸಂಯುಕ್ತಾಶ್ರಯದಲ್ಲಿ ಕುಶಾಲನಗರ ಪಟ್ಟಣದ ಕಾರು ನಿಲ್ದಾಣದ ಬಳಿ ದೀಪಾವಳಿ ಹಬ್ಬದ ಅಂಗವಾಗಿ "ಪರಿಸರ ಸ್ನೇಹಿ ಹಸಿರು ದೀಪಾವಳಿ ಆಚರಣೆ" ಕುರಿತ ಜಾಗೃತಿ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.

"ಪರಿಸರ ಸ್ನೇಹಿ ಹಸಿರು ದೀಪಾವಳಿ ಆಚರಣೆ"ಯ ಮಹತ್ವ ಕುರಿತು ಮಾತನಾಡಿದ ಜಿಲ್ಲಾ ಪರಿಸರ ಜಾಗೃತಿ ಅಭಿಯಾನದ ಸಂಚಾಲಕರೂ ಆದ ಪರಿಸರ ಮಿತ್ರ ಪ್ರಶಸ್ತಿ ಪುರಸ್ಕøತ ಶಿಕ್ಷಕ ಟಿ.ಜಿ.ಪ್ರೇಮಕುಮಾರ್, ದೀಪಾವಳಿ ಹಬ್ಬ ಆಚರಣೆ ಸಂದರ್ಭ ಪಟಾಕಿ ಸಿಡಿತದಿಂದ ಉಂಟಾಗುವ ಅನಾಹುತಗಳು ಹಾಗೂ ಪರಿಸರ ಮಾಲಿನ್ಯದ ದುಷ್ಪರಿಣಾಮಗಳ ಕುರಿತು ಜಿಲ್ಲೆಯಲ್ಲಿ ಕಳೆದ 8 ವರ್ಷಗಳಿಂದ ಶಾಲಾ- ಕಾಲೇಜು ವಿದ್ಯಾರ್ಥಿಗಳು ಹಾಗೂ ಸಮುದಾಯದಲ್ಲಿ ಜಾಗೃತಿ ಮೂಡಿಸಿಕೊಂಡು ಬರಲಾಗುತ್ತಿದೆ ಎಂದರು.

ಹಸಿರು ದೀಪಾವಳಿ ಆಚರಣೆ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದ ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷೆ ಸುರಯ್ಯಬಾನು ಮಾತನಾಡಿ, ಎಲ್ಲರೂ ಇಂತಹ ಪರಿಸರ ಕಾರ್ಯಕ್ರಮಗಳಿಗೆ ಕೈಜೋಡಿಸಬೇಕು ಎಂದರು.

ಹಸಿರು ದೀಪಾವಳಿ ಆಚರಣೆಯ ಮಾಹಿತಿ ಕುರಿತ ಕರಪತ್ರವನ್ನು ಕುಶಾಲನಗರ ಎ.ಪಿ.ಸಿ.ಎಂ.ಎಸ್.ನ ಉಪಾಧ್ಯಕ್ಷ ಟಿ.ಬಿ.ಜಗದೀಶ್ ಬಿಡುಗಡೆಗೊಳಿಸಿದರು.

ದೀಪಾವಳಿ ಸಂದರ್ಭದಲ್ಲಿ ಹಣತೆ ಹಚ್ಚಿ ದೀಪಾವಳಿ ಆಚರಿಸೋಣ ಬನ್ನಿ ಎಂಬ ಘೋಷವಾಕ್ಯದೊಂದಿಗೆ ಪರಿಸರ ಮಾಲಿನ್ಯಕ್ಕೆ ಕಾರಣವಾದ ಪಟಾಕಿ ಸಿಡಿಸುವುದರಿಂದ ಉಂಟಾಗುವ ದುಷ್ಪರಿಣಾಮಗಳು ಹಾಗೂ ಶಬ್ದ ಮತ್ತು ವಾಯು ಮಾಲಿನ್ಯಕ್ಕೆ ಕಾರಣವಾದ ಪಟಾಕಿ ತ್ಯಜಿಸಿ ಹಸಿರು ದೀಪಾವಳಿ ಆಚರಣೆ ಬಗ್ಗೆ ಈ ಸಂದರ್ಭ ಜನ ಜಾಗೃತಿ ಮೂಡಿಸಲಾಯಿತು.

ಪಟ್ಟಣ ಪಂಚಾಯಿತಿ ಸದಸ್ಯ ಎಂ.ಬಿ. ಸುರೇಶ್, ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿಯ ಉಪಾಧ್ಯಕ್ಷ ಎಂ.ಎನ್. ವೆಂಕಟನಾಯಕ್, ಸಹ ಕಾರ್ಯ ಕಾರ್ಯದರ್ಶಿ ಜಿ.ಶ್ರೀಹರ್ಷ, ಪದಾಧಿ ಕಾರಿಗಳಾದ ಎನ್.ಕೆ. ಮಾಲಾದೇವಿ, ಸದಸ್ಯರಾದ ಟಿ.ಬಿ. ಮಂಜುನಾಥ್, ಟಿ.ವಿ. ಸಾಗರ್, ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಕಾರ್ಯದರ್ಶಿ ಎಚ್.ಜಿ.ಕುಮಾರ್ ಇದ್ದರು.

ನಂತರ ಕೋವಿಡ್-19 ರ ಮಾರ್ಗ ಸೂಚಿಯನ್ವಯ ಹಸಿರು ದೀಪಾವಳಿ ಆಚರಣೆ ಕುರಿತ ಕರಪತ್ರಗಳನ್ನು ನಾಗರಿಕರಿಗೆ ವಿತರಿಸಲಾಯಿತು.