ಕಾಳಿ-ಕಾಳನೊಂದಿಗೆ ಕೇಳಿದಳು: ಕಾಳ, ಯಾಕೋ ಬೋರ ಇತ್ತೀಚೆಗೆ ಕಾಣ್ತಾ ಇಲ್ಲ. ಏನಾದ್ರೂ ಕೋವಿಡ್ಡು ವಕ್ರಿಸಿಕೊಂಡು ಸತ್ ಗಿತ್ ಹೋದ್ನಾ? “ಛೆ! ಬಿಡ್ತು ಅನ್ಲೇ! ಕೋವಿಡ್ಡೂ ಇಲ್ಲ, ಗೀವಿಡ್ಡೂ ಇಲ್ಲ. ಈಗಂತೂ ಪಾಪ, ಪೋಲಿಸ್ನೋರೇ ಮದ್ವೆ ಹಾಲ್‍ಗಳಲ್ಲೇ ಮಾಸ್ಕ್ ಇಲ್ಲದೆ ಇರುವೆಗಳಂತೆ ನಿಂತು ಗಣ್ಯಾತಿಗಣ್ಯರು ಫೋಟೊ ಕ್ಲಿಕ್ಕಿಸಿ ಫೇಸ್ ಬುಕ್‍ಗೆ ಹಾಕಿದ್ರೂ ‘ಲೈಕ್’ ಮಾಡೋರ್ನ ನೋಡಿ ಜಾಣ ಮೌನಕ್ಕೆ ಶರಣಾಗಿದ್ದಾರೆ. ಎಲ್ಲಿದೆ ಕೋವಿಡ್ಡು?” ಎಂದು ಕಾಳ ನುಡೀತಿದ್ದಂತೆ ಬೋರ ಇವರ ಮನೆಗೆ ನುಗ್ಗಿದ.

ಓ, ಏನೋ ಬೋರ ಬಾಳ ದಿನಾ ಆಯ್ತು, ಈಗ್ತಾನೆ ನಿನ್ ಕತೆ ಏನೂಂತ ಮಾತಾಡ್ತಿದ್ವು, ಬಸವಳಿದಂತಿದ್ದೀಯ, ಏನ್ಸಮಾಚಾರ? ಎಂದು ಕಾಳಿ ಕೇಳಿದ್ದೇ ತಡ ಬೋರ ಬಡಬಡಿಸಿದ “ ಅಯ್ಯೋ ಈಗ್ತಾನೆ ನಮಾಮಿ ಮೀಟಿಂಗ್ ಮುಗ್ಸ್ಕೊಂಡ್ ಬಂದೆ. ಅಲ್ಲಿ “ಕಾವೇರಿ” ದ ಚರ್ಚೆ ಕೇಳಿ ತಲೆ ಕೆಟ್ಟೋಯ್ತು”. ಕಾಳ:ಏನ್ಲಾ ಅಂತ ಬಿಸಿ ಬಿಸಿ ಚರ್ಚೆ. ಅಲ್ಲೇನಾದ್ರೂ ಜಿಲ್ಲಾ ಉಸ್ತುವಾರಿ ಕೂತಿದ್ರಾ?

