ಬೆಂಗಳೂರು, ನ. 12: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾಗಿರುವ ಹಾರಂಗಿಯ ಹಿನ್ನೀರಿನ ಪ್ರದೇಶ ಸೇರಿದಂತೆ ನದಿ ಪಾತ್ರದ ಜಾಗಗಳ ಹೂಳು ಎತ್ತುವ ಕಾರ್ಯಕ್ಕೆ ರೂ. 130 ಕೋಟಿ ವೆಚ್ಚದ ಕ್ರಿಯಾಯೋಜನೆ ಸಿದ್ಧವಾಗಿದ್ದು ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಈ ಕುರಿತು ಇಂದು ಬೆಂಗಳೂರಿನಲ್ಲಿ ಸಚಿವ ಸಂಪುಟ ಸಭೆಯಲ್ಲಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಮಾಹಿತಿ ನೀಡಿದರು. ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಈ ಹಿಂದೆ ವಿಧಾನ ಸಭೆಯ ಅಧಿವೇಶನದಲ್ಲಿ ಹೂಳು ಎತ್ತುವ ಕಾರ್ಯದ ಕುರಿತು ಪ್ರಸ್ತಾಪಿಸಿದ್ದರು. ಹೂಳು ಎತ್ತುವುದರಿಂದ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ಹೆಚ್ಚಾಗಲಿರುವುದಾಗಿ ರಂಜನ್ ಅಭಿಪ್ರಾಯ ಪಟ್ಟಿದ್ದರು. ಇದರ ಬಳಿಕ ಕ್ರಿಯಾ ಯೋಜನೆ ಸಿದ್ದ ಮಾಡಲಾಗಿದ್ದು, ಇದೀಗ ಕಾವೇರಿ ನೀರಾವರಿ ನಿಗಮದಿಂದ ರೂ.130 ಕೋಟಿ ವೆಚ್ಚದಲ್ಲಿ ಹೂಳು ಎತ್ತುವ ಕಾಮಗಾರಿ ಪ್ರಾರಂಭಿಸಲು ಅನುಮೋದನೆ ದೊರೆತಿದ್ದು ಸದ್ಯದಲ್ಲೆ ಕಾಮಗಾರಿ ಆರಂಭವಾಗಲಿದೆ ಎಂದು ಮಾಧುಸ್ವಾಮಿ ತಿಳಿಸಿದರು. ಕುಶಾಲನಗರದಲ್ಲಿನ ನ್ಯಾಯಾಲಯಕ್ಕೆ ಸ್ವಂತ ಕಟ್ಟಡ ಇಲ್ಲವಾಗಿದ್ದು ಪ್ರಸ್ತುತ ನಿವೃತ್ತ ಸರಕಾರಿ ನೌಕರರ ಸಂಘದ ಕಟ್ಟಡದಲ್ಲಿ ಬಾಡಿಗೆ ಆಧಾರದಲ್ಲಿ ನ್ಯಾಯಾಲಯದ ಕಲಾಪಗಳು ನಡೆಯುತ್ತಿವೆ. ನ್ಯಾಯಾಲಯದ ಸ್ವಂತ ಕಟ್ಟಡ ನಿರ್ಮಾಣಕ್ಕೆ ರೂ.12.82 ಕೋಟಿ ಬಿಡುಗಡೆಗೊಳಿಸಲಾಗುವುದು. ಕಟ್ಟಡ ನಿರ್ಮಾಣಕ್ಕೆ ಕುಶಾಲನಗರದ ಪ್ರವಾಸಿ ಮಂದಿರದ ಬಳಿಯ 1 ಎಕರೆ ಜಾಗವನ್ನು ಗುರುತಿಸಲಾಗಿದ್ದು ಲೋಕೋಪಯೋಗಿ ಇಲಾಖೆಯಿಂದ ಕಾಮಗಾರಿ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.