ಸೋಮವಾರಪೇಟೆ,ನ.12: ಕಳೆದ ಎರಡು ವರ್ಷಗಳ ಅವಧಿಯಲ್ಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿರುವ ಹಲವಷ್ಟು ಕಾಮಗಾರಿಗಳು ಕಳಪೆಯಾಗಿದ್ದು, ಇವುಗಳಿಗೆ ತಕ್ಷಣಕ್ಕೆ ಬಿಲ್ ಪಾವತಿ ಮಾಡಬಾರದು ಎಂದು ಪ.ಪಂ. ಸಾಮಾನ್ಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಪಟ್ಟಣ ಪಂಚಾಯಿತಿ ವಿಶೇಷ ಸಾಮಾನ್ಯ ಸಭೆ ಅಧ್ಯಕ್ಷೆ ನಳಿನಿ ಗಣೇಶ್ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಂದರ್ಭ ಈ ಬಗ್ಗೆ ಚರ್ಚೆಗಳಾಗಿ, ಆಯಾ ವಾರ್ಡ್‍ನ ಸದಸ್ಯರನ್ನು ಗಣನೆಗೆ ತೆಗೆದುಕೊಂಡು ಪರಿಶೀಲಿಸಿ ನಂತರ ಬಿಲ್ ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳಬೇಕೆಂದು ನಿರ್ಣಯ ಕೈಗೊಳ್ಳಲಾಯಿತು.

ಕÀಳೆದ ಎರಡು ವರ್ಷಗಳಿಂದ ನಡೆದಿರುವ ಅನೇಕ ಕಾಮಗಾರಿಗಳು ಕಳಪೆಯಾಗಿದೆ. ಈ ಬಗ್ಗೆ ತನಿಖೆ ಯಾಗಬೇಕು ಎಂದು ಸದಸ್ಯರಾದ ಶೀಲಾ ಡಿಸೋಜ, ಪಿ.ಕೆ. ಚಂದ್ರು ದನಿಗೂಡಿಸಿದರು.

ಕೆಲ ಇಲಾಖೆಗಳ ಮಾಹಿತಿ ಪಂಚಾಯಿತಿಗೆ ಅವಶ್ಯವಿರುವುದರಿಂದ ಮುಂದಿನ ಸಾಮಾನ್ಯ ಸಭೆಗೆ ಸೆಸ್ಕ್, ಪೊಲೀಸ್, ಲೋಕೋಪಯೋಗಿ ಹಾಗೂ ಸರ್ವೆ ಇಲಾಖೆಯ ಅಧಿಕಾರಿಗಳನ್ನು ಕರೆಸಬೇಕು ಎಂದು ನಾಮನಿರ್ದೇಶನ ಸದಸ್ಯ ಎಸ್. ಮಹೇಶ್ ಮನವಿ ಮಾಡಿದರು.

ಎಂ.ಜಿ. ರಸ್ತೆ, ಬಸವೇಶ್ವರ ರಸ್ತೆ, ಬಾಣಾವರ ರಸ್ತೆ ಲೋಕೋಪಯೋಗಿ ಇಲಾಖೆಗೆ ಸೇರಿದ್ದು, ರಸ್ತೆ ಅಗಲೀಕರಣದ ಆತಂಕ ನಿವಾಸಿಗಳಲ್ಲಿ ಇದೆ. ಸೂಕ್ತ ಮಾಹಿತಿಯನ್ನು ಕೊಡಬೇಕಾಗಿದೆ. ಟ್ರಾಫಿಕ್ ಸಮಸ್ಯೆಯನ್ನು ಪೊಲೀಸ್ ಇಲಾಖೆ ಸರಿಪಡಿಸಬೇಕು ಎಂದು ಹೇಳಿದರು.

ಈ ಹಿಂದೆ ನಗರೋತ್ಥಾನ ಯೋಜನೆಯಲ್ಲಿ 1.70ಕೋಟಿ ರೂ. ಬಂದಿದ್ದು ಟೆಂಡರ್ ಆಗಿದೆ. ಇನ್ನು ಕೆಲ ಕಾಮಗಾರಿಗಳು ನಡೆದಿಲ್ಲ ಎಂದು ಇಂಜಿನಿಯರ್ ಸಭೆಗೆ ಮಾಹಿತಿ ನೀಡಿದರು. ಕೂಡಲೆ ಗುತ್ತಿಗೆದಾರರನ್ನು ಕರೆಸಿ, ಸಮಸ್ಯೆಗಳನ್ನು ಆಲಿಸಿ, ಕಾಮಗಾರಿಯನ್ನು ಪ್ರಾರಂಭಿಸುವಂತೆ ಸೂಚನೆ ನೀಡುವಂತೆ ಮುಖ್ಯಾಧಿಕಾರಿ ನಾಚಪ್ಪ ಅವರಿಗೆ ಸಭೆ ಸೂಚಿಸಿತು.

ವಿವಿಧ ಯೋಜನೆಗಳಿಂದ ಬಂದ ಹಣವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಅನುದಾನ ವಾಪಾಸ್ಸಾಗಲು ಬಿಡಬಾರದು ಎಂದು ಸದಸ್ಯರಾದ ಬಿ.ಆರ್.ಮಹೇಶ್, ಶುಭಾಕರ್ ಹೇಳಿದರು. ಕಾಮಗಾರಿ ಮುಕ್ತಾಯವಾದ ನಂತರ ಗುಣಮಟ್ಟ ಪರಿಶೀಲಿಸಿ, ಬಿಲ್ ಪಾವತಿ ಮಾಡು ವಂತಾಗಬೇಕು ಎಂದು ಉಪಾಧ್ಯಕ್ಷ ಸಂಜೀವ ಸಲಹೆ ನೀಡಿದರು. ಪ್ರಾರಂಭದಲ್ಲಿ ಎಲ್ಲಾ ಸದಸ್ಯರು ಪ್ರಮಾಣವಚನ ಸ್ವೀಕರಿಸಿದರು. ಪ್ರಥಮ ಸಭೆಗೆ ಸದಸ್ಯೆ ನಾಗರತ್ನ ಅವರನ್ನು ಹೊರತುಪಡಿಸಿದಂತೆ ಇತರ ಎಲ್ಲಾ ಸದಸ್ಯರು ಭಾಗವಹಿಸಿದ್ದರು.