ಬೋರ: ಇಲ್ಲಾಪ್ಪ ಉಸ್ತುವಾರಿಗೆ ಮೊನ್ನೆ “ಜರ್ನಲಿಸ್ಟ್” ಒಬ್ಬರು ಕಾವೇರಿ ಸಮಸ್ಯೆ ತಿಳ್ಸ್ದಾಗ “ಅಯ್ಯೋ ಏನ್ಮಾಡೋದು, ನಂಗೂ ಒಂದು ಲಿಮಿಟೇಷನ್ ಇದೆ. ಇಲ್ಲಿ ಪ್ರತಿನಿಧಿಗಳಿರ್ತಾರಲ್ಲ, ಅವ್ರ ಮಾತೂ ಕೇಳ್ಬೇಕಲ್ಲ’’ ಎಂದು ಚೆನ್ನಾಗೇ ಜಾರ್ಕೊಂಡ್ರು, ‘‘ನೀವ್ ಪತ್ರಿಕೆ ಗಿತ್ರಿಕೇಲಿ ಬರ್ದಿದ್ದನ್ನೆಲ್ಲ ನೋಡೋಕೆ ನಂಗೆ ಟೈಂ ಎಲ್ಲಿದೆ, ನಾನ್ ಪತ್ರಿಕೆ ಓದೋ ಹವ್ಯಾಸ ಇಟ್ಕೊಂಡಿಲ್ಲ” ಎಂದು ಸುಲಭ್‍ದಲ್ಲೇ ನುಣ್ಚ್‍ಕೊಂಡು ಸೀದಾ ಭಾಗಮಂಡಲದಿಂದ ರಾಜ್‍ಧಾನಿಗೆ ಸುಯ್ಯಂತ ಹೋಗೇ ಬಿಟ್ರು!

ಕಾಳಿ: ಹಾಗ, ಕರ್ನಾಟಕದ ಕಣ್ಮಣಿ ಕಾವೇರಿ ಸಮಸ್ಯೆ ಆಲಿಸದ ಇಂತಹ ಉಸ್ತುವಾರಿಗೆ ಮತ್ತೆ ಕೊಡಗ್‍ನಲ್ಲೇನು ಕೆಲಸ? ಕಾಳ: ಇಲ್ದೆ ಏನು? ರಾಜ್ಯೋತ್ಸವ ಸಂಭ್ರಮದಲ್ಲಿ ಕನ್ನಡ ಭಾಷೆಗೆ ಎರಡು ವರ್ಷಗಳ ಇತಿಹಾಸವಿದೆ ಎನ್ನುತ್ತ ಎರಡು ಸಾವಿರ ವರ್ಷಗಳ ಬರಹವನ್ನು ಸರಿಯಾಗಿ ಓದಲು ಪಾಪ ಅವರಿಗೆ ತುಂಬಾ ಶ್ರಮವಾಗಿ ಸಾಧ್ಯವಾಗಲಿಲ್ಲ! ಮಹಾನ್ ಕವಿ ಕುಮಾರವ್ಯಾಸನಿಗಿಂತ ಅತ್ಯಂತ ಭಾವುಕ ರಾಜಕಾರಣಿ ಕುಮಾರಸ್ವಾಮಿಯವರ ಹೆಸರು ನೆನಪಾಗಿ ಉಸ್ತುವಾರಿ ಚೆನ್ನಾಗಿಯೇ ಉಚ್ಚರಿಸಿದರಲ್ಲ! ಇದು ಕೊಡಗಿನವರ ಹಣೆ ಬರಹ. ಅದಿರಲಿ ಬಿಡು ಬೋರ.. “ಕಾವೇರಿ” ದ ಮೀಟಿಂಗ್‍ನ ಕತೆ ಸ್ವಲ್ಪ ಬಿಡಿಸಿ ಹೇಳೂ. ಅದ್ಯಾಕೆ ಪತ್ರಿಕೇಲಿ ಬರಲಿಲ್ಲ.

