ಕುಶಾಲನಗರ, ನ. 12: ಕುಶಾಲನಗರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (ಎಪಿಸಿಎಂಎಸ್) 2020-25ನೇ ಸಾಲಿನ ಅಧ್ಯಕ್ಷರಾಗಿ ಎಂ.ಎನ್. ಕುಮಾರಪ್ಪ ಮತ್ತು ಉಪಾಧ್ಯಕ್ಷರಾಗಿ ಟಿ.ಬಿ.ಜಗದೀಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕುಶಾಲನಗರ ಕೃಷಿ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಚುನಾವಣಾಧಿಕಾರಿ ಎಂ.ಇ.ಮೋಹನ್ ಅವರ ಉಪಸ್ಥಿತಿಯಲ್ಲಿ ಆಯ್ಕೆ ನಡೆಯಿತು.
ಒಟ್ಟು 12 ನಿರ್ದೇಶಕರಲ್ಲಿ 8 ಮಂದಿ ಅವಿರೋಧವಾಗಿ ಆಯ್ಕೆಗೊಂಡಿದ್ದು ಉಳಿದ 4 ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಅವಿರೋಧವಾಗಿ ಎಂ.ಎನ್.ಕುಮಾರಪ್ಪ, ನೀಲಮ್ಮ, ಮಹಮ್ಮದ್ ಸೋಯಲ್, ತಿಲಕ್, ಲತಾ ಗಣಿಪ್ರಸಾದ್, ಕೆದಂಬಾಡಿ ಪ್ರಸನ್ನ, ಆರ್.ಕೆ.ಚಂದ್ರ, ಮೋಹನ್ ಅವರು ಆಯ್ಕೆಗೊಂಡಿದ್ದು, 4 ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕೆ.ಎಸ್.ರತೀಶ್, ನಾಗೇಶ್, ಟಿ.ಬಿ. ಜಗದೀಶ್, ದೊಡ್ಡಯ್ಯ ವಿಜೇತರಾಗಿದ್ದರು.
ಬಿಜೆಪಿ ಬೆಂಬಲಿತ ಸದಸ್ಯರಿಗೆ ಬಹುಮತ ಬಂದಿದ್ದು, ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಅವಿರೋಧವಾಗಿ ನಡೆದಿದೆ.
ಕುಶಾಲನಗರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ವತಿಯಿಂದ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಶೀಥಲೀಕೃತ ಗೋದಾಮು ನಿರ್ಮಾಣಕ್ಕೆ ಚಿಂತನೆ ಹರಿಸಲಾಗಿದೆ ಎಂದು ಸಂಘದ ನೂತನ ಅಧ್ಯಕ್ಷ ಎಂ.ಎನ್.ಕುಮಾರಪ್ಪ ಹೇಳಿದರು. ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಸಂಘದ ಬಂಡವಾಳವನ್ನು ಸದಸ್ಯರ ಮತ್ತು ಸಾರ್ವಜನಿಕರ ಸದುಪಯೋಗಕ್ಕೆ ಬಳಸುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ರೂಪಿಸಲಾಗುವುದು. ಕುಶಾಲನಗರದ ರೈತ ಸಹಕಾರ ಭವನ ಆವರಣದಲ್ಲಿ ಸರಕಾರದ ಅನುದಾನದೊಂದಿಗೆ ಶೀಥಲೀಕೃತ ಗೋದಾಮು ನಿರ್ಮಾಣ ಕಾರ್ಯ ನಡೆಯಲಿದೆ ಎಂದು ಮಾಹಿತಿ ನೀಡಿದರು. ಸದಸ್ಯರ ಅನುಕೂಲಕ್ಕೆ ತಕ್ಕಂತೆ ಕ್ರಿಯಾ ಯೋಜನೆ ರೂಪಿಸಲು ನಿರ್ಧರಿಸಲಾಗುವುದು ಎಂದು ಅವರು ಹೇಳಿದರು.
ನೂತನ ಉಪಾಧ್ಯಕ್ಷರಾಗಿ ಆಯ್ಕೆಗೊಂಡ ಟಿ.ಬಿ.ಜಗದೀಶ್ ಮಾತನಾಡಿ ಎಲ್ಲಾ ಸದಸ್ಯರ ಸಹಕಾರದೊಂದಿಗೆ ಸಂಘದ ಏಳಿಗೆಗಾಗಿ ಶ್ರಮಿಸಲಾಗುವುದು ಎಂದರು.