ಕುಶಾಲನಗರ, ನ. 12: ಕುಶಾಲನಗರದ ಸಮೀಪ ಕೂಡ್ಲೂರು ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಖಾಲಿ ನಿವೇಶನದಲ್ಲಿ ಅಕ್ರಮ ಚಟುವಟಿಕೆಗಳು ನಡೆಯುವುದರೊಂದಿಗೆ ಬಡಾವಣೆ ನಿವಾಸಿಗಳಿಗೆ ತೊಂದರೆ ಯುಂಟಾಗುತ್ತಿದೆ ಎಂದು ಅಲ್ಲಿನ ನಿವಾಸಿಗಳು ಕುಶಾಲನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಅಮರನಾಥ್ ಬಡಾವಣೆಯಲ್ಲಿ ನಿವೃತ್ತ ನೌಕರರು, ಅಧಿಕಾರಿಗಳು ಮನೆಗಳನ್ನು ನಿರ್ಮಿಸಿ ನೆಲೆಸಿದ್ದು, ಎದುರುಗಡೆ ಇರುವ ಖಾಲಿ ನಿವೇಶನಗಳಲ್ಲಿ ಕೆಲವು ಹುಡುಗರು ಆಟವಾಡುವ ನೆಪದಲ್ಲಿ ನಿವಾಸಿಗಳಿಗೆ ಕಿರುಕುಳ ಕೊಡುತ್ತಿದ್ದಾರೆ.

ಆಟದ ನೆಪದಲ್ಲಿ ಮನೆಯ ಕಿಟಕಿ ಗ್ಲಾಸ್‍ಗಳನ್ನು ನಿರಂತರವಾಗಿ ಒಡೆಯುವ ಕಾರ್ಯದಲ್ಲಿ ತೊಡಗಿದ್ದು, ಮನೆಯ ಆವರಣದಲ್ಲಿರುವ ವಾಹನಗಳಿಗೆ ಹಾನಿಯುಂಟು ಮಾಡುತ್ತಿದ್ದಾರೆ.

ಅಪರಿಚಿತರು ಬಂದು ಈ ನಿವೇಶನದಲ್ಲಿ ಕ್ರಿಕೆಟ್ ಆಟವಾಡುತ್ತಿದ್ದು ಪ್ರಶ್ನಿಸಿದ ಸಂದರ್ಭ ಅವಾಚ್ಯ ಶಬ್ಧಗಳನ್ನು ಬಳಸುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಖಾಲಿ ನಿವೇಶನದಲ್ಲಿ ಭಾರೀ ವಾಹನಗಳನ್ನು ನಿಲುಗಡೆಗೊಳಿ ಸುವುದರೊಂದಿಗೆ ಶಬ್ಧ ಮಾಲಿನ್ಯ ಉಂಟು ಮಾಡುತ್ತಿದ್ದಾರೆ. ರಾತ್ರಿ ವೇಳೆ ಮಾದಕ ವಸ್ತುಗಳನ್ನು ಬಳಕೆ ಮಾಡುವ ದಂಧೆ ಕೆಲವು ಯುವಕರಿಂದ ನಡೆಯುತ್ತಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ನಿವಾಸಿಗಳು ತಕ್ಷಣ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ನೆಮ್ಮದಿಯಿಂದ ವಾಸಿಸಲು ಅನಾನುಕೂಲ ಉಂಟಾಗಿದೆ ಎಂದು ಅಲ್ಲಿನ ನಿವಾಸಿ ಬಿ.ವಿ.ವಾಸುದೇವ್ ಮತ್ತಿತರರು ದೂರಿನಲ್ಲಿ ತಿಳಿಸಿದ್ದಾರೆ.

ಖಾಲಿ ನಿವೇಶನಗಳನ್ನು ಬಿಟ್ಟಿರುವ ಜಾಗದ ಮಾಲೀಕರು ಕೂಡ ಈ ಬಗ್ಗೆ ಯಾವುದೇ ಕ್ರಮಕೈಗೊಂಡಿಲ್ಲ. ಬಡಾವಣೆಗೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ಪೊಲೀಸರ ಮುಖಾಂತರ ನಿವಾಸಿಗಳು ಕೋರಿದ್ದಾರೆ.