ಬೋರ: ಅದಾ, ಬಲು “ಸೀಕ್ರೆಟ್” ಮೀಟಿಂಗ್. ಹಾಗಾಗಿ ಪತ್ರಿಕೆಯವರಿಗೆ ನಿಷಿದ್ಧ. ಕಾವೇರಿ ವಿಚಾರ ಅವರವರ ಸ್ವಂತದ್ದಾಗುತ್ತಿದೆ. ಅದಕ್ಕೇ ಅಲ್ವೇ ಕಾವೇರಿಯ ಹಿತ ಕಾಯುತ್ತೇವೆ ಎಂದು ಸಮಿತಿ ರಚಿಸಿ ಕೇಂದ್ರಕ್ಕೆ ಒತ್ತಡ ಹೇರಿ ಇಡೀ ಬೆಟ್ಟ ಗುಡ್ಡಗಳನ್ನೆಲ್ಲ ಯಂತ್ರದಲ್ಲ್ಲಿ ಅಗೆದು ಇಂಗಿನ ಪರಿಮಳ ಬರಿಸಿ ಬೆಟ್ಟಗಳನ್ನೆಲ್ಲ ಕೆಲವರು ಜೀರ್ಣಗೊಳಿಸಿದುದು! ಇನ್ನೊಂದೆಡೆ ಪ್ರಶ್ನೆ- ಕವಡೆ ಎಂದು ಲಕ್ಷಗಟ್ಟಲೆ ಖರ್ಚು ಮಾಡಿ ಶಿವ, ಶಿವಾ ಎನ್ನುತ್ತ ಹರನನ್ನೇ ಮೇಲೆತ್ತಿ “ಬಿದ್ದಿರು” ಎಂದು ಎಸೆದಿರುವದು!

ಈ ಬಗ್ಗೆ ಮಡಿಕೇರಿಯಲ್ಲಿ ನಡೆದ ಸಭೆಯಲ್ಲಿ ಚರ್ಚೆ ವಿಚರ್ಚೆ ಆದಾಗ ‘ಕೋಡಿಪಿ’ ನೀಡಿದ ಸಲಹೆ: ಇಂತಹ ಗಂಭೀರ ವಿಚಾರಗಳನ್ನು ಸರಕಾರವೇ ಪರಿಹರಿಸಬೇಕು. ಮುಖ್ಯಮಂತ್ರಿಯವರೇ ಬರಲಿ.

ಇದಕ್ಕೆ ನಮ್ಮ ಮಾನ್ಯ ಜನರಿಂದ ಗೆದ್ದವರ ಉತ್ತರ: “ಅವರವರು ಮಾಡಿದ್ದನ್ನು ಅವರವರು ಅನುಭವಿಸುತ್ತಾರೆ. ಇದಕ್ಕೆಲ್ಲ ಸರಕಾರ, ಮುಖ್ಯ ಮಂತ್ರಿ ಯಾಕೆ?”

ಇದರರ್ಥ: ಅಂದರೆ, ಕಾವೇರಿ ಸಮಸ್ಯೆ ಬೆಂಕಿಯಂತೆ ಹಾಗೇ ಇರಲಿ, ಇಂಗು ಗುಂಡಿಗಳೆಲ್ಲ ಆಳ ಜಾಸ್ತಿಯಾಗಿ ಮತ್ತೆ ಬೆಟ್ಟಗಳು ಉರುಳುತ್ತಿರಲಿ, ಭಗ್ನ ಶಿವಲಿಂಗ ಎಲ್ಲಾದರೂ ಬಿದ್ದಿರಲಿ, ನಮಗೇಕೆ ಈ ಉಸಾಬರಿ . ಬೇಡಪ್ಪಾ ಬೇಡ ಎಂದು ಮನಸ್ಸ್ಸಿನಲ್ಲೇ ತವಕಿಸುತ್ತ ಮೆಲ್ಲನೆ ಜಾರುತ್ತ ಪ್ರತಿನಿಧಿ ಕುರ್ಚಿಯಿಂದ ಇಳಿದೇ ಬಿಟ್ಟರು!. “ಬಂದ ದಾರಿಗೆ ಸುಂಕವಿಲ್ಲ” ಎನ್ನುತ್ತ ಎಲ್ಲರೂ ಅಬ್ಬಾ ಸದ್ಯ ಸಭೆ ಮುಗ್ದೇ ಹೋಯು,್ತ ಕಾವೇರಿಯನ್ನು ಸ್ಮರಿಸಿದೆವೆಲ್ಲ ಸಾಕು, ಸುಮ್ಮನೆ ಶ್ರಮ ಏಕೆ ಪಡಬೇಕು ಎಂದು ಭಾವಿಸಿಕೊಳ್ಳುತ್ತ ನಿರಾಳರಾದರು. “ಕಾವೇರಿ” ದ ಸಭೆ ತಣ್ಣಗಾಯಿತು. ಕುಳಿತಿದ್ದವರೆಲ್ಲ ‘ನಮಾಮಿ’ ‘ಅಮ್ಮ ‘ಕಾವೇರಿ ಎಂದು ಸಭೆಯಿಂದ ಎದ್ದು ಹೊರಟ ಬಳಿಕ ನೀರವ ಮೌನ.

