ಶನಿವಾರಸಂತೆ, ನ. 12: ಪಟ್ಟಣದ ನಾಡಕಚೇರಿಗೆ ನೂತನ ಕಂದಾಯ ಪರಿವೀಕ್ಷಕರನ್ನು ನೇಮಿಸುವಂತೆ ಕರವೇ ಕಾರ್ಯಕರ್ತರು ಆಗ್ರಹಿಸಿದ್ದಾರೆ. ಕಚೇರಿಯಲ್ಲಿ ಈ ಹಿಂದೆ ಇದ್ದ ಕಂದಾಯ ಪರಿವೀಕ್ಷಕ ನಂದಕುಮಾರ್ ಬಡ್ತಿ ಪಡೆದು ಬೇರೆಡೆಗೆ ತೆರಳಿದ್ದು, ಆ ಸ್ಥಾನ ತೆರವಾಗಿದೆ. 1 ತಿಂಗಳಾದರೂ ತೆರವಾದ ಸ್ಥಾನಕ್ಕೆ ನೂತನ ಕಂದಾಯ ಪರಿವೀಕ್ಷಕರನ್ನು ಸರ್ಕಾರ ನೇಮಕ ಮಾಡಿರುವುದಿಲ್ಲ. ಶನಿವಾರಸಂತೆ ಹೋಬಳಿ ವ್ಯಾಪ್ತಿಯಲ್ಲಿ ಇರುವ ಬಹುತೇಕ ರೈತರ, ಬಡವರ್ಗದವರ, ಕೂಲಿಕಾರ್ಮಿಕರ ಕೆಲಸ ಕಾರ್ಯ ಹಾಗೂ ಪಿಂಚಣಿ ಕೆಲಸಗಳು ಸರಿಯಾದ ಸಮಯಕ್ಕೆ ಆಗುತ್ತಿಲ್ಲ. ಈ ಇಲಾಖೆಗೆ ಖಾಯಂ ಕಂದಾಯ ಪರಿವೀಕ್ಷಕರನ್ನೇ ನೇಮಕ ಮಾಡಬೇಕು ಎಂದು ಕಾರ್ಯಕರ್ತರು ಮನವಿ ಮಾಡಿದ್ದಾರೆ.

15 ದಿನಗಳೊಳಗೆ ಕಂದಾಯ ಪರಿವೀಕ್ಷಕರ ನೇಮಕಾತಿ ಆಗಬೇಕು. ಇಲ್ಲವಾದಲ್ಲಿ ನಾಡ ಕಚೇರಿ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕರವೇ ತಾಲೂಕು ಘಟಕದ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ, ಹೋಬಳಿ ಘಟಕದ ಅಧ್ಯಕ್ಷ ಆನಂದ್, ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್‍ರಿಗೂ ಮನವಿ ಸಲ್ಲಿಸಿರುತ್ತಾರೆ.