ಇತ್ತ ಉಸ್ತುವಾರಿಯೂ “ಕಾವೇರಿಗೆ ಕುಟುಂಬ ಸಹಿತ ಹೋಗುತ್ತೇನೆ. ‘ಮಂಡೆ ಬಿಸಿ” ಯಾಗುವ ಸಮಸ್ಯೆಯನ್ನು ಮಾತ್ರ ತಲೆ ಪಟ್ಟಿಗೆ ಹಚ್ಚದಿರಿಯಪ್ಪಾ, ನನಗೂ 69 ಆಯಿತು. ಇಂತಹ ಗಂಭೀರ ವಿಚಾರಗಳನ್ನು ನಂಗೇಗಪ್ಪ ತರ್ತೀರಿ? ಬೆಂಗಳೂರಿನ ಮನೆಗಳ್ಗೆ ಕಾವೇರಿ ಜಲ ನಿಲ್‍ದಿದ್ರೆ ಅಷ್ಟೇ ಸಾಕು , ಮಿಕ್ಕ ಸಮಸ್ಯೆ ನಮ್ಗೇಕೆ ಬೇಕು. ನೀವೇ ಎಲ್ಲ ಪರಿಹರ್ಸಿಕೊಳ್ಳಿ” ಎನ್ನುವ ನಿರ್ಲಿಪ್ತತೆಯಲ್ಲಿದ್ದಾರೆ, ನಿಜಕ್ಕೂ ಆಡಳಿತ ಎಂದ್ರೆ ಹೀಗೆ ಇರ್ಬೇಕು ನೋಡ್ಲಾ ಎಂದು ಬೋರ ನುಡಿದಾಗ, ಕಾಳ ತಲೆದೂಗಿದ. ಹಾಗಿದ್ರೆ ಇತ್ತ ನಮ್ಮ ಜನರಿಂದ ಗೆದ್ದವರ ಕತೆ ಏನು ಎಂದು ಕಾಳಿ ಸಂಶಯಪಟ್ಟಳು. ಛೆ, ನಿತ್ಯ ಸಭೆ, ಗಿಭೆ, ಉದ್ಘಾಟನೆ ಎಲ್ಲ ಇರ್ವಾಗ ಅವ್ರ್ರಿಗಾದ್ರೂ ಸಮ್ಯ ಎಲ್ಲಿದೆ? ಮುಂದಿನ ಮಳೆಗಾಲ್‍ದ್‍ವರೆಗೆ ಕಾಯ್ತಾರಪ್ಪ, ಮತ್ತೆ ಬೆಟ್ಟ ಬಿದ್ರೆ ಎನ್. ಡಿ. ಆರ್ ಎಫ್; ಎಸ್. ಡಿ. ಆರ್. ಎಫ್ ಇರೋದ್ಯಾಕ್ಲ ಅವ್ರಿಗೂ ಕೆಲ್ಸ ಬೇಡ್ವಾ? ಎಂದು ಕಾಳ ಸಮಾಧಾನಿಸಿದ. ಜೊತೆಗೆ ಶಿವ ಲಿಂಗದ ಕೋಪ ತಾಪ ಹೆಚ್ಚಾದರೆ ಏನ್ಮಾಡೊದು ಎನ್ನುವ ಕಾಳಿಯ ಪ್ರಶ್ನೆಗೆ ಅದ್ಕೆ ತಂತ್ರಿ ಬರ್ತಾರೆ, ಶಾಂತಿ ಶಾಂತಿ ಎನ್ತಾರೆ. ನಾವೂ ಓಂ ಶಾಂತಿ ಎಂದ್ಬಿಡೋಣ ಎಂದು ಕಾಳ ಸಂತೈಸಿದ.

ಬೋರ: ಹಾಗಿದ್ದರೆ, ಕೊಡಗಿನ ಜನತೆಗೆ ಕಾವೇರಿ ಬೇಡ್ವೇ? ಭಕ್ತಿ-ಶ್ರದ್ಧೆ ಕೇವಲ ಆಡಂಬರವಾಗ್ಬಾರ್ದು? ಸಂಕ್ರಮಣ ಕಾಲ ಬಂದಾಗ ಎಲ್ರಿಗೂ ತಾಪ ಏರುತ್ತೆ. ಎಲ್ರಿಗೂ ಕಾವೇರಿ ಬೇಕು. ಮತ್ತೆ ಎಲ್ರ ಬ್ಯಾಟ್ರಿ ಚಾರ್ಜ್ ಡಲ್. ಕಾವೇರಿ, ಅಗಸ್ತ್ಯೇಶ್ವರ ಹರ ಹರಾ... ನಮ್ಮ ಜನ್ರನ್ನ ಎಬ್ಬ್ಬಿಸಪ್ಪ . ನಮ್ಮ ಕ್ಷೇತ್ರ ಉಳಿಸಪ್ಪ, ಹೋರಾಟಕ್ಕೆ ಎಳಸಪ್ಪ. ಕಾವೇರಿ ಕ್ಷೇತ್ರದ ಹಿಂದಿನ ಅಧಿಕಾರಿ ಕೋಟಿ ವ್ಯವಹಾರ ನಡೆಸಿದ ಸರದಾರ. ಯೋಜನೆಗಳಿಗೆ ಹಣ ಖರ್ಚು ಮಾಡಿದ ಧೀರ, ಹಮ್ಮೀರ. ಕೊಟ್ಟಿಲ್ಲ ಇನ್ನೂ ಎಲ್ಲ ಲೆಕ್ಕಾಚಾರ, ಬಿಲ್ಗಳೆಲ್ಲ ಬಾಕಿಯಿದೆ ಋಣಭಾರ. ಈಗಿನ ಅಧಿಕಾರಿ ಮೈಸೂರಿಗೆ ಹೋಗುವದಾದರೆ ಅವರಿಗೆ ಕಾರು ಕಳುಹಿಸಿ ಬರಿಸಿಕೊಳ್ಳುತ್ತಾರಪ್ಪ ಆ ಪುಣ್ಯಾತ್ಮ. ಅವರನ್ನು ‘ಪ್ಲೀಸ್’ ಮಾಡಿಕೊಂಡು ಲೆಕ್ಕಾಚಾರ ಖತಂ ಮಾಡುವ ಹುನ್ನಾರದ ಧರ್ಮಾತ್ಮ! ಆಹ, ಇದಲ್ಲವೇ ನಮ್ಮ ಧರ್ಮ ಕ್ಷೇತ್ರಗಳ ಆಡಳಿತ ಮಹಾತ್ಮೆ, ಇದೆಲ್ಲ ಕೇಳುವದು ಬಿಟ್ಟು ಕಾಳ, ನೀನ್ಯಾಕೊ ಬೇರೆ ಹೋರಾಟಕ್ಕಿಳ್ದಿದೀಯ, ನಮ್ಮಲ್ಲಿ ಒಗ್ಗಟ್ಟಿಲ್ಲ ಕಣೊ, ಸುಮ್ಮ್ನೆ ಗುರ್ ಗುರ್ ಎನ್ತಿರ್ತೀವಿ, ಆದರೆ ಇಂತಾ ಲೆಕ್ಕಚಾರ ಕೊಡದೋರ ಬಗ್ಗೆ ಗುಟರ್ ಎನ್ಬೇಕು ಕಣೊ, ಇನ್ನಾದ್ರೂ ನೀನು, ಕಾಳಿ ಸೇರಿ ಗುಂಪುಗೂಡಿ “ಕಾವೇರಮ್ಮ ಜೈ” ಎಂದು ಇಳಿರೋ, ಕೆಲಸ ಏನು ನಡೆದಿದೆ ಎಂದು ನೋಡ್ರೋ, ಎಷ್ಟು ಖರ್ಚಾಗಿದೆ ನಮ್ಮ ಮಾತಾಯಿ ಹೆಸರ್ನಲ್ಲಿ ಎಂದು ಕೇಳ್ರೋ ಎಂದು ಬೋರ ಭಾಷಣ ಬಿಗಿದಿದ್ದೇ ಬಿಗಿದಿದ್ದು. ಕಾಳ ಕಾಳಿ ಇಬ್ಬರೂ ಮಾಯ!

ಜಿಲ್ಲಾ ಮೇಡಂ ಗೆ ಇದು ಗೊತ್ತಿಲ್ವೆ ಎಂದು ಬೋರ ಮೇಡಂನ ಕಾಣ್ಲಿಕ್ಕೆ ಹೊರಟ. ಅಷ್ಟ್ರಲ್ಲಿ ಕೆಲ್ಸ ಮಾಡಿ ಬಿಲ್ ಹಣ ಸಿಗದ “ಎಕ್ಸ್” ಸಿಕ್ಕಿ ಮೇಡಂಗೆ ಎಲ್ಲ ಗೊತ್ತಾಗಿದೆ. ಅದ್ಕೆ ಬಿಲ್ ಹಣ “ಹೆಲ್ಡಪ್” ಮಾಡ್ಸಿದಾರೆ ಬೋರ ಎಂದ. ಕೊನೆಗೆ ಬೋರ ಅಗಸ್ತ್ಯೇಶ್ವರನ ಕಡೆ ತಿರ್ಗಿ ಹೇಳ್ದ: ಅಪ್ಪ, ನಿನ್ನನ್ನು ನೆಲಕ್ಕೆ ಬೀಳಿಸಿದ್ದಲ್ಲಿಂದ ಒಮ್ಮೆ ಎದ್ದು ಬಾ, ಬ್ರಹ್ಮಗಿರಿ, ಗಜಗಿರಿಗಳೇ ನಿಮ್ಮನ್ನು ಇಂಗು ಎನ್ನುವ ಗುಂಡಿಗೆ ಬೀಳಿಸಿ “ಇಂಗು ತಿಂದು ಮಂಗ’’ನಂತಾದವರನ್ನು ಜಾಡಿಸಿರಿ; ನಿಮ್ ಉದರ ಬಗೆದದ್ದನ್ನು ಬಗೆ ಹರಿಸಲು ಜನರಿಗಾಗಿ ಗೆದ್ದವರನ್ನು ಕುಂಭಕರ್ಣ ನಿದ್ರೆಯಿಂದ ಈಗಲೇ ಏಳಿಸ್ರಪ್ಪ, ಕಾವೇರಮ್ಮೆ, ನಿನ್ ಹೆಸ್ರೇಳಿ ನಡ್ದಿರುವ ಕೆಲ್ಸಗಳ ಪಕ್ಕ ಲೆಕ್ಕ ಕೊಟ್ಟು ಕೆಲ್ಸಗ್ಳೆಲ್ಲ ಸರಿ ಮಾಡ್ಸಲು ಒಂದು ಸಣ್ಣ “ ಪವರ್” ತೋರಿಸಮ್ಮ ಎನ್ನುತ್ತ ಬೋರ ಏಕಾಂಗಿಯಾಗಿ ಮನೆಗೆ ಮರಳಿದ.

- ಎಂಪರರ್